ಅಧಿಕಾರಿಗಳಿಗೆ ಶಾಸಕ ವಿನಯ ಕುಲಕರ್ಣಿ ಸೂಚನೆ: ಸರ್ಕಾರದ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಿ

18 Dwd 4
Published on

ವಿಜಯವಾಣಿ ಸುದ್ದಿಜಾಲ ಕಿತ್ತೂರು

ಸರ್ಕಾರದ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಬೇಕು. ಇದರಿಂದ ಮಧ್ಯವರ್ತಿಗಳ ಹಾವಳಿ ತಪ್ಪುತ್ತದೆ. ಜತೆಗೆ ಸರ್ಕಾರ ಅನುಷ್ಠಾನಗೊಳಿಸುವ ಮಹತ್ವಾಕಾಂಕ್ಷಿ ಯೋಜನೆಗಳು ಯಶಸ್ವಿಯಾಗುತ್ತವೆ ಎಂದು ಶಾಸಕ ವಿನಯ ಕುಲಕರ್ಣಿ ಹೇಳಿದರು.

ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿ ಸೋಮವಾರ ಆಯೋಜಿಸಿದ್ದ ಧಾರವಾಡ 71 ಕ್ಷೇತ್ರದ ಜನಸಂಪರ್ಕ ಸಭೆಯಲ್ಲಿ ಅವರು ಮಾತನಾಡಿದರು.

* ಫಲಾನುಭವಿಗಳಿಗೆ ಸಲಕರಣೆ ವಿತರಣೆ:

ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಕಾರಣಗಳಿಗಾಗಿ ತಡೆ ಹಿಡಿಯಲ್ಪಟ್ಟಿದ್ದ ವೃದ್ಯಾಪ್ಯ ವೇತನ ಮತ್ತು ಮಾಸಾಶನ ತೊಂದರೆಗಳನ್ನು ಸರಿದೂಗಿಸಿ ಫಲಾನುಭವಿಗಳಿಗೆ ಆದೇಶ ಪತ್ರ ನೀಡಲಾಯಿತು. ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳ ರೈತ ಫಲಾನುಭವಿಗಳಿಗೆ ಸಣ್ಣ ಟ್ರ‍್ಯಾಕ್ಟರ್, ಕೂರಿಗೆ, ಕಬ್ಬಿಣದ ಕುಂಟಿ, ರೋಟಾವೇಟರ್, ನೇಗಿಲು, ಕಬ್ಬಿನ ಕೋಲಿ ಕತ್ತರಿಸುವ ಯಂತ್ರ, ಒಕ್ಕಣೆಯಂತ್ರಗಳನ್ನು ಶಾಸಕ ವಿನಯ ಕುಲಕರ್ಣಿ ಫಲಾನುಭವಿಗಳಿಗೆ ಹಸ್ತಾಂತರಿಸಿದರು.

ತಹಸೀಲ್ದಾರ್ ದೊಡ್ಡಪ್ಪ ಹೂಗಾರ, ತಾಲೂಕು ಪಂಚಾಯಿತಿ ಇಒ ಗಂಗಾಧರ ಕಂದಕೂರ, ಸಹಾಯಕ ಕೃಷಿ ನಿರ್ದೇಶಕ ರಾಜಶೇಖರ ಅಣಗೌಡರ, ಕೃಷಿ ಅಽಕಾರಿ ರೇಖಾ ಬೆಳ್ಳಟ್ಟಿ, ಮುಖಂಡರಾದ ಅರವಿಂದ ಏಗನಗೌಡರ, ಪ್ರಶಾಂತ ಕೇಕರೆ, ಇತರರಿದ್ದರು.

ಹಳ್ಳಿಗಳ ಸೇರ್ಪಡೆಗೆ ಒತ್ತಾಯವಿಲ್ಲ

ಸರ್ಕಾರ ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ಘೋಷಿಸಿದೆ. ನಗರ ಸುತ್ತಲಿನ ಕೆಲ ಗ್ರಾಮಸ್ಥರು ಪಾಲಿಕೆಗೆ ಸೇರಲು ಹಿಂದೇಟು ಹಾಕುತ್ತಿದ್ದಾರೆ. ಗ್ರಾಮಗಳನ್ನು ಒತ್ತಾಯಪೂರ್ವಕ ಸೇರ್ಪಡೆ ಮಾಡದೆ ನೂತನ ಪಾಲಿಕೆ ಆಸ್ತಿತ್ವಕ್ಕೆ ತರಲಾಗುವುದು ಎಂದು ಶಾಸಕ ವಿನಯ ಕುಲಕರ್ಣಿ ಹೇಳಿದರು. ಹಳ್ಳಿಗಳನ್ನು ಸೇರ್ಪಡೆ ಮಾಡುತ್ತೇವೆ ಎಂದು ಹೇಳಿಲ್ಲ. ಗ್ರಾಮಗಳ ಅಕ್ಕಪಕ್ಕ ದೊಡ್ಡ ದೊಡ್ಡ ಬಡಾವಣೆಗಳು ಬೆಳೆದಿವೆ. ಅಲ್ಲಿ ನೀರು, ಒಳಚರಂಡಿ ಸೇರಿ ಮೂಲ ಸೌಕರ್ಯಗಳನ್ನು ಒದಗಿಸುವುದು ಪಂಚಾಯಿತಿಗಳಿಗೆ ಕಷ್ಟವಾಗುತ್ತದೆ ಎಂದರು.

ಕಿರುಕುಳ ಸಹಿಸುವುದಿಲ್ಲ

ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಜನಸಾಮಾನ್ಯರಿಗೆ ಪೊಲೀಸರಿಂದ ಕಿರುಕುಳ ಆಗುತ್ತಿರುವ ದೂರುಗಳು ಬಂದಿವೆ. ರಸ್ತೆಯಲ್ಲಿ ನಿಂತು ವಾಹನಗಳನ್ನು ತಡೆಯುವುದು, ಭಾರಿ ಪ್ರಮಾಣದ ದಂಡ ಹಾಕಲಾಗುತ್ತಿದೆ. ಅಗತ್ಯ ದಾಖಲೆಗಳನ್ನು ಪರಿಶೀಲಿಸಲು ಯಾವ ಅಭ್ಯಂತರ ಇಲ್ಲ. ಆದರೆ, ಅನವಶ್ಯಕವಾಗಿ ಕಿರುಕುಳ ನೀಡಿ 5ರಿಂದ 10 ಸಾವಿರ ರೂಪಾಯಿ ದಂಡ ಹಾಕಲಾಗುತ್ತಿದೆ. ಪೊಲೀಸರು ಈ ಕ್ರಮ ಕೈ ಬಿಡಬೇಕು ಎಂದು ಶಾಸಕ ವಿನಯ ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net