

ಚಿಕ್ಕೋಡಿ: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ತಾಲೂಕು ವ್ಯಾಪ್ತಿಯ ಗ್ರಾಮ ಆಡಳಿತ ಅಧಿಕಾರಿಗಳು ತಹಸೀಲ್ದಾರ್ ಕಾರ್ಯಾಲಯ ಎದುರು ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಮುಷ್ಕರ ಮಂಗಳವಾರ 2ನೇ ದಿನ ಪೂರೈಸಿ 3ನೇ ದಿನಕ್ಕೆ ಕಾಲಿಟ್ಟಿತು.
ಗ್ರಾಮ ಆಡಳಿತಾಧಿಕಾರಿಗಳ ತಾಲೂಕು ಸಂಘದ ಅಧ್ಯಕ್ಷ ಮಲ್ಲಪ್ಪ ಹಟ್ಟಿ ಮಾತನಾಡಿ, 18 ತಂತ್ರಾಂಶಗಳನ್ನೊಳಗೊಂಡ ಮೊಬೈಲ್ ಆ್ಯಪ್ ಹೊರೆ ಮತ್ತು ವೆಬ್ ಅಪ್ಲಿಕೇಷನ್‌ಗಳ ಮೂಲಕ ಆಗುತ್ತಿರುವ ಸಮಸ್ಯೆ, ಇಲಾಖೆಯಿಂದ ಅಭಿವೃದ್ಧಿಪಡಿಸಿರುವ 17ಕ್ಕೂ ಅಧಿಕ ಮೊಬೈಲ್, ವೆಬ್ ತಂತ್ರಾಂಶಗಳ ಮೂಲಕ ಕರ್ತವ್ಯ ನಿರ್ವಹಿಸಲು ಒತ್ತಡ ಹೇರುತ್ತಿರುವುದನ್ನು ಖಂಡಿಸಿ ಸೆಪ್ಟಂಬರ್‌ನಲ್ಲಿ ರಾಜ್ಯಾದ್ಯಂತ ಮುಷ್ಕರ ಮಾಡಲಾಗಿತ್ತು. ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಗಿತ್ತು. ಆದರೆ, ಇಲ್ಲಿಯವರೆಗೆ ಭರವಸೆ ಈಡೇರಿಸದ ಹಿನ್ನೆಲೆಯಲ್ಲಿ 2ನೇ ಹಂತದ ಮುಷ್ಕರ ಕೈಗೊಂಡಿದ್ದೇವೆ ಎಂದರು.
ತಂತ್ರಾಂಶಗಳ ನಿರ್ವಹಣೆಗೆ ಅವಶ್ಯಕ ಸಾಧನ ಒದಗಿಸದೇ, ಕರ್ತವ್ಯ ನಿರ್ವಹಿಸಲು ಒತ್ತಡ ಹೇರುತ್ತಿರುವುದರಿಂದ ಗ್ರಾಮ ಆಡಳಿತ ಅಧಿಕಾರಿಗಳ ಸಾವು-ನೋವುಗಳು ಸಂಭವಿಸುತ್ತಿವೆ. ಮಾನಸಿಕ ಹಾಗೂ ದೈಹಿಕವಾಗಿ ತೊಂದರೆಯಾಗುತ್ತಿದೆ. ಆದ್ದರಿಂದ ವಿವಿಧ ಬೇಡಿಕೆಗಳು ಈಡೇರುವವರೆಗೂ ಹೋರಾಟ ನಿರಂತರವಾಗಿ ಇರಲಿದೆ ಎಂದರು.
ಉಪಾಧ್ಯಕ್ಷ ಮನೋಜ ಕಾಂಬಳೆ, ಪ್ರಧಾನ ಕಾರ್ಯದರ್ಶಿ ಮಣಿಪ್ರಸಾದ ಕಂಠಿಮಠ, ಖಜಾಂಚಿ ಕಲ್ಲಿನಾಥ ಶಾಸಿ , ಪಿ.ಎಸ್.ಜಾಡರ, ಆರತಿ ಕಮತೆ, ಸವಿತಾ ಶಿರಗಾಂವೆ, ಎನ್.ಎಂ.ಬಿರಾದಾರಪಾಟೀಲ, ಅನಿಲ ತಳಂದಗೆ, ಅಶ್ವಿನಿ ಶಿವಶಿಂಪಿ ಇತರರಿದ್ದರು.