

ವಿಜಯವಾಣಿ ಸುದ್ದಿಜಾಲ ಧಾರವಾಡ
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್. ಪಾಟೀಲ ಅಧ್ಯಕ್ಷತೆಯಲ್ಲಿ ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಮತ್ತು ಸಾಂಸ್ಥಿಕ ಕಾರ್ಯ ವಿಧಾನಗಳು ಹಾಗೂ ಪರಿಣಾಮಕಾರಿಯಾಗಿ ಜಾರಿಗೊಳಿಸುವ ಕುರಿತು ಪ್ರಗತಿ ಪರಿಶೀಲನೆ ಸಭೆ ಜರುಗಿತು.
ಎಸ್.ಆರ್. ಪಾಟೀಲ ಮಾತನಾಡಿ, ಗ್ಯಾರಂಟಿ ಯೋಜನೆ ಬಗ್ಗೆ ಅಧಿಕಾರಿಗಳು ಗಮಹರಿಸಿ, ಜನರಿಗೆ ತಲುಪಿಸುವ ಕಾರ್ಯ ಮಾಡಬೇಕು. ಕೆಲ ಭಾಗಗಳಲ್ಲಿ ಗ್ಯಾರಂಟಿ ಯೋಜನೆ ಸರಿಯಾಗಿ ತಲುಪದಿರುವ ಬಗೆಗೆ ದೂರುಗಳು ಬಂದಿದ್ದು, ಅಂತಹ ದೂರುಗಳನ್ನು ಪರಿಶೀಲಿಸಬೇಕು ಎಂದರು.
ಜಿಪಂ ಸಿಇಒ ಸ್ವರೂಪ ಟಿ.ಕೆ. ಮಾತನಾಡಿ, ಹಳ್ಳಿಯಲ್ಲಿ ಕೆಲಸ ಮಾಡುವಂತಹ ಶಿಕ್ಷಕಿಯರಿಗೆ, ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಬಸ್ ನಿಲ್ದಾಣದಲ್ಲಿ ಮಹಿಳೆಯರಿದ್ದರೂ ಬಸ್ ನಿಲುಗಡೆ ಮಾಡದಿರುವಂತಹ ದೂರುಗಳು ಬರುತ್ತಿದ್ದು, ಅಧಿಕಾರಿಗಳು ಅದನ್ನು ಗಮನಿಸಿ ಸರಿಯಾದ ಕ್ರಮ ಜರುಗಿಸಬೇಕು ಎಂದರು.
ಯುವನಿಧಿ ಯೋಜನೆ ಬಗ್ಗೆ ಹೆಚ್ಚಿನ ಪ್ರಚಾರ ಮಾಡಿ, ಫಲಾನುಭವಿಗಳಿಗೆ ತಲುಪಿಸುವ ಕೆಲಸ ಮಾಡಬೇಕು. ಡಿಜಿಟಲ್ ಮಾಧ್ಯಮದ ಬಳಕೆ ಹೆಚ್ಚಾಗಿರುವುದರಿಂದ ಯುವನಿಧಿ ಯೋಜನೆ ಬಗ್ಗೆ ಡಿಜಿಟಲ್ ಮಾಧ್ಯಮಗಳಲ್ಲಿ ಹೆಚ್ಚಾಗಿ ಪ್ರಚಾರ ಮಾಡಿ ತಲುಪಿಸುವ ವ್ಯವಸ್ಥೆ ಮಾಡಬೇಕು ಎಂದರು.
ಪ್ರಾಧಿಕಾರದ ಉಪಾಧ್ಯಕ್ಷರಾದ ಮುರಗಯ್ಯ ವಿರಕ್ತಮಠ, ಅಬ್ದುಲ್ ರಶೀದ ಬೋಳಾಬಾಹಿ, ರತ್ನಾ ತೇಗೂರಮಠ, ಜಿಲ್ಲಾ ಮಟ್ಟದ ಅಧಿಕಾರಿಗಳು, ಸದಸ್ಯರು, ಇತರರು ಇದ್ದರು.