

ಹಿರೇಕೆರೂರ: ಮುಂಬರುವ ಎಲ್ಲ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಲು ಕಾರ್ಯಕರ್ತರು, ಪ್ರತಿ ಬೂತ್ ಮಟ್ಟದ ಎಲ್ಲ ಪದಾಧಿಕಾರಿಗಳು ಕೇಂದ್ರ ಸರ್ಕಾರದ ಸಾಧನೆಗಳನ್ನು ಜನತೆಗೆ ಮುಟ್ಟಿಸಬೇಕಿದೆ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಹೇಳಿದರು.
ತಾಲೂಕಿನ ಬಾಳಂಬೀಡ ಗ್ರಾಮದಲ್ಲಿ ತಾಲೂಕು ಬಿಜೆಪಿ ಮಂಡಲದ ವತಿಯಿಂದ ಗುರುವಾರ ಏರ್ಪಡಿಸಿದ್ದ ಫಲಾನುಭವಿಗಳ ಸಂಪರ್ಕ ಅಭಿಯಾನ ಸಭೆಯಲ್ಲಿ ಅವರು ಮಾತನಾಡಿದರು. ತಾಲೂಕಿನಲ್ಲಿ ಕೇಂದ್ರದ ಯೋಜನೆಗಳ ಫಲಾನುಭವಿಗಳನ್ನು ಗುರುತಿಸಿ, ಅವರು ಯಾವ ಯೋಜನೆಯನ್ನು ಪಡೆದಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಸಂಗ್ರಹಿಸಬೇಕು. ಅದರಿಂದ ಅವರಿಗಾದ ಲಾಭಗಳ ಕುರಿತು ರ್ಚಚಿಸಿ, ಅವರೊಂದಿಗೆ ಸೆಲ್ಪೀ ಫೋಟೋ ತೆಗೆಸಿಕೊಂಡು ಗ್ರುಪಿಗೆ ಅಪ್ಲೋಡ್ ಮಾಡಬೇಕು. ಕೇಂದ್ರ ಸರ್ಕಾರದ ಪ್ರತಿಯೊಂದು ಯೋಜನೆಗಳೂ ಅತ್ಯಂತ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿದ್ದು, ಈ ಬಗ್ಗೆ ಎಲ್ಲರಿಗೂ ಮನದಟ್ಟು ಮಾಡಬೇಕು ಎಂದರು.
ದೇಶ, ಹೊರ ದೇಶಗಳಲ್ಲೂ ಇಂದು ಪ್ರಧಾನಿ ಮೋದಿಯವರ ಆಡಳಿತದ ಕಾರ್ಯವೈಖರಿಯಿಂದಾಗಿ ಭಾರತದ ಗೌರವ, ಘನತೆ ಹೆಚ್ಚುತ್ತಿದೆ. ಹೆಚ್ಚಿನ ಜನಸಂಖ್ಯೆಯ ಇದ್ದರೂ ದೇಶದ ಆರ್ಥಿಕತೆ ಸುಸ್ಥಿರವಾಗಿದೆ. ಭ್ರಷ್ಟಾಚಾರಮುಕ್ತ ಆಡಳಿತ, ಯಾವುದೆ ಒಂದು ಕಪ್ಪು ಚುಕ್ಕೆ ಬಾರದಂತೆ ದೇಶವನ್ನು ಮುನ್ನಡೆಸಿಕೊಂಡು ಹೋಗುತ್ತಿರುವ ಬಿಜೆಪಿ ಸರ್ಕಾರದ ಸಾಧನೆಗಳನ್ನು ಜನತೆಗೆ ಮನಮುಟ್ಟುವ ಹಾಗೆ ತಿಳಿಸಬೇಕಿದೆ ಎಂದರು.
ಫಲಾನುಭವಿಗಳ ಸಂಪರ್ಕ ಅಭಿಯಾನದ ಜಿಲ್ಲಾ ಸಂಚಾಲಕ ಶಿವರಾಜ ಸಜ್ಜನರ, ಸಹ ಸಂಚಾಲಕ, ಶಿವಲಿಂಗಪ್ಪ ತಲ್ಲೂರು, ತಾಲೂಕು ಬಿಜೆಪಿ ಮಂಡಲದ ಅಧ್ಯಕ್ಷ ಶಿವಕುಮಾರ ತಿಪ್ಪಶೆಟ್ಟಿ, ಜಿಲ್ಲಾ ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ಸೃಷ್ಟಿ ಪಾಟೀಲ ಮಾತನಾಡಿದರು.
ಟಿಎಪಿಸಿಎಂಎಸ್ ಅಧ್ಯಕ್ಷ ಎಸ್.ಎಸ್. ಪಾಟೀಲ, ಕೆಸಿಸಿ ಬ್ಯಾಂಕ್ ನಿರ್ದೇಶಕರಾದ ಲಿಂಗರಾಜ ಚಪ್ಪರದಳ್ಳಿ, ರವಿಶಂಕರ ಬಾಳಿಕಾಯಿ, ಜಿಪಂ ಮಾಜಿ ಸದಸ್ಯ ಎನ್.ಎಂ. ಈಟೇರ, ಆರ್.ಎನ್. ಗಂಗೋಳ, ಮುಖಂಡರಾದ ಜಿ.ಪಿ. ಪ್ರಕಾಶಗೌಡ, ಗಣೇಶ ವರ್ಣೆಕರ, ಆನಂದಪ್ಪ ಹಾದಿಮನಿ, ಮಂಜುನಾಥ ಚಲವಾದಿ, ದುರ್ಗೆಶ ತಿರಕಪ್ಪನವರ, ಸಿ.ಬಿ. ಮಾಳಗಿ, ಎನ್.ಎಸ್. ಚಿಕ್ಕನರಗುಂದಮಠ, ಗೀತಾ ದಂಡಗೀಹಳ್ಳಿ, ಮಂಜುಳಾ ಬಾಳಿಕಾಯಿ, ಬಸಮ್ಮ ಅಬಲೂರ ಹಾಗೂ ಪಕ್ಷದ ಬೂತ್ ಮಟ್ಟದ ಹಾಗೂ ಎಲ್ಲ ಘಟಕಗಳ ಪದಾಧಿಕಾರಿಗಳು ಇದ್ದರು.