

ಮೈಸೂರು: ಸರ್ಕಾರದಿಂದ ಸಿಗುವ ಪಂಚ ಗ್ಯಾರಂಟಿ ಯೋಜನೆಗಳು ಪ್ರತಿಯೊಬ್ಬರಿಗೂ ತಲುಪುವಂತೆ ಸಂಬಂಧಪಟ್ಟ ಇಲಾಖೆಗಳು ಕ್ರಮ ಕೈಗೊಳ್ಳಬೇಕು ಎಂದು ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಎಸ್.ಅರುಣ್‌ಕುಮಾರ್ ಸೂಚಿಸಿದರು.
ಗ್ಯಾರಂಟಿ ಯೋಜನೆ ಕುರಿತು ಜಿಲ್ಲಾ ಪಂಚಾಯಿತಿ ಡಿ.ದೇವರಾಜ ಅರಸು ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗ್ಯಾರಂಟಿ ಯೋಜನೆಗಳ ಬಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಸಾರ್ವಜನಿಕರಿಗೆ ಅರಿವು ಮೂಡಿಸಬೇಕು, ಗ್ಯಾರಂಟಿ ಯೋಜನೆಗಳಿಗೆ ಸಂಬಂಧಪಟ್ಟಂತಹ ಅರಿವು ಕಾರ್ಯಕ್ರಮಗಳನ್ನು ಹೆಚ್ಚು ಮಾಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಪಂಚ ಗ್ಯಾರಂಟಿ ಯೋಜನೆಗಳು ಪ್ರತಿಯೊಬ್ಬರಿಗೂ ತಲುಪುವಂತೆ ಪ್ರತಿಯೊಂದು ಇಲಾಖೆ ಕಾರ್ಯ ನಿರ್ವಹಿಸಬೇಕು. ಎಲ್ಲ ಯೋಜನೆಗಳ ಬಗ್ಗೆ ಫಲಾನುಭವಿಗಳಿಗೆ ತಿಳಿಸಬೇಕು. ಫಲಾನುಭವಿಗಳಿಗೆ ಏನಾದರೂ ಸಮಸ್ಯೆಗಳಿದ್ದರೆ ಅವರಿಗಾಗಿ ದೂರು ಪೆಟ್ಟಿಗೆಯನ್ನು ತೆರೆಯಬೇಕು ಎಂದು ಸೂಚಿಸಿದರು.
ಗೃಹಲಕ್ಷ್ಮಿ ಯೋಜನೆಯ ಬಗ್ಗೆ ಹೆಚ್ಚು ಅರಿವು ಕಾರ್ಯಕ್ರಮಗಳನ್ನು ಮಾಡಬೇಕು, ಪ್ರಚಾರ ಮಾಡಿ ಮಾದರಿ ಯೋಜನೆಯನ್ನಾಗಿ ಮಾಡಬೇಕು. ಸಿಡಿಪಿಒಗಳು ಪ್ರತಿ ಗ್ರಾಮ ಪಂಚಾಯಿತಿಗಳಿಗೂ ಹೋಗಿ ವಿಚಾರಣೆ ಮಾಡಬೇಕು. ಹತ್ತಿರದಲ್ಲಿ ಇರುವಂತಹ ಅಂಗನವಾಡಿ ಕಾರ್ಯಕರ್ತೆಯರು ಫಲಾನುಭವಿಗಳಿಗೆ ಅನುಕೂಲವಾಗುತ್ತಿದೆಯೇ ಎಂದು ವಿಚಾರಣೆ ಮಾಡಬೇಕು ಎಂದು ಹೇಳಿದರು.
ಅನ್ನಭಾಗ್ಯ ಯೋಜನೆ ಬಗ್ಗೆ ಎಲ್ಲ್ಲ ಕಡೆಗಳಲ್ಲಿಯೂ ಪ್ರಚಾರ ಫಲಕಗಳನ್ನು ಅಳವಡಿಸಬೇಕು. ತಾಲೂಕುವಾರು ನ್ಯಾಯಬೆಲೆ ಅಂಗಡಿಗಳ ಕಡೆ ಹೆಚ್ಚು ಗಮನವಹಿಸಬೇಕು. ಯೋಜನೆಗೆ ಸಂಬಂಧಪಟ್ಟಂತೆ ಗ್ರೂಪ್ ಕ್ರಿಯೇಟ್ ಮಾಡಬೇಕು. ಅನ್ನಭಾಗ್ಯ ಯೋಜನೆಯಲ್ಲಿ ಯಾವುದೇ ಲೋಪ ನಡೆಯದಂತೆ ಕ್ರಮ ವಹಿಸಬೇಕು ಎಂದರು.
ಸರ್ಕಾರ ಜನರಿಗೆ 200 ಯೂನಿಟ್ ಉಚಿತ ವಿದ್ಯುತ್ ಅನ್ನು ಗೃಹಜ್ಯೋತಿ ಯೋಜನೆಯಡಿ ನೀಡುತ್ತಿದ್ದು, ಈ ಬಗ್ಗೆ ಗ್ರಾಮೀಣ ಮಟ್ಟದಲ್ಲಿ ಇದರ ಬಗ್ಗೆ ಜಾಗೃತಿ ಮೂಡಿಸಬೇಕು. ಯುವನಿಧಿ ಯೋಜನೆಯಡಿ ಜಿಲ್ಲೆಯಲ್ಲಿ ಒಟ್ಟು 11154 ಅಭ್ಯರ್ಥಿಗಳು ನೋಂದಣಿಯಾಗಿದ್ದು, ಫೆಬ್ರವರಿ ಮಾಹೆಯ ಅಂತ್ಯಕ್ಕೆ 8286 ಫಲಾನುಭವಿಗಳು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಕೆಲವು ಕಡೆ ಗ್ಯಾರಂಟಿ ಯೋಜನೆಗಳಲ್ಲಿ ನ್ಯೂನತೆ, ಲೋಪಗಳು ಕಂಡುಬರುತ್ತಿದೆ. ಈ ಕುರಿತು ದೂರುಗಳು ಬರುತ್ತಿದ್ದು, ಅವುಗಳನ್ನು ಅಧಿಕಾರಿಗಳು ದೂರು ಅಲಿಸಿ ಸರಿಪಡಿಸಬೇಕು ಎಂದು ತಿಳಿಸಿದರು.
ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಗ್ಯಾರಂಟಿ ಯೋಜನೆ ಜಾರಿಗೊಂಡ ಸಂಭ್ರಮದಲ್ಲಿ ಎರಡು ವರ್ಷದ ಸಂಭ್ರಮಾಚರಣೆ ಮಾಡಲಾಗಿದೆ. ಈ ಮೂಲಕ ಜನರ ಬಳಿಕೆ ಸರ್ಕಾರದ ಯೋಜನೆಗಳನ್ನು ತಲುಪಿಸಿದ ಕೀರ್ತಿ ಸಲ್ಲುತ್ತದೆ ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಯುಕೇಶ್‌ಕುಮಾರ್, ಗ್ಯಾರಂಟಿ ಯೋಜನೆಯ ಜಿಲ್ಲಾ ಮಟ್ಟದ ಉಪಾಧ್ಯಕ್ಷರಾದ ಚಂದ್ರಶೇಖರ್, ಸಾ.ಮಾ.ಯೋಗೇಶ್, ಪ್ರೊ.ಶಿವಕುಮಾರ್, ಹುಣಸೂರು ಬಸವಣ್ಣ, ಸದಸ್ಯರಾದ ಲತಾ, ಕೆ.ಮಾರುತಿ, ರಘು, ಅಬ್ದುಲ್ ಖಾನ್, ಪ್ರಸನ್ನ ಬಾಬು ಇತರರಿದ್ದರು.