

ಹಾಸನ: ಕೇಂದ್ರ ಸರ್ಕಾರ ನೀಡಿರುವ ಯೋಜನೆಗಳನ್ನು ಪ್ರತಿ ಮನೆ ಮನೆಗೂ ತಲುಪಿಸಲು ಗ್ರಾಮ ಚಲೋ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಮುಖಂಡ ಜಿವಿಟಿ ಬಸವರಾಜ್ ಹೇಳಿದರು.
ಅರಸೀಕೆರೆ ನಗರದ ಬಸವೇಶ್ವರ ವೃತ್ತದಲ್ಲಿ ಶನಿವಾರ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರನ್ನು ಉದ್ದೇಶಿಸಿ ಮಾತನಾಡಿದರು. ಜನರ ಆರೋಗ್ಯ ರಕ್ಷಣೆಗಾಗಿ ಆಯುಷ್ಮಾನ್ ಭಾರತ್, ರೈತನ ಸಂಕಷ್ಟ ನಿವಾರಣೆಗೆ ಕಿಸಾನ್ ಸಮ್ಮಾನ್, ಉಜ್ವಲಾ, ಶುದ್ಧ ಕುಡಿಯುವ ನೀರು ಒದಗಿಸುವ ಜಲಜೀವನ್ ಮಿಷನ್, ಶಾಸನ ಸಭೆಯಲ್ಲಿ ಮಹಿಳಾ ಪ್ರಾತಿನಿಧ್ಯಕ್ಕಾಗಿ ನಾರಿಶಕ್ತಿ ಯೋಜನೆ ಜತೆಗೆ ಜನೌಷಧ ಕೇಂದ್ರಗಳನ್ನು ತೆರೆಯಲಾಗಿದೆ.
ಇದಲ್ಲದೆ ಮುದ್ರಾ, ಪ್ರಧಾನಮಂತ್ರಿ ಆವಾಸ್ ವಸತಿ, ಬೆಳೆ ವಿಮೆ, ಅಟಲ್ ಪಿಂಚಣಿ ಸೇರಿದಂತೆ ನೂರಾರು ಜನಪರ ಕಾರ್ಯಕ್ರಮಗಳನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ದೇಶದ ಜನರಿಗೆ ನೀಡಿದೆ. ಈ ಎಲ್ಲ ಅಭಿವೃದ್ಧಿ ಕಾಮಗಾರಿಗಳ ಸಮಗ್ರ ಮಾಹಿತಿಯನ್ನು ಮನೆ ಮನೆಗೆ ತೆರಳಿ ಜನರಿಗೆ ತಲುಪಿಸುವ ಮೂಲಕ ಕೇಂದ್ರದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ತರಲು ಹೋರಾಟ ನಡೆಸುತ್ತಿದ್ದೇವೆ ಎಂದರು.
ನಗರಸಭೆ ಸದಸ್ಯೆ ಶ್ವೇತಾ ರಮೇಶ್, ಮುಖಂಡರಾದ ಮುರುಳಿಧರ್, ವಿಜಯಕುಮಾರ್, ವಾಸು, ರವಿ,ಚೇತನ್ ಜೈನ್, ವಿನೋದ್ ಕುಟ್ಟಿ,ಮೇಘನಾದ್, ಶಿವರಾಜ್,ಯತೀಶ್, ಮಂಜುನಾಥ್ ಇದ್ದರು.