

ಮುಳಬಾಗಿಲು: ಆಹಾರ ಇಲಾಖೆಯಲ್ಲಿ ಆಹಾರ ಎತ್ತುವಳಿಯಾದ ನಂತರ ವಿತರಣೆಗೆ ಸಮಯ ತೆಗೆದುಕೊಳ್ಳುತ್ತಿದ್ದು, ಸಮಯಕ್ಕೆ ಸರಿಯಾಗಿ ಆಹಾರ ವಿತರಣೆಯಲ್ಲಿ ಅಕ್ರಮ ನಡೆಯುತ್ತಿವೆ ಎಂಬ ದೂರುಗಳು ಬರುತ್ತಿವೆ. ಈ ಬಗ್ಗೆ ಅಧಿಕಾರಿಗಳು ಎಚ್ಚರವಹಿಸಬೇಕು ಎಂದು ಗ್ಯಾರಂಟಿ ಯೋಜನೆಗಳ ಸಮಿತಿಯ ತಾಲೂಕು ಅಧ್ಯಕ್ಷ ಕೊಲದೇವಿ ಕೆ.ಎನ್.ಉಮಾಶಂಕರ ತಿಳಿಸಿದರು.
ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸರ್ಕಾರದ ಗ್ಯಾರಂಟಿ ಯೋಜನೆಗಳ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಪಡಿತರ ಆಹಾರ ಧಾನ್ಯಗಳ ವಿವರವನ್ನು ಸೂಚನಾ ಲಕದಲ್ಲಿ ನಮೂದಿಸಿ, ಪ್ರತಿ ಕಾರ್ಡ್ದಾರರಿಗೆ ಅಳತೆಯಲ್ಲಿ ಮೋಸವಿಲ್ಲದೆ ನಿಗದಿತ ಪಡಿತರ ವಿತರಿಸುತ್ತಿರುವ ಬಗ್ಗೆ ಅಧಿಕಾರಿಗಳು ಗಮನಹರಿಸಬೇಕು ಎಂದು ಸೂಚಿಸಿದರು.
ಗೃಹಲಕ್ಷ್ಮೀ ಯೋಜನೆಯಡಿ ಜುಲೈ, ಆಗಸ್ಟ್, ಸೆಪ್ಟೆಂಬರ್ ಮೂರು ತಿಂಗಳು ಅನುದಾನ ಬಿಡುಗಡೆ ಬಾಕಿ ಇದ್ದು, ಜಿಲ್ಲಾ ಕೇಂದ್ರ ಕಚೇರಿಯಿಂದ ಬಿಡುಗಡೆಯಾದ ನಂತರ ಮಾಹಿತಿ ತಿಳಿಸುವುದಾಗಿ ಹೇಳಿದರು.
ಸಭೆಗೆ ಗ್ಯಾರಂಟಿ ಯೋಜನೆಗಳ ಸದಸ್ಯರು ಹಾಗೂ ಇಲಾಖೆ ಅಧಿಕಾರಿಗಳು ಹಾಜರಿದ್ದು, ಇಂದಿನ ಸಭೆಯ ನಡವಳಿಗಳನ್ನು ಸಭೆಯಲ್ಲಿ ತಿಳಿಸಲಾಯಿತು. ಎಲ್ಲ ಇಲಾಖೆಗಳ ಮಾಹಿತಿಯನ್ನು ಸಭೆಯಲ್ಲಿ ಮಂಡಿಸಲಾಯಿತು.
ಕೆಎಸ್ಆರ್ಟಿಸಿ ಇಲಾಖೆಯಿಂದ ಎಂ.ಹೊಸಹಳ್ಳಿ ಮಾರ್ಗವಾಗಿ, ಸಾತನೂರು ದಿನ್ನಹಳ್ಳಿ ಮಾರ್ಗವಾಗಿ, ಹರಪನಾಯಕನಹಳ್ಳಿ ಕ್ರಾಸ್ ಎಚ್.ಗೊಲ್ಲಹಳ್ಳಿ ಕ್ರಾಸ್, ತಾವರೆಕೆರೆ ಮಾರ್ಗವಾಗಿ ಹೋಬಳಿ ಕೇಂದ್ರ ದುಗ್ಗಸಂದ್ರಕ್ಕೆ ಬೆಳಗ್ಗೆ 9.30ಕ್ಕೆ ಚಾಲನೆ ನೀಡಲು ಸೂಚಿಸಲಾಯಿತು. ಕಾಡೇನಹಳ್ಳಿ ಪೆದ್ದೂರು ಬೈಯಪ್ಪನಹಳ್ಳಿ, ಚಿನ್ನಹಳ್ಳಿ ಮಾರ್ಗವಾಗಿ ಚಾಲನೆ ಮಾಡಲು ಸೂಚಿಸಲಾಯಿತು.
ಯುವನಿಧಿಯಿಂದ ಬಾಕಿ ಉಳಿದಿರುವ ವಿದ್ಯಾರ್ಥಿಗಳ ಮಾಹಿತಿಯನ್ನು ಪಡೆದು ಮುಂದಿನ ತಿಂಗಳು ನೊಂದಣಿ ಮಾಡಿಸಿಕೊಳ್ಳಲು ಹಾಗೂ ಗ್ರಾಪಂಗಳಲ್ಲಿ ಮತ್ತು ಗ್ರಾಮ ಸಭೆಗಳಲ್ಲಿ ಸದಸ್ಯರಿಗೆ ಮಾಹಿತಿ ತಿಳಿಸಿದಲ್ಲಿ ಯುವನಿಧಿಯಿಂದ ವಂಚಿತರಾಗಿರುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವುದು ಹೇಳಿದರು.
ಗೃಹಲಕ್ಷ್ಮೀ ಯೋಜನೆಯಡಿ ಬಾಕಿ ಉಳಿದಿರುವ ಫಲಾನುಭವಿಗಳು ನೋಂದಣಿ ಮಾಡಿಸಿ ಶೇ. 100 ಪ್ರಗತಿ ಸಾಧಿಸಲು ಸಭೆಯಲ್ಲಿ ಸೂಚಿಸಿದರು.
ಗ್ಯಾರಂಟಿ ಸಮಿತಿ ಸದಸ್ಯರಾದ ಪಿ.ಎಂ.ಸದಾಶಿವ, ರಾಮಕೃಷ್ಣಾರೆಡ್ಡಿ, ಉದಯಕುಮಾರ್, ಸುಬ್ರಮಣ ರೆಡ್ಡಿ, ಮಧುಸೂದನ್, ರಾಮಾಂಜಿ ಇದ್ದರು.