ಸ್ವಾವಲಂಬಿ ಜೀವನಕ್ಕೆ ಯೋಜನೆ ತಲುಪಿಸಿ

ಕಂಪ್ಲಿಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ತಾಪಂ ಇಒ ಆರ್.ಕೆ.ಶ್ರೀಕುಮಾರ್ ಮಾತನಾಡಿದರು. ಪ್ರಮುಖರಾದ ಎನ್.ಪಾರ್ವತಿ, ಅಪರಂಜಿ, ಮಾರೇಶ್, ಈರಣ್ಣ, ಬಸವನಗೌಡ ಇತರರಿದ್ದರು.
ಕಂಪ್ಲಿಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ತಾಪಂ ಇಒ ಆರ್.ಕೆ.ಶ್ರೀಕುಮಾರ್ ಮಾತನಾಡಿದರು. ಪ್ರಮುಖರಾದ ಎನ್.ಪಾರ್ವತಿ, ಅಪರಂಜಿ, ಮಾರೇಶ್, ಈರಣ್ಣ, ಬಸವನಗೌಡ ಇತರರಿದ್ದರು.
Published on

ಕಂಪ್ಲಿ: ಮಹಿಳೆಯರ ಸ್ವಾವಲಂಬಿ ಜೀವನಕ್ಕೆ ಸರ್ಕಾರದ ಯೋಜನೆಗಳನ್ನು ನಿಗಧಿತ ಅವಧಿಯೊಳಗೆ ಅರ್ಹ ಫಲಾನುಭವಿಗಳಿಗೆ ತಲುಪಿಸಬೇಕು ಎಂದು ತಾಪಂ ಇಒ ಆರ್.ಕೆ.ಶ್ರೀಕುಮಾರ್ ಹೇಳಿದರು.

ತಾಪಂ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ (ಎನ್‌ಆರ್‌ಎಲ್‌ಎಂ) ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಬಡ ಕುಟುಂಬಗಳಿಗೆ ಲಾಭದಾಯಕ ಸ್ವ-ಉದ್ಯೋಗ, ಕೌಶಲಪೂರ್ಣ ಆದಾಯದ ಉದ್ಯೋಗಾವಕಾಶ ಒದಗಿಸಲು ಗ್ರಾಮೀಣ ಪ್ರದೇಶದಲ್ಲಿ 467 ಮಹಿಳಾ ಸ್ವ-ಸಹಾಯ ಸಂಘಗಳ ರಚನೆ ಗುರಿ ಹೊಂದಿದೆ.

ಈಗಾಗಲೇ 224 ಸಂಘ ರಚಿಸಲಾಗಿದೆ. ಉಳಿದ ಸಂಘಗಳ ರಚನೆಗೆ ಮುಂದಾಗಬೇಕು. ಮಹಿಳೆಯರಿಗೆ ಬ್ಯಾಂಕ್ ಲಿಂಕ್ಡ್ ಯೋಜನೆ, ಸಾಲ, ತರಬೇತಿ, ವಿವಿಧ ಇಲಾಖೆಗಳ ಒಗ್ಗೂಡುವಿಕೆ ಕಾರ್ಯಕ್ರಮಗಳನ್ನು ತಲುಪಿಸುವಲ್ಲಿ ಶೇ.100 ಗುರಿ ಸಾಧಿಸಬೇಕು. ನರೇಗಾದಲ್ಲಿ 100 ದಿನ ಕೆಲಸ ಮಾಡಿದ ಕಾರ್ಮಿಕರಿಗೆ ಉನ್ನತಿ ಯೋಜನೆಯಡಿ ಜೀವನೋಪಾಯಕ್ಕೆ ಕೌಶಲ ತರಬೇತಿ, ಬಳ್ಳಾರಿಯ ಕೆನರಾ ಬ್ಯಾಂಕ್ ಗ್ರಾಮೀಣ ಅಭಿವೃದ್ಧಿ ತರಬೇತಿ ಸಂಸ್ಥೆಯಿಂದ ಮಹಿಳೆಯರ ಆಸಕ್ತಿಗೆ ಅನುಗುಣವಾಗಿ ಸ್ವ-ಉದ್ಯೋಗ ತರಬೇತಿ ಯೋಜನೆಗಳನ್ನು ಅರ್ಹರಿಗೆ ತಲುಪಿಸುವಂತೆ ಸಲಹೆ ನೀಡಿದರು.

ಸಭೆಯಲ್ಲಿ ಮುಖ್ಯಪುಸ್ತಕ ಬರಹಗಾರರು, ಸಂಪನ್ಮೂಲ ವ್ಯಕ್ತಿಗಳು, ಕೃಷಿ ಸಖಿ, ಪಶು ಸಖಿ, ಹಣಕಾಸು ಸಾಕ್ಷರತೆ ವ್ಯಕ್ತಿಗಳು ಸಂವಾದ ನಡೆಸಿದರು. ಎನ್‌ಆರ್‌ಎಲ್‌ಎಂ ತಾಲೂಕು ವ್ಯವಸ್ಥಾಪಕಿ ಎನ್.ಪಾರ್ವತಿ, ಎಡಿಪಿಆರ್ ಅಪರಂಜಿ, ಜಿಪಂ ಡಿಎಂಐಎಸ್ ಮಾರೇಶ್, ನಾರಿ(ಕ್ಲಿಪ್)ಯೋಜನೆಯ ಜಿಲ್ಲಾ ಸಂಯೋಜಕ ಈರಣ್ಣ, ಎಬಿಪಿ ಸಂಯೋಜಕ ಬಸನಗೌಡ, ರಾಜೀವ್‌ಗಾಂಧಿ ಫೆಲೋಷಿಪ್ ಯೋಜನಾಧಿಕಾರಿ ಸಲ್ಮಾ, ತಾಲೂಕು ಒಕ್ಕೂಟದ ಅಧ್ಯಕ್ಷೆ ರೇಣುಕಮ್ಮ, ಕಾರ್ಯದರ್ಶಿ ಪುಷ್ಪಾವತಿ, ಗ್ರಾಪಂ ಒಕ್ಕೂಟದ ಅಧ್ಯಕ್ಷರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net