

ಮೈಸೂರು: ಆತ್ಮಹತ್ಯೆ ಮಾಡಿಕೊಂಡಿರುವ ರೈತರ ಕುಟುಂಬದವರಿಗೆ ಸರ್ಕಾರದಿಂದ ಸಿಗಬಹುದಾದ ಎಲ್ಲ ಸವಲತ್ತುಗಳನ್ನು ಗರಿಷ್ಠ ಪ್ರಮಾಣದಲ್ಲಿ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜ್ ನಿರ್ದೇಶನ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸೋಮವಾರ ಜಿಲ್ಲಾ ಮಟ್ಟದ ಉಸ್ತುವಾರಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಮುಂದೆ ಜಿಲ್ಲಾ ಮಟ್ಟದ ಉಸ್ತುವಾರಿ ಸಭೆಯನ್ನು ಪ್ರತಿ ತಿಂಗಳಿಗೆ ಎರಡು ಬಾರಿ ನಡೆಸಲಾಗುವುದು. ಇದರಿಂದ ರೈತರ ಕುಟುಂಬಗಳಿಗೆ ನೆರವು ನೀಡಲು ಹಾಗೂ ಸಮರ್ಪಕ ಉಸ್ತುವಾರಿ ನಡೆಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಆಗಬಾರದು. ಒಂದು ವೇಳೆ ಹಾಗೇನಾದರೂ ಆದಲ್ಲಿ 24 ಗಂಟೆಯೊಳಗಾಗಿ ಅಧಿಕಾರಿಗಳು ಭೇಟಿ ನೀಡಿ, ರೈತ ಕುಟುಂಬಕ್ಕೆ ಸ್ಪಂದಿಸಬೇಕು. ರೈತರ ಮಕ್ಕಳ ವಿದ್ಯಾಭ್ಯಾಸಕ್ಕೆ ಅಗತ್ಯ ಸಹಕಾರ ನೀಡಬೇಕು ಎಂದು ಅವರು ತಿಳಿಸಿದರು.
ವಿಧವಾ ವೇತನ, ಹಾಸ್ಟೆಲ್ ವ್ಯವಸ್ಥೆ, ಆಯುಷ್ಮಾನ ಕಾರ್ಡ್ ಇತ್ಯಾದಿ ಸೌಲಭ್ಯಗಳನ್ನು ತ್ವರಿತವಾಗಿ ಒದಗಿಸಬೇಕು. ಜನರನ್ನು ಸುಮ್ಮನೆ ಕಚೇರಿಗೆ ಅಲೆದಾಡುವಂತೆ ಮಾಡಬಾರದು ಎಂದು ಹೇಳಿದರು.
ಆರೋಗ್ಯ ಇಲಾಖೆ ಅಧಿಕಾರಿಗಳು, ಡಿಡಿಎ, ಎಡಿಎ, ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಇದ್ದರು.