ಗುಡಿಸಲು ಧ್ವಂಸಗೊಳಿಸಿದವರ ವಿರುದ್ಧ ಕ್ರಮಕ್ಕೆ ಒತ್ತಾಯ

09 TKE 1,1
ಎಚ್.ರಂಗಾಪುರದಲ್ಲಿ ಗುಡಿಸಲುಗಳಿಗೆ ಬೆಂಕಿ ಹಚ್ಚಿ ದವರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳ ಬೇಕು ಎಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.
Published on

ತರೀಕೆರೆ: ಎಚ್.ರಂಗಾಪುರ ಗ್ರಾಮದ ಸರ್ವೇ ನಂ.14ರ ಜೈ ಭೀಮ್ ನಗರದಲ್ಲಿ ಗುಡಿಸಲು ನಿರ್ಮಿಸಿ ವಾಸವಾಗಿದ್ದ ನಿವಾಸಿಗಳನ್ನು ಒಕ್ಕಲೆಬ್ಬಿಸುವ ಪ್ರಯತ್ನದಲ್ಲಿ ಅವರ ಗುಡಿಸಲು ಧ್ವಂಸಗೊಳಿಸಿ ಬೆಂಕಿ ಇಟ್ಟು , ಅ ಜಾಗದಲ್ಲಿ ಅಡಕೆ ಮತ್ತು ತೆಂಗಿನ ಸಸಿ ನೆಟ್ಟಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಪದಾಧಿಕಾರಿಗಳು ಪಟ್ಟಣದ ಮಿನಿ ವಿಧಾನ ಸೌಧದ ಎದುರು ಕೈಗೊಂಡಿದ್ದ ಅಹೋರಾತ್ರಿ ಧರಣಿ ಶುಕ್ರವಾರ ಅಂತ್ಯಗೊಂಡಿದೆ.
ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಪದಾಧಿಕಾರಿಗಳು ಮುಷ್ಕರ ಕೈಗೊಂಡಿದ್ದ ಸ್ಥಳಕ್ಕೆ ತಹಸೀಲ್ದಾರ್ ವಿ.ಎಸ್.ರಾಜೀವ್ ಭೇಟಿ ನೀಡಿ, ಎಚ್.ರಂಗಾಪುರದ ಸರ್ವೇ ನಂ.14ರಲ್ಲಿರುವ 15 ಎಕರೆ ಪ್ರದೇಶದಲ್ಲಿ 500ಕ್ಕೂ ಹೆಚ್ಚು ನಿವೇಶನ ರಹಿತರು ಗುಡಿಸಲು ನಿರ್ಮಿಸಿ ನೆಲೆಸಿದ್ದ ಜಾಗದಲ್ಲಿ ಪ್ರಭಾವಿಗಳು ಅಡಕೆ ಮತ್ತು ತೆಂಗಿನ ಸಸಿ ನೆಟ್ಟುರುವುದನ್ನು 15 ದಿನಗಳೊಳಗೆ ತೆರವುಗೊಳಿಸಿ ಅಲ್ಲಿ ಗುಡಿಸಲು ಮರು ನಿರ್ಮಾಣಕ್ಕೆ ಅವಕಾಶ ಮಾಡಿಕೊಡುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಧರಣಿ ನಿರತರು ಮುಷ್ಕರ ಅಂತ್ಯಗೊಳಿಸಿದರು.
ಚಿಕ್ಕಮಗಳೂರು ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಜಿಲ್ಲಾ ಸಂಚಾಲಕ ಮರ್ಲೆ ಅಣ್ಣಯ್ಯ, ಚಿಕ್ಕಮಗಳೂರು ತಾಲೂಕು ಪ್ರಧಾನ ಸಂಚಾಲಕ ಮಂಜುನಾಥ್, ಅಹಿಂದ ಪ್ರಮುಖ ಎಂ.ನರೇಂದ್ರ, ತರೀಕೆರೆ ತಾಲೂಕು ಸಂಘಟನಾ ಸಂಚಾಲಕ ಎಚ್.ಎಸ್.ರಾಜಪ್ಪ, ಪದಾಧಿಕಾರಿಗಳಾದ ಜೆ.ಮಧುಕುಮಾರ್, ಮೌಂಟ್ ಬ್ಯಾಟನ್, ರಮೇಶ್, ಕುಮಾರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net