

ನಂಜನಗೂಡು: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ರಾಜ್ಯದ ಮಹಿಳೆಯರಿಗೆ ಸರಿಯಾಗಿ ತಲುಪುತ್ತಿಲ್ಲ. ಕೇಂದ್ರ ಸರ್ಕಾರದಿಂದ ಮಹಿಳೆಯರಿಗೆ ಸಾಕಷ್ಟು ಯೋಜನೆಗಳಿವೆ. ಇವುಗಳನ್ನು ಮಹಿಳಾ ಮೋರ್ಚಾಗಳು ತಲುಪಿಸುವ ಕೆಲಸ ಮಾಡಬೇಕು ಎಂದು ಮೈಸೂರು ಜಿಲ್ಲಾ ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಕುಂಬರಹಳ್ಳಿ ಸುಬ್ಬಣ್ಣ ತಿಳಿಸಿದರು.
ನಗರದ ಯಾತ್ರಿ ಭವನ ಕಲ್ಯಾಣ ಮಂಟಪದಲ್ಲಿ ಮೈಸೂರು ಜಿಲ್ಲಾ ಗ್ರಾಮಂತರ ವತಿಯಿಂದ ಸೋಮವಾರ ಆಯೋಜಿಸಿದ್ದ ಜಿಲ್ಲಾ ಮಹಿಳಾ ಮೋರ್ಚಾ ವಿಶೇಷ ಸಭೆಯಲ್ಲಿ ಮಾತನಾಡಿದರು.
ಕೇಂದ್ರ ಸರ್ಕಾರವು ಕೂಡ ಮಹಿಳೆಯರಿಗೆ 1 ಲಕ್ಷ ದಿಂದ 10 ಕೋಟಿ ರೂ.ಗಳ ವರೆಗೂ ಸಾಲ ಸೌಲಭ್ಯಗಳನ್ನು ನೀಡುತ್ತಿದೆ. ಬಿಜೆಪಿ ಮಹಿಳಾ ಮೋರ್ಚ ಇಂತಹ ಯೋಜನೆಗಳ ಬಗ್ಗೆ ಮಹಿಳೆಯರಿಗೆ ತಿಳಿಸುವ ಕೆಲಸ ಮಾಡಬೇಕು. ರಾಜ್ಯದಲ್ಲಿ ಲಕ್ಷಾಂತರ ಸ್ತ್ರೀಶಕ್ತಿ ಸಂಘಗಳು ಸ್ಥಾಪನೆಗೊಂಡಿವೆ. ಇಂತಹ ಸಂಘಗಳಿಗೆ ಕೇಂದ್ರ ಸರ್ಕಾರದಿಂದ ಸಾಲ ಸೌಲಭ್ಯ ಸಿಗುತ್ತಿದೆ. ಬೂತ್ ಮಟ್ಟದಿಂದ ಸಂಘಟನೆ ಮಾಡಿ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರ ಹಿಡಿಯುವಂತೆ ಶ್ರಮವಹಿಸಬೇಕು ಎಂದರು.
ಮಾಜಿ ಶಾಸಕ ಹರ್ಷವರ್ಧನ್ ಮಾತನಾಡಿ, ದೇಶದಲ್ಲಿ ಮಹಿಳೆಯರಿಗೆ ಶೇ.33 ಮೀಸಲಾತಿ ನೀಡುವ ಬಗ್ಗೆ ಚರ್ಚೆ ನಡೆಯುತ್ತಿದೆ. ಬಿಜೆಪಿ ಸರ್ಕಾರ ಈ ಬಗ್ಗೆ ದಿಟ್ಟ ನಿರ್ಧಾರ ತೆಗೆದುಕೊಳ್ಳುತ್ತದೆ. 525 ಇರುವ ಸ್ಥಾನ 800 ಕ್ಕೆ ಏರಲಿದೆ. ಬಿಹಾರ ಸರ್ಕಾರ ಇಡೀ ದೇಶದಲ್ಲಿ ಮೊದಲ ಬಾರಿಗೆ ಶೇ.50 ಮೀಸಲಾತಿ ನೀಡಿದೆ. ದೇಶದಲ್ಲಿ ಅಸ್ಪೃಶ್ಯತೆ ಮತ್ತು ಅಸಮಾನತೆ ಇಂದಿಗೂ ಚಾಲ್ತಿಯಲ್ಲಿದೆ. ಇದಕ್ಕೂ ಕೂಡ ಕಠಿಣ ಕಾನೂನು ಜಾರಿಗೆ ತರಬೇಕು. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು ಹಣ ಹಾಕುವ ಬದಲು ನಾಲ್ಕು ತಿಂಗಳಿಗೊಮ್ಮೆ ಹಣ ನೀಡುತ್ತಿದ್ದಾರೆ. ಬಿಜೆಪಿ ಸರ್ಕಾರ ಮಹಿಳೆಯರಿಗೆ ಇನ್ನೂ ಹೆಚ್ಚಿನ ಕಾರ್ಯಕ್ರಮಗಳನ್ನು ಜಾರಿಗೆ ತರಲಿದೆ ಎಂದು ತಿಳಿಸಿದರು.
ರಾಜ್ಯ ಮಹಿಳಾ ಮೋರ್ಚಾ ಉಪಾಧ್ಯಕ್ಷರಾದ ಡಾ.ಪ್ರಫುಲ್ಲಾ ಮಲ್ಲಾಡಿ, ಮಂಗಳಾ ಸೋಮಶೇಖರ್, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷರಾದ ನಳಿನಿ ಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ, ಮಹೇಶ್ ಮಡವಾಡಿ, ಕಿರಣ್ ಜೈರಾಮೇಗೌಡ, ನಂಜನಗೂಡು ನಗರ ಮತ್ತು ಗ್ರಾಮಂತರ ಮಂಡಲ ಅಧ್ಯಕ್ಷ ಕೆಂಡಗಣ್ಣಪ್ಪ, ಸಿದ್ದರಾಜು, ನಂದಿನಿ ಮಹೇಶ್ ಸೇರಿದಂತೆ ಮತ್ತಿತರರು ಹಾಜರಿದ್ದರು.