

ಮಡಿಕೇರಿ: ಸರ್ಕಾರದ ಮಹಾತ್ವಾಕಾಂಕ್ಷಿ ೫ ಗ್ಯಾರಂಟಿ ಯೋಜನೆಯನ್ನು ಅರ್ಹ ಫಲಾನುಭವಿಗಳಿಗೆ ದೊರೆಯುವಂತೆ ಮಾಡಲು ಅಧಿಕಾರಿಗಳು ಶ್ರಮಿಸಬೇಕು ಎಂದು ಮಡಿಕೇರಿ ತಾಲೂಕು ಗ್ಯಾರಂಟಿ ಸಮಿತಿಯ ಅಧ್ಯಕ್ಷ ಎಂ.ಜಿ.ಮೋಹನ್ ದಾಸ್ ಹೇಳಿದರು.
ಮಡಿಕೇರಿ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ನಡೆದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಡಿಕೇರಿ ತಾಲೂಕಿನಲ್ಲಿ ೫ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಅನುಷ್ಠಾನ ಇಲಾಖೆಗಳು ಉತ್ತಮ ಪ್ರಗತಿಯನ್ನು ಸಾಧಿಸಿದೆ. ಮುಂದಿನ ದಿನಗಳಲ್ಲಿಯೂ ಸಹ ಸಮಿತಿಯ ಎಲ್ಲಾ ಸದಸ್ಯರು ಹಾಗೂ ಅಧಿಕಾರಿ ವರ್ಗದವರು ಸರ್ಕಾರದ ಮಹಾತ್ವಾಕಾಂಕ್ಷಿ ೫ ಗ್ಯಾರಂಟಿ ಯೋಜನೆಯನ್ನು ಎಲ್ಲಾ ಅರ್ಹ ಫಲಾನುಭವಿಗಳಿಗೆ ದೊರೆಯುವಂತೆ ಮಾಡಲು ಶ್ರಮಿಸಬೇಕು. ಗ್ಯಾರಂಟಿ ಯೋಜನೆಗೆ ಸಂಬಂಧಿಸಿದಂತೆ ಗ್ರಾಮಪಂಚಾಯತಿ ಮಟ್ಟದಲ್ಲಿ ಫಲಾನುಭವಿಗಳ ಕುಂದುಕೊರತೆ ಸಭೆಯನ್ನು ಮಾಡಬೇಕು ಎಂದು ತಿಳಿಸಿದರು.
ಗೃಹಲಕ್ಷ್ಮಿ ಯೋಜನೆ ಕುರಿತು ಶಿಶುಅಭಿವೃದ್ಧಿ ಇಲಾಖೆ ತಾಲೂಕು ಅಧಿಕಾರಿ ಸೀತಾ ಸೋಮಯ್ಯ ಮಾತನಾಡಿ, ಮಡಿಕೇರಿ ತಾಲೂಕಿನಲ್ಲಿ ಜೂನ್ ಅಂತ್ಯಕ್ಕೆ ಒಟ್ಟು ೩೦,೩೦೭ ಫಲಾನುಭವಿಗಳಿಗೆ ಹಣ ಮಂಜೂರಾಗಿದೆ. ಒಟ್ಟು ಜೂನ್ ಅಂತ್ಯಕ್ಕೆ ೬,೦೬,೧೪,೦೦೦ ರೂ. ಪಾವತಿಯಾಗಿದೆ. ಪ್ರಧಾನ ಕಚೇರಿಯಿಂದ ಫೆಬ್ರವರಿ ಹಾಗೂ ಮಾರ್ಚ್ ತಿಂಗಳು ಹಣ ಪಾವತಿಯಾಗಲು ಬಾಕಿ ಇರುತ್ತದೆ ಎಂದು ಸಭೆಗೆ ಮಾಹಿತಿ ನೀಡಿದರು.
ಶಕ್ತಿ ಯೋಜನೆಯಲ್ಲಿ ಸೆಪ್ಟೆಂಬರ್ ತಿಂಗಳಿನಲ್ಲಿ ಒಟ್ಟು ೧,೩೧,೭೪,೬೪೮ ವಯಸ್ಕ ಮಹಿಳಾ ಪ್ರಯಾಣಿಕರು ಮತ್ತು ೩,೦೫,೧೩೨ ಹೆಣ್ಣು ಮಕ್ಕಳು ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿನಿಯರು ಸೇರಿದಂತೆ ಒಟ್ಟಾರೆ ೧,೩೪,೭೯,೭೮೦ ಜನ ಮಹಿಳಾ ಪ್ರಯಾಣಿಕರು ಸಂಸ್ಥೆಯ ವಾಹನದಲ್ಲಿ ಪ್ರಯಾಣಿಸಿ ಯೋಜನೆ ಪಡೆದುಕೊಂಡಿರುತ್ತಾರೆ ಎಂದು ಶಕ್ತಿ ಯೋಜನೆಯ ಅಧಿಕಾರಿ ಮಾಹಿತಿ ನೀಡಿದರು.
ಉದ್ಯೋಗಾಧಿಕಾರಿ ಮಂಜುನಾಥ್ ಮಾತನಾಡಿ, ಯುವನಿಧಿ ಯೋಜನೆಯಲ್ಲಿ ಆಗಸ್ಟ್ ತಿಂಗಳವರೆಗೆ ೪೯೩ ಜನ ನೋಂದಣಿಯಾಗಿದೆ. ಜುಲೈ ತಿಂಗಳಲ್ಲಿ ನೋಂದಾಯಿತ ಫಲಾನುಭವಿಗಳಿಗೆ ರೂ.೧೨,೦೪,೫೦೦ ಹಣ ಬಿಡುಗಡೆಯಾಗಿರುತ್ತದೆ ಎಂದು ಮಾಹಿತಿ ನೀಡಿದರು.
ಗೃಹಜ್ಯೋತಿ ಯೋಜನೆ ಸಂಬಂಧಪಟ್ಟ ಇಲಾಖಾಧಿಕಾರಿ ಮಾಹಿತಿ ನೀಡಿ, ಮಡಿಕೇರಿ ತಾಲೂಕಿನಲ್ಲಿ ೫೧೯೧೮ ಅರ್ಹ ವಿದ್ಯುತ್ ಸ್ಥಾವರಗಳಿದ್ದು, ಗೃಹಜ್ಯೋತಿ ಯೋಜನೆಯಡಿ ೫೧೫೨೧ ಅರ್ಜಿಗಳು ನೋಂದಣಿಗೊಂಡಿದೆ. ಶೇ.೯೯.೨೩ ಶೇಕಡವಾರು ಪ್ರಗತಿಯಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಅನ್ನಭಾಗ್ಯ ಯೋಜನೆ ಕುರಿತು ಮಾಹಿತಿ ನೀಡಿದ ತಾಲೂಕು ಅಧಿಕಾರಿ ವೀಣಾ, ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದಂತೆ ಮಡಿಕೇರಿ ತಾಲೂಕಿನಲ್ಲಿ ಒಟ್ಟು ೩೮,೩೬೩ ಪಡಿತರ ಚೀಟಿ ಇದೆ. ೧,೨೦,೮೬೫ ಒಟ್ಟು ಫಲಾನುಭವಿಗಳಿದ್ದಾರೆ. ಇದರಲ್ಲಿ ೧೯೭೩ ಎಎವೈ ಪಡಿತರ ಚೀಟಿ ಇದ್ದು, ೭೮೯೭ ಎಎವೈ ಫಲಾನುಭವಿಗಳು ಇದ್ದಾರೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಶೇಖರ್, ಮಡಿಕೇರಿ ತಾಲೂಕು ಗ್ಯಾರಂಟಿ ಸಮಿತಿಯ ಸದಸ್ಯರಾದ ರಘು ಬೆಟ್ಟಗೇರಿ, ರಂಗಪ್ಪ ಭಾಗಮಂಡಲ, ಸೀರಜ್ ನಾಪೋಕ್ಲು, ಫ್ಯಾನ್ಸಿ ಪಾರ್ವತಿ, ರಾಜೇಶ್ವರಿ, ಮರಗೋಡು ದಯಾನಂದ್, ಪ್ರಭು ರೈ, ಕೌಶಿಕ್ ಕುಟ್ಟಯ್ಯ ಪಾರಾಣೆ, ಇಬ್ರಾಹಿಂ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳಿದ್ದರು.