

ಚನ್ನಗಿರಿ: ಗ್ರಾಮ ಆಡಳಿತ ಅಧಿಕಾರಿಗಳ ಸಮಸ್ಯೆ ಮತ್ತು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಸಂಘ ತಾಲೂಕು ಘಟಕದ ವತಿಯಿಂದ ಸೋಮವಾರ ತಾಲೂಕು ಕಚೇರಿ ಎದುರು ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಯಿತು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಸಂಘದ ಜಿಲ್ಲಾ ಉಪಾಧ್ಯಕ್ಷ ಶಿವಕುಮಾರ್ ಮಾಳಿಗೇರ್ ಮಾತನಾಡಿ, ಮೊಬೈಲ್ ವೆಬ್ ತಂತ್ರಾಂಶ ಕಾರ್ಯ ಮಾಡುವ ಮತ್ತು ಸಿ ವೃಂದದವರ ಹತ್ತುಪಟ್ಟು ಕೆಲಸ ಮಾಡುವ ಗ್ರಾಮಾಡಳಿತ ಅಧಿಕಾರಿಗಳಿಗೆ ತಾಂತ್ರಿಕ ಹುದ್ದೆಗಳಿಗೆ ನೀಡುವಷ್ಟೇ ವೇತನ ನಿಗದಿ ಮಾಡಬೇಕು. ಜತೆಗೆ ಸುಸಜ್ಜಿತವಾದ ಕಚೇರಿ, ಟೇಬಲ್, ಕುರ್ಚಿ, ಅಲೈಕಾ, ಮೊಬೈಲ್ ಪೋನ್ ಸಿಯುಜಿ ಸಿಮ್ ಡೇಟಾ, ಲ್ಯಾಪ್ಟ್ಯಾಪ್, ಪ್ರಿಂಟರ್ ಹಾಗೂ ಸ್ಕ್ಯಾನರ್ ನೀಡಬೇಕು ಎಂದರು.
ಮೊಬೈಲ್ ತಂತ್ರಾಂಶದ ವಿಚಾರವಾಗಿ ಆಗಿರುವ ಎಲ್ಲ ಅಮಾನತುಗಳನ್ನು ಕೂಡಲೇ ಹಿಂಪಡೆಯಬೇಕು, ರಾಜ್ಯದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಪದೋನ್ನತಿ ನೀಡಬೇಕು. ಅಂತರ್ ಜಿಲ್ಲಾ ವರ್ಗಾವಣೆಯ ಕೆಸಿಎಸ್ಆರ್ ನಿಯಮ 16(ಎ) ರ ಉಪಖಂಡ (2) ಅನ್ನು ಮರುಸ್ಥಾಪಿಸಿ ಎಲ್ಲ ಇಲಾಖೆಗಳಲ್ಲಿ ಇರುವಂತೆ ಕಂದಾಯ ಇಲಾಖೆಯಲ್ಲೂ ವರ್ಗಾವಣೆಗಾಗಿ ವಿಶೇಷ ಮಾರ್ಗಸೂಚಿ ರಚಿಸಬೇಕು ಎಂದರು.
ರಾಜ್ಯಾದ್ಯಂತ ಆಧಾರ್ ಸೀಡಿಂಗ್ ಪ್ರಕ್ರಿಯೆಯಲ್ಲಿ ಪತ್ತೆಯಾಗಿರುವ ಸುಮಾರು 51.5 ಲಕ್ಷ ಖಾತೆದಾರರ ಪಹಣಿ ದಾಖಲೆಗಳನ್ನು ಅಭಿಯಾನ ಮಾದರಿಯಲ್ಲಿ ವಾರಸುದಾರರ ಹೆಸರುಗಳಿಗೆ ವಾರಸುದಾರರ ಪ್ರಮಾಣಪತ್ರ, ಮರಣಪತ್ರ, ಇತರೆ ದಾಖಲೆಗಳಿಲ್ಲದ ಪೌತಿಖಾತೆ ದಾಖಲಿಸುವಂತೆ ಪೌತಿಖಾತಾ ಆಂದೋಲನಕ್ಕೆ ಚಾಲನೆ ನೀಡುತ್ತಿರುವುದನ್ನು ಕೈಬಿಡಬೇಕು. ಕ್ಷೇತ್ರ ಮಟ್ಟದಲ್ಲಿ ಕರ್ತವ್ಯ ನಿರ್ವಹಿಸುವಾಗ ಜೀವಹಾನಿಯಾದರೆ ಆಡಳಿತ ಅಧಿಕಾರಿ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ನೀಡಬೇಕು. ಪೊಲೀಸ್ ಇಲಾಖೆಯಲ್ಲಿರುವಂತೆ ನೂರಾರು ಕೆಲಸಗಳನ್ನು ನಿರ್ವಹಿಸುವ ಕಂದಾಯ ಇಲಾಖೆಯ ಎಲ್ಲ ನೌಕರರಿಗೆ ಒಂದು ತಿಂಗಳ ವೇತನವನ್ನು ಹೆಚ್ಚುವರಿ ಮಾಡಬೇಕು ಎಂದರು.
ಸಂಘದ ತಾಲೂಕು ಅಧ್ಯಕ್ಷೆ ರೇಷ್ಮಾ, ಉಪಾಧ್ಯಕ್ಷ ಕುಮಾರನಾಯ್ಕ, ಗೌರವಾಧ್ಯಕ್ಷ ರಾಜುನಾಯ್ಕ, ಟಿ.ಎಸ್. ಚಂದ್ರಪ್ಪ, ತಿಮ್ಮೇಶ್, ಶ್ರೀನಿವಾಸ್, ಶಾಂತಕುಮಾರಿ ಇದ್ದರು.