

ಚಿಕ್ಕಮಗಳೂರು: ಜಿಪಂ, ತಾಪಂ ಕ್ಷೇತ್ರಗಳ ಮರು ವಿಂಗಡಣೆ ಮಾಡಲು ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಕರಡು ಪ್ರಸ್ತಾವನೆ ಸಂಪೂರ್ಣ ಅವೈಜ್ಞಾನಿಕವಾಗಿದೆ. ಈ ಬಗ್ಗೆ ಆಕ್ಷೇಪಣೆ ಸಲ್ಲಿಸಿರುವುದಾಗಿ ಮಾಜಿ ಶಾಸಕ ವೈಎಸ್‍ವಿ ದತ್ತ ತಿಳಿಸಿದರು. ಕಳೆದ ಚುನಾವಣೆಯ ಸಂದರ್ಭದಲ್ಲಿ ಕ್ಷೇತ್ರ ಮರು ವಿಂಗಡಣೆ ಮಾಡಿದ ಸಂದರ್ಭ ಮುಂದಿನ ಹತ್ತು ವರ್ಷಗಳ ಅವಧಿಗೆ ಇದನ್ನೇ ಮುಂದುವರಿಸಲಾಗುವುದು ಎಂದು ತಿಳಿಸಲಾಗಿತ್ತು. ಆದರೆ ಐದೇ ವರ್ಷದಲ್ಲಿ ಬದಲಾವಣೆ ಮಾಡಲಾಗುತ್ತಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಕ್ಷೇತ್ರ ಸಮಪಾತ ನೋಡಿಕೊಳ್ಳಬೇಕು:
ಇದು ತನ್ನ ತೀರ್ಮಾನ ಎಂದು ಸ್ವಾಯತ್ತ ಸಂಸ್ಥೆಯಾಗಿರುವ ರಾಜ್ಯ ಚುನಾವಣಾ ಆಯೋಗ ನಿರಾಕರಿಸಬೇಕಿತ್ತು. ಆದರೆ ಇಂತಹ ಸ್ವಾಯತ್ತ ಸಂಸ್ಥೆಗಳು ಸರ್ಕಾರದ ಕೈಗೊಂಬೆಗಳಾಗಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕಡೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸಾಮಾನ್ಯವಾಗಿ 8-9 ಗ್ರಾಪಂಗಳ ವ್ಯಾಪ್ತಿಯ ಒಂದು ಜಿಪಂ ಕ್ಷೇತ್ರ, ಒಂದು ತಾಪಂ ಕ್ಷೇತ್ರಕ್ಕೆ ದೊಡ್ಡದಿದ್ದರೆ ಎರಡು ಗ್ರಾಪಂ, ಸಣ್ಣದಿದ್ದರೆ ಮೂರು ಗ್ರಾಪಂ ಒಳಗೊಂಡಿರುತ್ತದೆ. ಈ ರೀತಿ ಕ್ಷೇತ್ರ ಮರು ವಿಂಗಡಣೆ ಸರ್ವ ಸದಸ್ಯರಿಗೆ ಸಮಪಾತ ಇರುವಂತೆ ನೋಡಿಕೊಳ್ಳಬೇಕಾದುದು ನಿಯಮ ಎಂದರು.
ಭೌಗೋಳಿಕ ಅಸಮಾನತೆ:
ಕರಡು ಪ್ರಸ್ತಾವನೆಯಲ್ಲಿ ಒಂದು ಜಿಪಂ ಕ್ಷೇತ್ರಕ್ಕೆ ತಲಾ 8-9 ಗ್ರಾಪಂಗಳಿರಬೇಕು. ಇದೀಗ ನನ್ನ ಕ್ಷೇತ್ರದಲ್ಲಿ ನಾಲ್ಕು ಜಿಪಂ ಕ್ಷೇತ್ರಗಳಿಗೆ ಮತದಾರರ ಸಂಖ್ಯೆ ತಲಾ 23ರಿಂದ 24 ಸಾವಿರ ಇದೆ. ಎರಡು ಜಿಪಂ ಕ್ಷೇತ್ರಗಳಲ್ಲಿ ಮಾತ್ರ ತಲಾ 34 ಸಾವಿರ ಜನಸಂಖ್ಯೆ ಇದೆ. ಇಲ್ಲಿರುವ ನಾಲ್ಕು ಜಿಪಂ ಕ್ಷೇತ್ರದ ಅಭ್ಯರ್ಥಿ 10ರಿಂದ 12 ಕಿಮೀ ವ್ಯಾಪ್ತಿಯಲ್ಲಿ ಇಡೀ ಕ್ಷೇತ್ರ ಸಾಗುವಂತಿದ್ದರೆ, ಇದೀಗ 34 ಸಾವಿರ ಜನಸಂಖ್ಯೆ ಹೊಂದಿರುವ ಜಿಪಂ ಕ್ಷೇತ್ರದ ಅಭ್ಯರ್ಥಿಗಳು ತಲಾ 40 ಕಿಮೀ ಅಂತರದವರೆಗೆ ಸಂಚರಿಸಬೇಕಾಗುತ್ತದೆ ಎಂದು ಅವರು ಹೇಳಿದರು.
ಬದಲಾವಣೆಗೆ ಸಕಾರಣವಿದೆಯೇ?:
ಈ ಹಿಂದೆ ಇದ್ದ ಯಗಟಿ ಜಿಪಂ ಕ್ಷೇತ್ರವನ್ನು ಪರಿವರ್ತಿಸಲಾಗಿದ್ದು, ಅಲ್ಲಿ ಅಭ್ಯರ್ಥಿಯಾಗುವವರು ಒಂದು ಹಳ್ಳಿಯ ಕೇಂದ್ರದಿಂದ ಚಿತ್ರದುರ್ಗ ಜಿಲ್ಲೆ ಗಡಿಯಲ್ಲಿರುವ ಗ್ರಾಮದವರೆಗೆ 40 ಕಿಮೀ ಸಾಗಬೇಕಿದೆ. ದೊಡ್ಡಪಟ್ಟಣಗೆರೆ ಜಿಪಂ ಕ್ಷೇತ್ರದ ಸಮಸ್ಯೆಯೂ ಇದೇ ರೀತಿ ಆಗಿದೆ ಎಂದು ಆಕ್ಷೇಪಿಸಿದರು. ಸುದೀರ್ಘ ಐತಿಹಾಸಿಕ ಹಿನ್ನೆಲೆ ಇರುವ ಯಗಟಿ ಹಿಂದೆ ಕಡೂರು ಜಿಲ್ಲಾ ಕೇಂದ್ರವಾಗಿದ್ದಾಗ ತಾಲೂಕು ಕೇಂದ್ರವಾಗಿತ್ತು. ಹಿಂದಿನಿಂದಲೂ ಯಗಟಿ ಜಿಪಂ ಕ್ಷೇತ್ರವಾಗೇ ಇತ್ತು. ಈ ಬದಲಾವಣೆ ಸಮಂಜಸವಲ್ಲ. ಈ ಬದಲಾವಣೆಗೆ ಸಕಾರಣವಿದೆಯೇ? ಎಂದು ಪ್ರಶ್ನಿಸಿದರು.
ಸಾಮಾಜಿಕ ನ್ಯಾಯ ಒದಗಿಸಬೇಕು:
ತಾಪಂ ಕ್ಷೇತ್ರಗಳ ಮರು ವಿಂಗಡಣೆಯಲ್ಲೂ ಅಕ್ಕಪಕ್ಕದ ಎರಡು ಗ್ರಾಪಂಗಳನ್ನು ಸೇರಿಸಿ ಒಂದು ಕ್ಷೇತ್ರ ರಚಿಸಬೇಕು. ಆದರೆ ಈಗಿನ ಪ್ರಸ್ತಾವನೆಯಲ್ಲಿ ಮಧ್ಯೆ ಒಂದು ಗ್ರಾಪಂ ಬಿಟ್ಟು ಇನ್ನೊಂದು ಗ್ರಾಪಂ ಅನ್ನು ಸೇರಿಸಿ ಕ್ಷೇತ್ರ ರಚಿಸಲಾಗಿದೆ. ಅಧಿಕಾರಿಗಳು ಸಾಮಾಜಿಕ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಅವಕಾಶ ವಂಚಿತ ಸಮುದಾಯಗಳಿಗೆ ಅನುಕೂಲ ಮಾಡಿಕೊಡಬೇಕು. ಈ ಬಗ್ಗೆ ರಾಜ್ಯ ಚುನಾವಣಾ ಆಯೋಗದ ಗಮನಕ್ಕೆ ತರಲಾಗಿದೆ. ಜಿಲ್ಲಾಧಿಕಾರಿಗೂ ಮನವರಿಕೆ ಮಾಡಿ ಆಕ್ಷೇಪಣೆ ಸಲ್ಲಿಸಲಾಗಿದೆ ಎಂದು ತಿಳಿಸಿದರು. ಜೆಡಿಎಸ್ ಮುಖಂಡರಾದ ಎಚ್.ಎಚ್.ದೇವರಾಜ್, ಯಗಟಿ ತಮ್ಮಯ್ಯ, ಜಿ.ಎಸ್.ಚಂದ್ರಪ್ಪ, ರಾಜಪ್ಪ, ಪ್ರೇಮ್‍ಕುಮಾರ್, ಗಂಗಾಧರ ನಾಯಕ್, ಷಣ್ಮುಖ ಬೋವಿ ಸುದ್ದಿಗೋಷ್ಠಿಯಲ್ಲಿದ್ದರು.
ಆಯೋಗಕ್ಕೆ ಮಾಜಿ ಪ್ರಧಾನಿ ಪತ್ರ:
ಕಡೂರು ವಿಧಾನಸಭಾ ಕ್ಷೇತ್ರದ ಜಿಪಂ ಹಾಗೂ ತಾಪಂ ಕ್ಷೇತ್ರಗಳ ಮರು ವಿಂಗಡಣೆ ಕರಡನ್ನು ಮರು ಪರಿಶೀಲಿಸಬೇಕು ಎಂದು ಮಾಜಿ ಪ್ರಧಾನ ಮಂತ್ರಿ ಎಚ್.ಡಿ.ದೇವೇಗೌಡ ಕೂಡ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ ಎಂದು ಅವರು ಇದೇ ಸಂದರ್ಭ ತಿಳಿಸಿದರು. ಕರಡು ಪ್ರಸ್ತಾವನೆಯಲ್ಲಿ ಹೊಸದಾಗಿ ಮಾಡಿರುವ ಕ್ಷೇತ್ರಕ್ಕೆ ಹೊಸ ನಾಮಕರಣ, ಗ್ರಾಪಂಗಳ ಸಂಖ್ಯೆ, ಜನಸಂಖ್ಯೆ ಪರಿಗಣನೆಯಲ್ಲಿನ ಅಜಗಜಾಂತರ ವ್ಯತ್ಯಾಸವಿದೆ. ಹಾಗಾಗಿ ಇದು ಅವೈಜ್ಞಾನಿಕ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದರು.
ಸದನದಲ್ಲಿ ಖಾಸಗಿ ವಿಚಾರ ಚರ್ಚೆ ಸಲ್ಲ:
ಚಿಕ್ಕಮಗಳೂರು: ಸದನದ ಹೊರಗೆ ನಡೆದಿರುವ ಒಂದು ಖಾಸಗಿ ವಿಚಾರಕ್ಕೆ ಸದನದಲ್ಲಿ ಸಿಕ್ಕ ಮಹತ್ವ ಮತ್ತು ಬೆಲೆಗೆ ನನ್ನ ಆಕ್ಷೇಪವಿದೆ ಎಂದು ಮಾಜಿ ಶಾಸಕ ವೈಎಸ್‍ವಿ ದತ್ತ ಹೇಳಿದರು.ಸೋಮವಾರ ಸಿಡಿ ಪ್ರಕರಣ ಕುರಿತು ಸುದ್ದಿಗಾರರ ಜತೆ ಮಾತನಾಡಿದ ಅವರು, ಸದನದಲ್ಲಿ ಸಾರ್ವಜನಿಕವಾಗಿ ಏನಾಗಿದೆ ಎನ್ನುವ ಬಗ್ಗೆ ಚರ್ಚೆಯಾಗಬೇಕು. ಸದನದ ಹೊರಗೆ ನಡೆದ ಪ್ರಕರಣಗಳನ್ನು ಚರ್ಚೆ ವಿಷಯವಾಗಿ ಸದನದ ಒಳಕ್ಕೆ ತಂದು ಸದನದ ಸಮಯ, ಹಣ ಹಾಳು ಮಾಡುವುದು ಸಮಂಜಸವಲ್ಲ ಎಂದು ಹೇಳಿದರು.
ಚರ್ಚೆಗೆ ತೂಕ-ಘನತೆ ಇರಬೇಕು:
ನಾನು ಜನಪ್ರತಿನಿಧಿಯಾಗಿ 70ರ ದಶಕದಿಂದ ರಾಜಕಾರಣ, ವಿಧಾನಸೌಧ, ಮುಖ್ಯಮಂತ್ರಿಗಳು, ಶಾಸಕರು, ವಿಪಕ್ಷದವರನ್ನು ಹತ್ತಿರದಿಂದ ಕಂಡಿದ್ದೇನೆ. ಅನೇಕ ಮುಖ್ಯಮಂತ್ರಿಗಳ ಜತೆ ಒಡನಾಡಿಯಾಗಿ ಕಾರ್ಯ ನಿರ್ವಹಿಸಿದ್ದೇನೆ. ಗೋಪಾಲಗೌಡರು, ಕಾಗೋಡು ತಿಮ್ಮಪ್ಪ, ವಾಟಾಳ್ ನಾಗರಾಜ್ ಅಂಥವರು ಮಾತನಾಡುತ್ತಾರೆ ಎಂದರೆ ಗಂಟೆಗಟ್ಟಲೆ ಕಾದು ಶಾಸಕರ ಸಹಿ ಹಾಕಿಸಿ ಗ್ಯಾಲರಿಯಲ್ಲಿ ಕೂರುತ್ತಿದ್ದೆವು ಎಂದರು. ದೇವೇಗೌಡರು ವಿಪಕ್ಷ ನಾಯಕರಾಗಿದ್ದಾಗ ನಾಳೆ ಬೆಳಗ್ಗೆ ಏನು ಬಾಂಬ್ ಹಾಕುತ್ತಾರೋ ಎನ್ನುವ ಕುತೂಹಲದಿಂದ ಕಾಯುತ್ತಿದ್ದೆವು. ಒಂದು ಸರ್ಕಾರದ ಆಡಳಿತ ವೈಖರಿ, ಜನರಿಗೆ ನೇರವಾಗಿ ಸಂಬಂಧಿಸಿದ ವಿಚಾರಗಳು ಚರ್ಚೆಯಾಗಬೇಕು. ಅದಕ್ಕೆ ಒಂದು ತೂಕ, ಘನತೆ ಇರಬೇಕು ಎಂದು ಹೇಳಿದರು.