

ದಾಂಡೇಲಿ: ವಸತಿ ಯೋಜನೆಯಡಿ ಅಧಿಕಾರಿಗಳು ತ್ವರಿತವಾಗಿ ಮನೆ ನಿರ್ಮಿಸಿ ಫಲಾನುಭವಿಗಳಿಗೆ ನೀಡಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಂಸದ ವಿಶ್ವೇಶ್ವರ ಕಾಗೇರಿ ಸೂಚಿಸಿದರು.
ನಗರಸಭೆ ಸಭಾಂಗಣದಲ್ಲಿ ಬುಧವಾರ ಕೇಂದ್ರ ಸರ್ಕಾರದ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 2018-19ನೇ ಸಾಲಿನಲ್ಲಿ ನಿರ್ಮಾಣವಾಗಬೇಕಿದ್ದ 1100 ಮನೆಗಳಲ್ಲಿ 108 ಮನೆಗಳು ಮಾತ್ರ ಫಲಾನುಭವಿಗಳಿಗೆ ವಿತರಣೆಯಾಗಿದ್ದು, 992 ಮನೆಗಳು ಈವರೆಗೂ ಪೂರ್ಣಗೊಂಡಿಲ್ಲ . ಈ ರೀತಿಯಾದರೆ 70 ಸಾವಿರ ರೂ. ವಂತಿಗೆ ತುಂಬಿದ ಫಲಾನುಭವಿಗಳ ಗತಿ ಏನಾಗಬೇಕು ಎಂದು ಪ್ರಶ್ನಿಸಿದರು.
ಸ್ವಚ್ಛ ಭಾರತ ಮಿಷನ್ ಯೋಜನೆಯಲ್ಲಿ ನಗರದಲ್ಲಿ ಶೌಚಗೃಹ ಹಾಗೂ ಕಸ ಸಂಗ್ರಹಣೆ, ನಿರ್ವಹಣೆ ಕುರಿತು ಕೈಗೊಂಡಿರುವ ಕ್ರಮಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದರು.
ವಾಜಪೇಯಿ ಮತ್ತು ಅಂಬೇಡ್ಕರ್ ವಸತಿ ಯೋಜನೆಗೆ ಸಂಬಂಧಿಸಿದಂತೆ ಮನೆಗಳ ಜಿಪಿಎಸ್ ಸಮಸ್ಯೆಯನ್ನು ಬಗೆಹರಿಸುವಂತೆ ಹಾಗೂ ಫಲಾನುಭವಿಗಳಿಗೆ ಅನುದಾನವನ್ನು ಸೂಕ್ತ ರೀತಿಯಲ್ಲಿ ಬಿಡುಗಡೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಹೆಸ್ಕಾಂ ಅಧಿಕಾರಿ ದೀಪಕ ನಾಯ್ಕ ಮಾತನಾಡಿ, ಸೂರ್ಯಘರ್ ಸೋಲಾರ್ ಯೋಜನೆಯಡಿ 6 ಫಲಾನುಭವಿಗಳಿದ್ದಾರೆ ಎಂದರು. ಯೋಜನೆ ಇನ್ನಷ್ಟು ಪರಿಣಾಮಕಾರಿಯಾಗಿಸಲು ಅಗತ್ಯ ಕ್ರಮಕೈಕೊಳ್ಳುವಂತೆ ಸಂಸದರು ಸೂಚಿಸಿದರು.
ಮಾಜಿ ಶಾಸಕ ಸುನಿಲ ಹೆಗಡೆ, ತಹಸೀಲ್ದಾರ್ ಶೈಲೇಶ ಪರಮಾನಂದ, ಪೌರಾಯುಕ್ತ ವಿವೇಕ ಬನ್ನೆ, ನಗರಸಭೆ ಅಧ್ಯಕ್ಷ ಅಶ್ಪಾಕ ಶೇಖ, ಉಪಾಧ್ಯಕ್ಷೆ ಶಿಲ್ಪಾ ಕೊಡೆ, ಸ್ಥಾಯಿ ಸಮಿತಿ ಅಧ್ಯಕ್ಷೆ ಸುಧಾ ರಾಮಲಿಂಗ ಜಾಧವ, ಬಿಜೆಪಿ ಮಂಡಳ ಅಧ್ಯಕ್ಷ ಬುದವಂತಗೌಡ ಪಾಟೀಲ, ತಾಪಂ ಇಒ ಟಿ.ಎಸ್. ಹಾದಿಮನಿ ಇತರರಿದ್ದರು.