

ಲಕ್ಷ್ಮೇಶ್ವರ: ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ಅಲೆಮಾರಿ ಸಮುದಾಯಕ್ಕೆ ಸರ್ಕಾರ ಹಲವು ಕಲ್ಯಾಣ ಕಾರ್ಯಕ್ರಮ ಜಾರಿಗೊಳಿಸಿದೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಎಲ್ಲ ಯೋಜನೆಗಳನ್ನು ಅರ್ಹರಿಗೆ ತಲುಪಿಸಬೇಕು ಎಂದು ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ ಜಿ. ಸೂಚಿಸಿದರು.
ಸಮೀಪದ ಬಾಲೇಹೊಸೂರ ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ ಅಲೆಮಾರಿಗಳ ಕುಂದುಕೊರತೆ ಸಭೆಯಲ್ಲಿ ಅವರು ಮಾತನಾಡಿದರು.
ಅಲೆಮಾರಿ ಹಾಗೂ ಅರೆ ಅಲೆಮಾರಿಗಳಲ್ಲಿ 46 ಜನಾಂಗದವರಿದ್ದು, ಇವರು ಆರ್ಥಿಕ ಮತ್ತು ಅಭಿವೃದ್ಧಿ ಚಟುವಟಿಕೆ ಕೈಗೊಂಡು ಸ್ಥಿರವಾಗಿ ಒಂದು ಕಡೆ ನೆಲೆಸುವಂತೆ ಮಾಡಲು ಕರ್ನಾಟಕ ಅಲೆಮಾರಿ ಮತ್ತು ಅರೆ ಅಲೆಮಾರಿ ನಿಗಮದಿಂದ ವಿವಿಧ ಯೋಜನೆ ಜಾರಿಗೆ ತರಲಾಗಿದೆ. ಗದಗ ಜಿಲ್ಲೆಯಲ್ಲಿ ಅಲೆಮಾರಿ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದು, ನಿಗಮ ಅಲೆಮಾರಿ ಜನಾಂಗದ ಅಭಿವೃದ್ಧಿಗೆ ಪೂರಕವಾಗಿದೆ. ಪ್ರತಿ ಜಿಲ್ಲೆಯಲ್ಲೂ ಪ್ರವಾಸ ಮಾಡಿ ಅಲೆಮಾರಿಗಳ ಸ್ಥಿತಿಗತಿ, ಸಮಸ್ಯೆಗಳಲ್ಲಿ ಪರಿಶೀಲಿಸಿ ಸರ್ಕಾರದಿಂದ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಲಾಗುತ್ತಿದೆ ಎಂದರು.
ಸಮುದಾಯದ ಮಕ್ಕಳ ವಿದ್ಯಾಭ್ಯಾಸಕ್ಕೆ ಪಾಲಕರು ಆದ್ಯತೆ ನೀಡಬೇಕು. ಅಲೆಮಾರಿಗಳು ಸಮಾಜದ ಮುಖ್ಯವಾಹಿನಿಗೆ ಬರಬೇಕು. ಪ್ರತಿ ಹಂತದಲ್ಲಿ ಸರ್ಕಾರ ಸವಲತ್ತು ಒದಗಿಸುತ್ತಿದ್ದು, ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಘಂಟಿಚೋರ್ಸ್ ಮತ್ತು ಗಿರಣಿಒಡ್ಡರ ಜಾತಿ ಒಂದೇ ಎಂದು ಹೇಳಿದ ಅವರು ಸ್ಥಾನಿಕವಾಗಿ ಚೌಕಾಸಿ ಮಾಡಿ ಜಾತಿ ಪ್ರಮಾಣ ಪತ್ರ ನೀಡಬೇಕು. ಅಲೆಮಾರಿಗಳು ಯೋಜನೆಗಳಿಂದ ವಂಚಿತರಾಗಬಾರದು. ಯೋಜನೆ ಸರಿಯಾಗಿ ಕಾರ್ಯಗತವಾಗದಿದ್ದಲ್ಲಿ ಅಧಿಕಾರಿಗಳನ್ನು ಹೊಣೆ ಮಾಡಿ, ಕ್ರಮಕ್ಕೆ ಸೂಚಿಸಲಾಗುವುದು ಎಂದು ಹೇಳಿದರು.
ಸೌಲಭ್ಯ ಒದಗಿಸಲು ಮನವಿ: ಅನೇಕರು ಜಾತಿ, ಆದಾಯ ಪ್ರಮಾಣಪತ್ರ, ನಿವೇಶನಗಳ ಬಗ್ಗೆ ಅಲೆಮಾರಿಗಳ ಸ್ಥಿತಿಗತಿ, ಸಮಸ್ಯೆ ಪರಿಶೀಲಿಸಿ ಹೆಚ್ಚಿನ ಅನುದಾನ ದೊರೆಯುವಂತೆ ಮಾಡಬೇಕು. ರುದ್ರಭೂಮಿ ಒದಗಿಸುವುದು ಸೇರಿದಂತೆ ಅನೇಕ ಬೇಡಿಕೆ ಈಡೇರಿಸುವಂತೆ ಅಧ್ಯಕ್ಷೆ ಪಲ್ಲವಿ.ಜಿ. ಅವರಿಗೆ ಮನವಿ ಮಾಡಿದರು. ಶಿರಹಟ್ಟಿಯ ಪ.ಜಾ. ಸುಡಗಾಡಸಿದ್ಧರ ಕ್ಷೇಮಾಭಿವೃದ್ದಿ ಸಂಘದವರು ವಸತಿ ಯೋಜನೆಯಡಿ ನಿವೇಶನ ಹಾಗೂ ಮನೆ ಮಂಜೂರು ಮಾಡುವಂತೆ ಮನವಿ ಸಲ್ಲಿಸಿದರು. ಲಕ್ಷ್ಮೇಶ್ವರದ ಬುಡ್ಗಜಂಗಮರಿಗೆ ಸರ್ಕಾರದ ಯಾವುದೇ ಸೌಲಭ್ಯಗಳು ದೊರಕಿಲ್ಲ, ರೇಷನ್ ಕಾರ್ಡ್, ನಿವೇಶನ ಒದಗಿಸುವಂತೆ ಮನವಿ ಮಾಡಿದರು. ಮನವಿ ಸ್ವೀಕರಿಸಿದ ಅಧ್ಯಕ್ಷರು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಅಧ್ಯಕ್ಷೆ ಪಲ್ಲವಿ.ಜಿ. ಅವರನ್ನು ಸನ್ಮಾನಿಸಲಾಯಿತು. ತಹಸೀಲ್ದಾರ್ ವಾಸುದೇವ ಸ್ವಾಮಿ, ಸಮಾಜಕಲ್ಯಾಣ ಇಲಾಖೆ ತಾಲೂಕು ಸಹಾಯಕ ನಿರ್ದೇಶಕ ಗೋವಿಂದಪ್ಪ ಲಮಾಣಿ, ಗ್ರಾಮ ಆಡಳಿತಾಧಿಕಾರಿ ಕೃಷ್ಣಮೂರ್ತಿ, ಕಂದಾಯ ನಿರೀಕ್ಷಕ ನಧಾಪ್, ತಾಪಂ ಇಒ ಕೃಷ್ಣಪ್ಪ ಧರ್ಮರ, ಪಿಡಿಒ ಶೇಖರಗೌಡ ವಡಕನಗೌಡ್ರ, ಅಲೆಮಾರಿ ಜಿಲ್ಲಾ ನಾಮನಿದೇಶಿತ ಸದಸ್ಯರಾದ ದುರ್ಗೇಶ ವಿಭೂತಿ, ಮೋಹನ ಭಜಂತ್ರಿ, ಅಲೆಮಾರಿ ಜನಾಂಗದ ಜಿಲ್ಲಾ ಗೌರವಾಧ್ಯಕ್ಷ ಕೆ.ಎಚ್. ಬೇಲೂರ, ಲೋಕೇಶ ಕಟ್ಟಿಮನಿ, ಬಸವರಾಜ ಹರಕೇರಿ, ಶಿವಕುಮಾರ ಕಡೆಮನಿ ಇತರರಿದ್ದರು.