

ಯಲ್ಲಾಪುರ: ತಾಲೂಕಿನ ಉಮ್ಮಚಗಿಯಿಂದ 33 ಕೆವಿ ವಿದ್ಯುತ್ ತಂತಿಯನ್ನು ಕಾತೂರಿಗೆ ಏತ ನೀರಾವರಿ ಸಲುವಾಗಿ ಸಂಪರ್ಕಿಸುವ ಸಂಬಂಧ ಕಳೆದ ಮೂರು ವರ್ಷಗಳ ಹಿಂದೆ ಅರಣ್ಯ ಇಲಾಖೆಯಿಂದ ಅನುಮತಿ ಪಡೆಯದೆ ಅಂದಾಜು 300 ಕ್ಕೂ ಹೆಚ್ಚು ಮರ-ಗಿಡಗಳನ್ನು ಕಡಿಯಲಾಗಿದೆ ಎಂದು ಆರ್‌ಟಿಐ ಕಾರ್ಯಕರ್ತ ಧೀರಜ್ ತಿನ್ನೇಕರ ಆರೋಪಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 33 ಕೆವಿ ವಿದ್ಯುತ್ ಲೈನ್ ಹಾದು ಹೋಗುವ ಮಾರ್ಗದಲ್ಲಿ ಬೀಟೆ, ನೀಲಗಿರಿ ಇತ್ಯಾದಿ ಬೆಲೆ ಬಾಳುವ ಮರಗಳನ್ನು ಅರ್ಧದಷ್ಟು ಕಡಿಯಲಾಗಿದೆ. ಮರಗಳ ಮಾರಣ ಹೋಮ ಮಾಡಿದ್ದರೂ ಅರಣ್ಯ ಇಲಾಖೆಯ ಅಧಿಕಾರಿಗಳು ಮೌನ ವಹಿಸಿದ್ದಾರೆ. ಈ ಬಗ್ಗೆ ಮಾಹಿತಿ ಕೇಳಿದಾಗ ಅರಣ್ಯ ಇಲಾಖೆಯಿಂದ ಮರ ಕಡಿಯಲು ನಾವು ಅನುಮತಿ ಕೊಟ್ಟಿಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಅನುಮತಿ ಪಡೆಯದೇ ಕಡಿದ ಮರಗಳನ್ನು ಮರಮುಟ್ಟುಗಳ ಸಂಗ್ರಾಹಾಲಯಕ್ಕೆ ಕಳುಹಿಸಿಲ್ಲ. ಹಾಗಾದರೆ ಕಡಿದ ಮರಗಳು ಏನಾದವು, ಈ ಅಕ್ರಮಕ್ಕೆ ಹೊಣೆ ಯಾರು ಎಂದು ಪ್ರಶ್ನಿಸಿದರು.
ಈ ಕುರಿತು ಅರಣ್ಯ ಇಲಾಖೆಯ ಮೇಲಧಿಕಾರಿಗಳಿಗೆ ಐದಾರು ತಿಂಗಳ ಹಿಂದೆಯೇ ಮನವಿ ಕೊಟ್ಟರೂ ಯಾವುದೇ ತನಿಖೆ ಮಾಡಿಲ್ಲ. ಈ ಬಗ್ಗೆ ಇಲಾಖೆಯ ಅಧಿಕಾರಿಗಳು ಸೂಕ್ತ ತನಿಖೆ ನಡೆಸಿ ಮರ ಕಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.