ಗ್ಯಾರಂಟಿ ಯೋಜನೆ ಅರ್ಹರಿಗೆ ತಲುಪಿಸಿ: ಧರ್ಮಜ ಉತ್ತಪ್ಪ ಸೂಚನೆ

darmaja utthappa
Published on

ಮಡಿಕೇರಿ: ಸರ್ಕಾರ ಶಕ್ತಿ, ಗೃಹಲಕ್ಷ್ಮಿ, ಗೃಹಜ್ಯೋತಿ, ಯುವನಿಧಿ ಹಾಗೂ ಅನ್ನಭಾಗ್ಯ ಯೋಜನೆಯನ್ನು ಜಾರಿಗೊಳಿಸಿದ್ದು, ಈ ಯೋಜನೆಗಳನ್ನು ಅರ್ಹರಿಗೆ ತಲುಪಿಸಬೇಕು ಎಂದು ಜಿಲ್ಲಾ ಅನುಷ್ಠಾನ ಸಮಿತಿ ಅಧ್ಯಕ್ಷ ಧರ್ಮಜ ಉತ್ತಪ್ಪ ಸೂಚಿಸಿದರು.


ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ಸರ್ಕಾರದ ಪ್ರಮುಖ ಗ್ಯಾರಂಟಿ ಯೋಜನೆಗಳ ಪ್ರಗತಿ ಸಂಬಂಧಿಸಿದಂತೆ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಭೆ ಮಾತನಾಡಿದರು.


ಗ್ಯಾರಂಟಿ ಯೋಜನೆಗಳಿಂದ ಅರ್ಹರು ವಂಚಿತರಾಗದಂತೆ ಗಮನಹರಿಸುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ. ಆ ನಿಟ್ಟಿನಲ್ಲಿ ಸರ್ಕಾರದ ಉದ್ದೇಶ ಮತ್ತು ಆಶಯದಂತೆ ಗ್ಯಾರಂಟಿ ಯೋಜನೆಗಳನ್ನು ತಲುಪಿಸುವಂತೆ ಸಲಹೆ ಮಾಡಿದರು.


ಶಕ್ತಿ, ಗೃಹಲಕ್ಷ್ಮಿ, ಗೃಹಜ್ಯೋತಿ, ಯುವನಿಧಿ, ಅನ್ನಭಾಗ್ಯ ಹೀಗೆ ಪಂಚ ಯೋಜನೆಗಳು ತಲುಪಿದಾಗ ಸರ್ಕಾರಕ್ಕೆ ಹೆಸರು ಬರಲಿದೆ. ಆ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು. ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಸಮಸ್ಯೆಗಳು ಇದ್ದಲ್ಲಿ ಮಾಹಿತಿ ನೀಡುವಂತಾಗಬೇಕು ಎಂದು ಧರ್ಮಜ ಉತ್ತಪ್ಪ ಸಲಹೆ ಮಾಡಿದರು.


ಗ್ಯಾರಂಟಿ ಯೋಜನೆಗಳ ಕುಶಾಲನಗರ ತಾಲೂಕು ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ ಮಾತನಾಡಿ, ಯುವನಿಧಿ ಯೋಜನೆಯಡಿ ಸಲ್ಲಿಕೆಯಾಗಿರುವ ಬಾಕಿ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವಂತೆ ಸಲಹೆ ಮಾಡಿದರು.


ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್.ವೀಣಾ ಮಾತನಾಡಿ, ಗ್ಯಾರಂಟಿ ಯೋಜನೆ ಅನುಷ್ಠಾನದಲ್ಲಿ ವಿಳಂಭ ಮಾಡದೆ, ಕಾಲಮಿತಿಯಲ್ಲಿ ಅರ್ಹರಿಗೆ ಸೌಲಭ್ಯ ಕಲ್ಪಿಸಲು ಪ್ರಯತ್ನಿಸಬೇಕು ಎಂದರು.


ಆಹಾರ ಇಲಾಖೆಯ ಜಂಟಿ ನಿರ್ದೇಶಕ ಕುಮುದಾ ಶರತ್ ಮಾಹಿತಿ ನೀಡಿ, ಜಿಲ್ಲೆಯಲ್ಲಿ ೧.೩೦ ಲಕ್ಷ ಗುರಿಯಲ್ಲಿ ೯೭,೫೭೦ ಜನರಿಗೆ ಅನ್ನಭಾಗ್ಯ ಯೋಜನೆಯಡಿ ಹಣ ಪಾವತಿಯಾಗುತ್ತಿದ್ದು, ಶೇ.೯೮ ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದರು.


ಯುವನಿಧಿ ಯೋಜನೆಯು ಪ್ರತೀ ತಿಂಗಳು ೩೦೦೦ ಮತ್ತು ೧೫೦೦ ನಿರುದ್ಯೋಗಿ ಭತ್ಯೆ ನೀಡುವ ಯೋಜನೆಯಾಗಿದ್ದು, ಅರ್ಹರಿಗೆ ತಲುಪಿಸಲು ಪ್ರಯತ್ನಿಸಲಾಗಿದೆ. ಆ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ೫೬೨ ಜನರಿಗೆ ಯೋಜನೆ ತಲುಪುತ್ತಿದೆ. ಒಟ್ಟಾರೆ ಇದುವರೆಗೆ ೧೦೩೦ ಜನ ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದು ಪ್ರಮುಖರಾದ ರೇಖಾ ಗಣಪತಿ ತಿಳಿಸಿದರು.


ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ನಟರಾಜು ಮಾತನಾಡಿ, ಗೃಹಲಕ್ಷ್ಮಿ ಯೋಜನೆ ಸಂಬಂಧಿಸಿದಂತೆ ಮಾಹಿತಿ ನೀಡಿ ಜೂನ್‌ವರೆಗೆ ಹಣ ಪಾವತಿಯಾಗಿದ್ದು, ಜುಲೈ ತಿಂಗಳ ಹಣ ಪಾವತಿಗೆ ಬಾಕಿ ಇದೆ. ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆಯಡಿ ೧,೧೫,೨೨೯ ಜನರ ಹೆಸರು ನೋಂದಣಿಯಾಗಿದ್ದು, ೧,೧೪,೦೫೬ ಮಂಜೂರಾಗಿದ್ದು, ಶೇ.೯೮.೯೮ ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ತಿಳಿಸಿದರು.


ಸೆಸ್ಕ್ ಎಇಇ ವಿನಯ್ ಕುಮಾರ್ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಗೃಹಜ್ಯೋತಿ ಯೋಜನೆಯಡಿ ೧,೫೩,೬೨೩ ಕುಟುಂಬಗಳಲ್ಲಿ ೧,೫೧,೯೦೭ ಕುಟುಂಬಗಳು ನೋಂದಣಿಯಾಗಿದ್ದು, ಶೇ.೯೮.೮೮ ರಷ್ಟು ಪ್ರಗತಿ ಸಾಧಿಸಲಾಗಿದೆ. ಮೇ ಅಂತ್ಯದವರೆಗೆ ೫೯೦೫.೩೦ ಲಕ್ಷ ರೂ. ಸಹಾಯಧನ ಕಲ್ಪಿಸಲಾಗಿದೆ ಎಂದರು.


ಶಕ್ತಿ ಯೋಜನೆಯಡಿ ಆರಂಭದಿಂದ ಇದುವರೆಗೆ ೬೨,೦೪,೬೧೮ ಮಂದಿ ಮಹಿಳೆಯರು ಪ್ರಯಾಣ ಮಾಡಿದ್ದು, ೨೪.೬೫ ಕೋಟಿ ರೂ. ಭರಿಸಲಾಗಿದೆ ಎಂದು ಕೆಎಸ್‌ಆರ್‌ಟಿಸಿ ಮಡಿಕೇರಿ ಘಟಕ ವ್ಯವಸ್ಥಾಪಕ ಮೆಹಬೂಬ್ ಅಲಿ ತಿಳಿಸಿದರು.


ಸಭೆಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಘಟಕದ ಅಧ್ಯಕ್ಷ ಮೋಹನ್‌ದಾಸ್(ಮಡಿಕೇರಿ), ಜಾನ್ಸನ್(ವಿರಾಜಪೇಟೆ) ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net