ಅಲ್ಪಸಂಖ್ಯಾತರಿಗೆ ಯೋಜನೆ ತಲುಪಿಸಿ : ಅಧಿಕಾರಿಗಳಿಗೆ ಅಲ್ಪಸಂಖ್ಯಾತರ ಆಯೋಗ ನಿರ್ದೇಶನ

WhatsApp Image 2025-01-21 at 2.45.08 PM
Published on

ಮೈಸೂರು: ಅಲ್ಪಸಂಖ್ಯಾತರ ಅಭಿವೃದ್ಧಿಗೆ ಸರ್ಕಾರಗಳು ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ಈ ಯೋಜನೆಗಳ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಬೇಕು ಎಂದು ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ನಿಸಾರ್ ಅಹಮ್ಮದ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಅಲ್ಪಸಂಖ್ಯಾತರ ಅಭಿವೃದ್ಧಿ ಕುರಿತು ಆಯೋಜಿಸಿದ್ದ ಜಿಲ್ಲಾ ಮಟ್ಟದ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಲ್ಪಸಂಖ್ಯಾತರ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಹುದ್ದೆಗಳನ್ನು ಭರ್ತಿ ಮಾಡಬೇಕು. ಸರ್ಕಾರಿ ಉರ್ದು ಶಾಲೆಗಳಲ್ಲಿ ಎಷ್ಟು ಮಕ್ಕಳು ಶಾಲೆ ತೊರೆದಿದ್ದಾರೆ? ಅದಕ್ಕೆ ಕಾರಣ ಏನು ಎಂಬ ಕುರಿತು ಶಿಕ್ಷಣ ಇಲಾಖೆಯ ಅಧಿಕಾರಿಗಳು ಸರ್ವೇ ಮಾಡಬೇಕು. ಶಾಲೆ ತೊರೆದ ಮಕ್ಕಳನ್ನು ಶಾಲೆಗೆ ತರಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದರು.

ಜಿಲ್ಲಾ ಉದ್ಯೋಗ ಮತ್ತು ವಿನಿಮಯ ಕೇಂದ್ರದ ವತಿಯಿಂದ ವಿವಿಧ ಕಂಪನಿ ಹಾಗೂ ಕಾರ್ಖಾನೆಗಳಿಗೆ ಅಗತ್ಯವಿರುವ ಹುದ್ದೆಗಳ ನೇಮಕಾತಿ ಬಗ್ಗೆ ಮಾಹಿತಿ ಪಡೆದು ಆಸಕ್ತಿ ಇರುವ ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸಿಕೊಡಬೇಕು. ತೋಟಗಾರಿಗೆ ಇಲಾಖೆಯಲ್ಲಿ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ, ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಗಳಡಿ ಅಲ್ಪಸಂಖ್ಯಾತರಿಗೆ ಇರುವ ಸೌಲಭ್ಯಗಳನ್ನು ಅರ್ಹರಿಗೆ ನೀಡಬೇಕು. ಅಲ್ಪಸಂಖ್ಯಾತರು ಕೃಷಿ ಮಾಡುತ್ತಿರುವ ಸಂಖ್ಯೆಯ ಮಾಹಿತಿಯನ್ನು ಪಡೆದುಕೊಂಡು ಅವರಿಗೆ ಸೌಲಭ್ಯ ನೀಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಅಲ್ಪ ಸಂಖ್ಯಾತ ಮಕ್ಕಳಿಗೆ ವಿದ್ಯಾರ್ಥಿ ವೇತನ ಸಕಾಲದಲ್ಲಿ ದೊರೆಯಬೇಕು, ವಿದ್ಯಾರ್ಥಿ ನಿಲಯದ ವ್ಯವಸ್ಥೆ ಕಲ್ಪಿಸಬೇಕು. ಅಲ್ಪಸಂಖ್ಯಾತರ ವಿದ್ಯಾರ್ಥಿ ನಿಲಯಗಳಲ್ಲಿ ಉತ್ತಮ ಗುಣಮಟ್ಟದ ಆಹಾರ ಹಾಗೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಅಲ್ಪಸಂಖ್ಯಾತ ಫಲಾನುಭವಿಗಳಿಗೆ ಬ್ಯಾಂಕ್‌ಗಳು ಸರಳವಾಗಿ ಸಾಲ ಮಂಜೂರಾತಿ ಮಾಡಬೇಕು. ಈ ಬಗ್ಗೆ ಲೀಡ್ ಬ್ಯಾಂಕ್ ವ್ಯವಸ್ಥಾಪಕರು ಕ್ರಮ ವಹಿಸಬೇಕು ಎಂದು ನಿರ್ದೇಶನ ನೀಡಿದರು.

ಅಲ್ಪಸಂಖ್ಯಾತರ ಆಯೋಗದ ಕಾರ್ಯದರ್ಶಿ ಮುಜಿಬುಲ್ಲಾ ಜಫಾರಿ ಮಾತನಾಡಿ, ಈ ಹಿಂದೆ 12 ಅಂಶಗಳ ಕಾರ್ಯಕ್ರಮ ಇತ್ತು. ಈಗ 15 ಅಂಶಗಳ ಕಾರ್ಯಕ್ರಮ ಇದೆ. ಅಲ್ಪಸಂಖ್ಯಾತರ ಆಯೋಗ ಅಭಿವೃದ್ಧಿ ಆಗುತ್ತಿದೆಯೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ. ಆಯೋಗಕ್ಕೆ ಸಿವಿಲ್ ಕೋರ್ಟ್‌ನ ಅಧಿಕಾರ ನೀಡಲಾಗಿದ್ದು, ಆಯೋಗ ಬಯಸುವ ಮಾಹಿತಿಯನ್ನು ಅಧಿಕಾರಿಗಳು ತಕ್ಷಣ ಒದಗಿಸಬೇಕು ಎಂದು ನಿರ್ದೇಶನ ನೀಡಿದರು. ಸಭೆಯಲ್ಲಿ ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್ ರೆಡ್ಡಿ, ಅಪರ ಜಿಲ್ಲಾಧಿಕಾರಿ ಡಾ. ಪಿ ಶಿವರಾಜ್ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net