ಕಾಳಸಂತೆಕೋರರ ವಿರುದ್ಧ ಕ್ರಮಕ್ಕೆ ಆಗ್ರಹ

DSC_1274
Published on


ಮೈಸೂರು: ರಸಗೊಬ್ಬರ ಅಕ್ರಮ ದಸ್ತಾನು ಮಾಡಿಕೊಂಡು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವ ರಸಗೊಬ್ಬರ ಅಂಗಡಿ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದಿಂದ ಕಾಡಾ ಕಚೇರಿ ಬಳಿ ಗುರುವಾರ ಪ್ರತಿಭಟನೆ ನಡೆಸಲಾಯಿತು.


ಜಿಲ್ಲೆಯ ಹುಣಸೂರು ತಾಲೂಕಿನ ಹೊಸೂರು ಗೇಟ್‌ನಲ್ಲಿರುವ ಮೇಘ ಟ್ರೇಡರ್ಸ್‌ನವರು ಯೂರಿಯಾ ಮತ್ತು ಇತರ ರಸಗೊಬ್ಬರವನ್ನು ಕೇರಳಕ್ಕೆ ಸಾಗಣೆ ಮಾಡಿ ಮಾರಾಟ ಮಾಡುತ್ತಿದ್ದಾರೆ. ರಸಗೊಬ್ಬರವನ್ನು ಅಕ್ರಮ ದಾಸ್ತಾನು ಮಾಡಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ ಎಂದು ಆಯೋಪಿಸಿದರು.


ಕಳಪೆ ಮುಸುಕಿನ ಜೋಳದ ಬೀಜವನ್ನು ರೈತರಿಗೆ ನೀಡಿ ಫಸಲು ನಷ್ಟಮಾಡಿದ್ದಾರೆ. ಈ ಹಿಂದೆ ಇವರು ಬೇರೆಯವರ ಹೆಸರಿನಲ್ಲಿ ಲೈಸೆನ್ಸ್ ಪಡೆದು ರಸಗೊಬ್ಬರ ವ್ಯವಹಾರ ನಡೆಸುತ್ತಿದ್ದರು. ಶಿಸ್ತುಕ್ರಮ ಜರುಗಿಸಿ ಲೈಸೆನ್ಸ್ ರದ್ದುಪಡಿಸಲಾಗಿದೆ. ಈ ಗೊಬ್ಬರದ ಅಂಗಡಿಯ ಅಕ್ರಮ ವ್ಯವಹಾರವನ್ನು ರೈತರು ಪ್ರಶ್ನೆ ಮಾಡದಂತೆ ಭಯದ ವಾತಾವರಣ ನಿರ್ಮಾಣ ಮಾಡಿದ್ದಾರೆ. ಪ್ರಶ್ನಿಸಿದವರ ಮೇಲೆ ಗೂಂಡಾಗಳಿಂದ ಬೆದರಿಕೆ ಹಾಕಿಸುತ್ತಾರೆ ಎಂದು ಆರೋಪಿಸಿದರು.


ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹೊಸೂರು ಕುಮಾರ್ ಮಾತನಾಡಿ, ಕಳೆದ ವಾರ ಅಂಗಡಿಯ ಹತ್ತಿರ ಹೋಗಿ ಹೆಚ್ಚಿನ ಬೆಲೆಗೆ ಗೊಬ್ಬರ ಮಾರಾಟ ಮಾಡುತ್ತಿರುವ ಬಗ್ಗೆ ಸಂಘಟನೆಗೆ ದೂರುಗಳು ಬಂದಿವೆ. ರೈತರಿಗೆ ಮೋಸ ಮಾಡದೇ ನಿಗದಿತ ಬೆಲೆಯಲ್ಲಿ ಮಾರಾಟ ಮಾಡಿ ಎಂದು ಕೇಳಿದಾಗ ಗಲಾಟೆ ಮಾಡಿದ್ದಾರೆ. ಈ ಸಂಬಂಧ ದೂರು ದಾಖಲಾದರೂ ಕೃಷಿ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು.
ದೂರು ನೀಡಿ 20 ದಿನಗಳಾದರೂ ಯಾವುದೇ ರೀತಿಯ ತನಿಖೆ ನಡೆದಿಲ್ಲ. ಹುಣಸೂರಿನ ಡಿಡಿ ಮತ್ತು ಎಡಿ ಹೊರತುಪಡಿಸಿ ದಕ್ಷ ಅಧಿಕಾರಿಗಳಿಂದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಕೃಷಿ ಅಧಿಕಾರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ಪ್ರಸನ್ನ ಎನ್.ಗೌಡ, ಅಶ್ವತ್ಥನಾರಾಯಣ್ ರಾಜೇ ಅರಸ್, ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ಹೊಸಕೋಟೆ ಬಸವರಾಜು, ಜಿಲ್ಲಾ ಮಹಿಳಾ ಅಧ್ಯಕ್ಷೆ ನೇತ್ರಾವತಿ, ಪಿ.ಮರಂಕಯ್ಯ, ಆನಂದೂರು ಪ್ರಭಾಕರ್, ಮಹಾದೇವನಾಯಕ, ಬೆಂಕಿಪುರ ಚಿಕ್ಕಣ್ಣ, ಮಲ್ಲೇಶ್, ಶಿರಮಳ್ಳಿ ಸಿದ್ದಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net