

ಉಪ್ಪಿನಬೆಟಗೇರಿ: ಮಕ್ಕಳಿಗೆ ವ್ಯವಹಾರದ ಅರಿವು ಮೂಡಿಸುವ ಉದ್ದೇಶದಿಂದ ಹನುಮನಕೊಪ್ಪ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ‘ಮಕ್ಕಳ ಸಂತೆ’ ಎಲ್ಲರ ಗಮನ ಸೆಳೆಯಿತು. ಮುದ್ದು ಮಕ್ಕಳು ಹೂವು, ಹಣ್ಣು , ತರಕಾರಿ, ಕಿರಾಣಿ ಸಾಮಗ್ರಿಗಳನ್ನು ಮುಂದಿಟ್ಟುಕೊಂಡು ಅಪ್ಪಟ ವ್ಯಾಪಾರಸ್ಥರಂತೆ ವಹಿವಾಟು ಮಾಡಿದ್ದು ಗ್ರಾಮಸ್ಥರ ಹಾಗೂ ಪಾಲಕರ ಮನಕ್ಕೆ ಮುದ ನೀಡಿತು.
ಶಿಕ್ಷಕ ಕಾಶಪ್ಪ ದೊಡವಾಡ ಮಾತನಾಡಿ, ಶಾಲೆಯಲ್ಲಿ ಮಕ್ಕಳ ಸಂತೆ ನಡೆಸುವುದರಿಂದ ತೂಕದ ಪ್ರಮಾಣ, ಅಳತೆ ಬಗ್ಗೆ ಮಕ್ಕಳಲ್ಲಿ ಅರಿವು ಮೂಡುತ್ತದೆ. ಜತೆಗೆ ತರಕಾರಿ, ಕಿರಾಣಿ ವಸ್ತುಗಳು, ವಿವಿಧ ಬಗೆಯ ಸೊಪ್ಪುಗಳು, ಹೂವು, ಹಣ್ಣುಗಳು ಬೇಳೆ ಕಾಳುಗಳು, ಬಟ್ಟೆ, ಹೋಟೆಲ್ ಪದಾರ್ಥಗಳು ಸೇರಿದಂತೆ ಅನೇಕ ವಸ್ತುಗಳನ್ನು ತಂದು ಮಾರಾಟ ಮಾಡಿರುವುದು ಪಾಲಕರಲ್ಲಿ ಸಂತಸ ಇಮ್ಮಡಿಗೊಳಿಸಿದೆ ಎಂದರು.
ಉಪ್ಪಿನಬೆಟಗೇರಿ ಗ್ರಾಪಂ ಅಧ್ಯಕ್ಷ ಬಸೀರ್ ಅಹ್ಮದ ಮಾಳಗಿಮನಿ ಉದ್ಘಾಟಿಸಿ ಮಾತನಾಡಿದರು. ಎಸ್‌ಡಿಎಂಸಿ ಅಧ್ಯಕ್ಷ ಮೃತ್ಯುಂಜಯ ಯರಗಂಬಳಿಮಠ, ಸಿಆರ್‌ಪಿ ಹೇಮಲತಾ ಢಗೆ, ಶಿವಾನಂದ ಹಟ್ಟಿ, ಮಹಾಂತೇಶ ದೊಡವಾಡ, ತೀರ್ಥಪ್ಪ ಜಾಧವ, ಕಾಶಪ್ಪ ದೊಡವಾಡ, ಸುಶೀಲಮ್ಮ ದೊಡವಾಡ, ಎಸ್.ಎಂ. ಬೊಂಗಾಳೆ, ಶಿವಾನಂದ ಸವಸುದ್ದಿ, ಆರ್.ಎಸ್. ಮನಗೂಳಿ, ಜಿ.ಬಿ. ಡಂಬಳ, ಎ.ಎಂ. ಚಿಕ್ಕಮಠ, ಭಾರತಿ ವಾಲ್ಮೀಕಿ, ಲಕ್ಷ್ಮೀದೇವಿ ಎಂ.ವೈ, ಸರೋಜಾ ತೊರಗಲ್, ತೇಜಸ್ವಿನಿ ಆಯಟ್ಟಿ ಇತರರಿದ್ದರು.
ಸ್ಥಳೀಯರು ಹಾಗೂ ಸುತ್ತಲಿನ ಗ್ರಾಮಸ್ಥರು ಮಕ್ಕಳಿಂದ ಪದಾರ್ಥಗಳನ್ನು ಖರೀದಿಸಿ ಪ್ರೋತ್ಸಾಹ ನೀಡಿದರು.