ಜೈನ ಧರ್ಮ ಪ್ರಚಾರಕ್ಕೆ ಆಚಾರ್ಯ ಶ್ರೀ ವಿದ್ಯಾನಂದರ ಕೊಡುಗೆ ಅನನ್ಯ

1000204394
777216
Published on

  * ಶ್ರವಣಬೆಳಗೊಳದ ಶ್ರೀ ಅಭಿನವ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಭಟ್ಟಾರಕ ಸ್ವಾಮೀಜಿ ಅಭಿಮತ

* ದೆಹಲಿಯಲ್ಲಿ ಆಚಾರ್ಯರ ಜನ್ಮ ಶತಮಾನೋತ್ಸವ *  ನಾಣ್ಯ, ಅಂಚೆಚೀಟಿ ಬಿಡುಗಡೆ ಮಾಡಿದ ಪ್ರಧಾನಿ ಮೋದಿ

 ಶ್ರವಣಬೆಳಗೊಳ : ಜೈನ ಧರ್ಮದ ಸಿದ್ಧಾಂತ ಸಾರವನ್ನು ದೇಶಾದ್ಯಂತ ಪ್ರಚಾರ ಮಾಡುವಲ್ಲಿ ಆಚಾರ್ಯ ಶ್ರೀ ವಿದ್ಯಾನಂದ ಮಹಾರಾಜರ ಸೇವೆ ಅನನ್ಯವಾಗಿದೆ ಎಂದು ಶ್ರವಣಬೆಳಗೊಳದ ದಿಗಂಬರ ಜೈನ ಮಠದ ಶ್ರೀ ಅಭಿನವ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಭಟ್ಟಾರಕ ಸ್ವಾಮೀಜಿ ಹೇಳಿದರು.

ದೆಹಲಿಯ ವಿಜ್ಞಾನ ಭವನದಲ್ಲಿ ಸಂಸ್ಕೃತಿ ಸಚಿವಾಲಯ ಹಾಗೂ ಭಗವಾನ್ ಮಹಾವೀರ ಅಹಿಂಸಾ ಭಾರತಿ ಟ್ರಸ್ಟ್ ಸಹಯೋಗದೊಂದಿಗೆ ಶನಿವಾರ ಆಯೋಜಿಸಿದ್ದ ಆಚಾರ್ಯ ಶ್ರೀ ವಿದ್ಯಾನಂದ ಮಹಾರಾಜರ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಅನುಗ್ರಹ ಸಂದೇಶ ನೀಡಿದರು. ಭಗವಾನ್ ಮಹಾವೀರರ 2,500ನೇ ನಿರ್ವಾಣ ವರ್ಷದ ಮಹೋತ್ಸವ ಸಂದರ್ಭ ದೇಶದಾದ್ಯಂತ ಧರ್ಮಚಕ್ರ ಶ್ರೀ ವಿಹಾರ ಮಾಡುವ ಮೂಲಕ ಧರ್ಮಪ್ರಭಾವನೆ ಮಾಡುವಲ್ಲಿ ಮತ್ತು ಶ್ರವಣಬೆಳಗೊಳದಲ್ಲಿ ಧರ್ಮಚಕ್ರ ಸ್ಥಾಪನೆ ಮಾಡಿದ ಸಂದರ್ಭದಲ್ಲಿ ಆಚಾರ್ಯ ಶ್ರೀ ವಿದ್ಯಾನಂದ ಮಹಾರಾಜರ ಸೇವೆ ಅಮೋಘವಾಗಿತ್ತು ಎಂದು ಸ್ವಾಮೀಜಿ ಸ್ಮರಿಸಿದರು.

ಶ್ರೀಮಠದ ಹಿಂದಿನ ಗುರುಗಳಾಗಿದ್ದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರಿಗೆ ವಿದ್ಯಾನಂದ ಮಹಾರಾಜರು ಮಾರ್ಗದರ್ಶಕರಾಗಿದ್ದರು. 1993 ರಲ್ಲಿ ಶ್ರವಣಬೆಳಗೊಳದ ಬಾಹುಬಲಿ ಸ್ವಾಮಿ 1,000 ನೇ ಮಹಾ ಮಸ್ತಕಾಭಿಷೇಕ ಮಹೋತ್ಸವ ಆಯೋಜನೆ ಮಾಡಿ ವಿಶ್ವವೇ ಈ ಗ್ರಾಮದತ್ತ ತಿರುಗಿ ನೋಡುವಂತೆ ಮಾಡಿದ ಕೀರ್ತಿ ವಿದ್ಯಾನಂದರಿಗೆ ಸಲ್ಲುತ್ತದೆ ಎಂದರು.

ಸೇವೆ ದೊಡ್ಡದು: ಮೋದಿ ಶ್ಲಾಘನೆ

ಪ್ರಧಾನಿ ನರೇಂದ್ರ ಮೋದಿ ಇದೇ ಸಂದರ್ಭದಲ್ಲಿ ಆಚಾರ್ಯ ಶ್ರೀ ವಿದ್ಯಾನಂದ ಮಹಾರಾಜರ ಭಾವಚಿತ್ರದ (100 ರೂ. ಮುಖಬೆಲೆ) ನಾಣ್ಯ ಹಾಗೂ ಅಂಚೆ ಚೀಟಿಯನ್ನು ಪ್ರಧಾನಿ ಬಿಡುಗಡೆಗೊಳಿಸಿದರು. ನಂತರ ಮಾತನಾಡಿದ ಪ್ರಧಾನಿ, ಜೈನ ನೀತಿಶಾಸ್ತ್ರ, ಪ್ರಾಕೃತ ಸಾಹಿತ್ಯ ಮತ್ತು ಶಾಸ್ತ್ರೀಯ ಭಾರತೀಯ ಚಿಂತನೆಯ ಕುರಿತು 50ಕ್ಕೂ ಹೆಚ್ಚು ಗ್ರಂಥಗಳನ್ನು ಬರೆದ ಆಚಾರ್ಯ ವಿದ್ಯಾನಂದರ ಸೇವೆ ದೊಡ್ಡದು ಎಂದು ಕೊಂಡಾಡಿದರು.

ಬಿರುದು ಪ್ರದಾನ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶ್ರವಣಬೆಳಗೊಳದ ಮಠದ ‘ಧರ್ಮ ಚಕ್ರವರ್ತಿ’ ಬಿರುದನ್ನು ಶ್ರೀ ಅಭಿನವ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಪ್ರದಾನ ಮಾಡಿ ಗೌರವಿಸಿದರು. ಆಚಾರ್ಯ ಶ್ರೀ ಪ್ರಜ್ಞಾಸಾಗರ ಮಹಾರಾಜ್ ಇತರರು ಹಾಜರಿದ್ದರು.

  • ದೇಶದ ವಿವಿಧ ಭಾಗಗಳಲ್ಲಿ ಜೈನ ದೇವಾಲಯಗಳ ಪುನರುಜ್ಜೀವನ ಮತ್ತು ಸಾಂಪ್ರದಾಯಿಕ ಶಿಕ್ಷಣದ ಪ್ರಚಾರದಲ್ಲಿ ಆಚಾರ್ಯ ಶ್ರೀ ವಿದ್ಯಾನಂದ ಮಹಾರಾಜರ ಕೊಡುಗೆ ಅಪಾರವಾಗಿದೆ. ಅವರ ಸೇವೆಯನ್ನು ಭಾರತ ಅತ್ಯಂತ ವಿನಮ್ರವಾಗಿ ಸ್ಮರಿಸುತ್ತದೆ. ಅವರ ಅವಿತರ ಪ್ರಯತ್ನಗಳು ಜೈನ ಪರಂಪರೆಯ ಸಂರಕ್ಷಣೆ ಮತ್ತು ಪ್ರಾಚೀನ ಭಾರತೀಯ ಭಾಷೆಗಳ ಪುನರುಜ್ಜೀವನಕ್ಕಾಗಿ ಮೌಲ್ಯಯುತವಾಗಿವೆ. ಅವರ ಜನ್ಮ ಶತಮಾನೋತ್ಸವದಲ್ಲಿ ಭಾಗವಹಿಸಿ ನನಗೆ ಧನ್ಯತೆ ಮೂಡಿದೆ. ನರೇಂದ್ರ ಮೋದಿ ಪ್ರಧಾನಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net