ಆಂಬುಲೆನ್ಸ್‌ನಲ್ಲೆ ಹೆರಿಗೆ ಮಾಡಿಸಿದ ಸಿಬ್ಬಂದಿ

mkg
Published on

ಜಗಳೂರು: ತುಂಬು ಗರ್ಭಿಣಿಯನ್ನು ಆಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಸಾಗಿಸುತ್ತಿದ್ದ ಸಂದರ್ಭ ಹೆರಿಗೆ ನೋವು ಹೆಚ್ಚಾಗಿ, ಮಾರ್ಗಮಧ್ಯದಲ್ಲೇ ವಾಹನ ನಿಲ್ಲಿಸಿ ಅರೆವೈದ್ಯಕೀಯ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆ ಸುಸೂತ್ರವಾಗಿ ಹೆರಿಗೆ ಮಾಡಿಸಿದ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ.
ತಾಲೂಕಿನ ಗೌರಿಪುರ ಹೊಸೂರು ಗ್ರಾಮದ ಚೌಡಮ್ಮ ಅವರಿಗೆ ಶುಕ್ರವಾರ ರಾತ್ರಿ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಆಂಬುಲೆನ್ಸ್‌ನಲ್ಲಿ ಜಗಳೂರು ಆಸ್ಪತ್ರೆಗೆ ತೆರಳುವ ಮಾರ್ಗಮಧ್ಯೆ ನೋವು ಹೆಚ್ಚಾಗಿದ್ದರಿಂದ ಎಚ್ಚೆತ್ತ ಅರೆವೈದ್ಯಕೀಯ ಸಿಬ್ಬಂದಿ ಎನ್. ಚೌಡಪ್ಪ ಅವರು ರಸ್ತೆಯಲ್ಲೇ ವಾಹನ ನಿಲ್ಲಿಸಿ ಚೌಡಮ್ಮಗೆ ಹೆರಿಗೆ ಮಾಡಿಸಿದ್ದಾರೆ.
ಆಂಬುಲೆನ್ಸ್ ಚಾಲಕ ಹನುಮಂತ ಹಾಗೂ ಆಶಾ ಕಾರ್ಯಕರ್ತೆ ಶ್ವೇತಾ ಅವರು ಸಹಕಾರ ನೀಡಿದ್ದಾರೆ. ಚೌಡಮ್ಮ ಗಂಡು ಮಗುವಿಗೆ ಜನ್ಮ ನೀಡಿದ್ದು, ಅವರನ್ನು ಜಗಳೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ತಾಯಿ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net