ಗ್ಯಾರಂಟಿ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸಿ

11
Published on

ಮೈಸೂರು: ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಾದ ಪಂಚ ಗ್ಯಾರಂಟಿ ಯೋಜನೆಗಳನ್ನು ಎಲ್ಲ ಅರ್ಹ ಫಲಾನುಭವಿಗಳಿಗೆ ತಲುಪಿಸಲು ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಸ್. ಅರುಣ್ ಕುಮಾರ್ ಹೇಳಿದರು.

ಜಿಲ್ಲಾ ಪಂಚಾಯಿತಿ ದೇವರಾಜು ಅರಸು ಸಭಾಂಗಣದಲ್ಲಿ ಸೋಮವಾರ ಆಯೋಜಿಸಿಜಿದ್ದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಂಬಂಧ ಅಧಿಕಾರಿಗಳೊಂದಿಗೆ ಆಯೋಜಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.

ಗೃಹಲಕ್ಷ್ಮಿ, ಅನ್ನಭಾಗ್ಯ, ಶಕ್ತಿ, ಗೃಹಜ್ಯೋತಿ ಹಾಗೂ ಯುವನಿಧಿ ಗ್ಯಾರಂಟಿ ಯೋಜನೆಗಳು ಅರ್ಹರಿಗೂ ತಲುಪಬೇಕು. ರಾಜ್ಯಸರ್ಕಾರ ಅಧಿಕಾರಕ್ಕೆ ಬಂದ ಮೂರು ತಿಂಗಳೊಳಗೆ ಐದು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಮಾಡಿದ್ದು, ಅನುಷ್ಠಾನ ಪ್ರಾಧಿಕಾರದವರು ಅಧಿಕಾರಿಗಳೊಂದಿಗೆ ಕೈ ಜೋಡಿಸಿ, ವಿಶ್ವಾಸಕ್ಕೆ ಪಡೆದು ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿ ಮಾಡಬೇಕು ಎಂದರು.

ಸಾರ್ವಜನಿಕರು ಪಂಚ ಗ್ಯಾರಂಟಿ ಯೋಜನೆಗಳಿಗೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಹಲವಾರು ತಾಂತ್ರಿಕ ಸಮಸ್ಯೆ ಸೇರಿದಂತೆ ಇನ್ನಿತರೆ ತೊಡಕುಗಳನ್ನು ಎದುರಿಸುತ್ತಿದ್ದು, ಈ ನಿಟ್ಟಿನಲ್ಲಿ ಅಧಿಕಾರಿಗಳು ಗಮನಹರಿಸಿ ಸಮಸ್ಯೆಗಳನ್ನು ಪರಿಹರಿಸುವಂತೆ ಸದಸ್ಯರಿಗೆ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಂ. ಗಾಯತ್ರಿ ಮಾತನಾಡಿ, ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಫಲಾನುಭವಿಗಳಿಗೆ ತಲುಪಿಸುವ ಕೆಲಸ ಮಾಡಬೇಕು. ಫಲಾನುಭವಿಗಳಿಗೆ ಸಮಸ್ಯೆ ಉಂಟಾದರೆ ಅಧಿಕಾರಿಗಳು ಅದನ್ನು ಬಗೆಹರಿಸುವ ಕಾರ್ಯ ಮಾಡಬೇಕು. ತಾಲೂಕುವಾರು ಯಾವುದೇ ಯೋಜನೆಯ ಫಲಾನುಭವಿ, ಯೋಜನೆಯಿಂದ ಹೊರಗೆ ಉಳಿಯದಂತೆ ಅಧಿಕಾರಿಗಳು ಜಾಗೃತಿಯಿಂದ ಕೆಲಸ ನಿರ್ವಹಿಸಬೇಕು ಎಂದರು.

ಪ್ರತಿ ತಾಲೂಕು ಪಂಚಾಯಿತಿಗಳಲ್ಲಿ ಸಾಮಾನ್ಯ ಸಭೆಗಳನ್ನು ನಡೆಸಿ, ತಳಮಟ್ಟದಲ್ಲಿರುವ ಲೋಪ ದೋಷಗಳನ್ನು ಸರಿಪಡಿಸಬೇಕು. ಎಲ್ಲ ಯೋಜನೆಗಳು ಸಮರ್ಪಕವಾಗಿ ಜಾರಿಗೊಳಿಸುವಲ್ಲಿ ಗ್ಯಾರಂಟಿ ಯೋಜನೆಯ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಕೂಡಿ ಜನರ ಸಮಸ್ಯೆ ಮತ್ತು ಕುಂದು ಕೊರತೆಗಳ ಬಗೆಹರಿಸುವ ಕುರಿತು ಸಭೆಗಳನ್ನು ಹಮ್ಮಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

ಶಕ್ತಿಯೋಜನೆಯಡಿ ಈವರೆಗೆ ಜಿಲ್ಲೆಯಲ್ಲಿ ಶೇ. 65.91 ರಷ್ಟು ಮಹಿಳೆಯರು ಸರ್ಕಾರಿ ಬಸ್‌ನಲ್ಲಿ ಪ್ರಯಾಣಿಸಿದ್ದು, ಈ ಯೋಜನೆಯಲ್ಲಿ 52,789 ಲಕ್ಷ ರೂ. ಸಾರಿಗೆ ಸಂಸ್ಥೆಗೆ ಆದಾಯ ಸಂದಿದೆ ಎಂದು ತಿಳಿಸಿದರು.

ಯುವನಿಧಿ ಯೋಜನೆಯಡಿ 2023 ಹಾಗೂ 2024 ಶೈಕ್ಷಣಿಕ ವರ್ಷದಲ್ಲಿ ಡಿಗ್ರಿ - ಡಿಪ್ಲೊಮಾ ವಿದ್ಯಾರ್ಹತೆ ಹೊಂದಿರುವ ನಿರುದ್ಯೋಗ ಯುವಕ ಯುವತಿಯರು ಆನ್‌ಲೈನ್‌ನಲ್ಲಿ ಸೇವಾಸಿಂಧು ವೆಬ್‌ಸೈಟ್ ಮೂಲಕ ಈಗಲೂ ನೋಂದಣಿಯಾಗಬಹುದಾಗಿದ್ದು, ಪ್ರತಿ ತಿಂಗಳು ಸ್ವಯಂ ಘೋಷಣೆ ಮಾಡಿಸುವುದು ಕಡ್ಡಾಯ ಎಂದರು.

ಜಿಲ್ಲೆಯಲ್ಲಿ ಒಟ್ಟು 7453 ಡಿಪ್ಲೊಮಾ, ಪದವೀಧರರು ಯುವನಿಧಿ ಯೋಜನೆಗೆ ನೋಂದಣಿ ಮಾಡಿಸಿಕೊಂಡಿದ್ದಾರೆ. ಯುವ ನಿಧಿ ಯೋಜನೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಅರ್ಹ ನಿರುದ್ಯೋಗಿ ಫಲಾನುಭವಿಗಳನ್ನು ಆಯ್ಕೆ ಮಾಡಿದ್ದು, ಇನ್ನೂ ಬಾಕಿ ಇರುವವರು ನೋಂದಾಯಿಸಲು ತಿಳಿಸಿದರು.

ಅನ್ನಭಾಗ್ಯ ಯೋಜನೆಯಡಿ 2023 ರ ಜುಲೈ ಮಾಹೆಯಿಂದ ಡಿ.ಪಿ.ಟಿ. ಮೂಲಕ ನೇರ ಹಣದ ವರ್ಗಾವಣೆಯಾಗುತ್ತಿದ್ದು, ಜುಲೈ 2023 ರಿಂದ ಆಗಸ್ಟ್ 2024ರ ವರೆಗೆ ಒಟ್ಟು 471 ಕೋಟಿ ರೂ.ಗಳನ್ನು ಪಡಿತರ ಚೀಟಿದಾರರ ಮುಖ್ಯಸ್ಥರ ಖಾತೆಗೆ ಜಮಾ ಮಾಡಲಾಗಿದೆ.

ನ್ಯಾಯ ಬೆಲೆ ಅಂಗಡಿಗಳಲ್ಲಿ ನಿಗದಿತ ಸಮಯದಲ್ಲಿ ಪಡಿತರವನ್ನು ನೀಡಬೇಕು ಎಂಬುದರ ಬಗ್ಗೆ ಅಧಿಕಾರಿಗಳು ಗಮನ ವಹಿಸಬೇಕು. ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಗ್ಯಾರಂಟಿ ಯೋಜನೆಗಳು ಜನರಿಗೆ ತಲುಪಿಸಲು ಸಭೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಇದೇ ಸಂದರ್ಭದಲ್ಲಿ 2024 ನೆೇ ಸಾಲಿನ ಯುವನಿಧಿ ಬಿತ್ತಿ ಪತ್ರ ಮತ್ತು ಬ್ಯಾನರ್ ಬಿಡುಗಡೆ ಮಾಡಲಾಯಿತು. ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಯ ಅಧ್ಯಕ್ಷರು ಹಾಗೂ ಸದಸ್ಯರು, ವಿವಿಧ ಇಲಾಖೆಯ ಅಧಿಕಾರಿಗಳು, ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net