ವಕ್ಫ್ ಆಸ್ತಿಯ ಕಾನೂನು ಬಾಹಿರ ದಾಖಲೆ ಅಳಿಸಿಹಾಕಿ, ಜಿಲ್ಲಾಡಳಿತಕ್ಕೆ ವಿಹಿಂಪ ಮನವಿ

vhp manavi to dc
ವಿಜಯಪುರ ಜಿಲ್ಲಾಡಳಿತಕ್ಕೆ ವಿಶ್ವ ಹಿಂದು ಪರಿಷತ್ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ಸುನೀಲ ಬೈರವಾಡಗಿ, ಜಯಪ್ರಕಾಶ ಅಂಬಲಿ, ಬಸನಗೌಡ ಬಿರಾದಾರ ಮತ್ತಿತರರಿದ್ದಾರೆ.
Published on

ವಿಜಯಪುರ: ಸರ್ಕಾರದ ವಿವಿಧ ಇಲಾಖೆಗಳ ಆಸ್ತಿಯನ್ನು ಕಂದಾಯ ಇಲಾಖೆಯ ದಾಖಲೆಗಳಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿದ್ದು, ಕೂಡಲೇ ಅದನ್ನು ಅಳಿಸಿ ಆಯಾ ಇಲಾಖೆಯ ಹೆಸರು ಸೇರ್ಪಡೆಗೊಳಿಸಿ ಅದನ್ನು ಸರ್ಕಾರಿ ಆಸ್ತಿ ಎಂದು ಘೋಷಿಸಲು ಆಗ್ರಹಿಸಿ ವಿಶ್ವ ಹಿಂದು ಪರಿಷತ್ ಪದಾಧಿಕಾರಿಗಳು ಮಂಗಳವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಐತಿಹಾಸಿಕ ವಿಜಯಪುರ ನಗರದಲ್ಲಿ ಭಾರತೀಯ ಪುರಾತತ್ವ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಕಂದಾಯ ಇಲಾಖೆಗೆ ಸೇರಿರುವ ಆಸ್ತಿಗಳನ್ನು ಕಂದಾಯ ದಾಖಲೆಗಳಲ್ಲಿ ಕಾನೂನು ಬಾಹಿರವಾಗಿ ವಕ್ಫ್ ಸೊತ್ತು ಎಂದು ದಾಖಲಿಸಲಾಗಿದೆ. ಸುಮಾರು 357 ಜಮೀನುಗಳು ವಕ್ಫ್ ಹೆಸರಿನಲ್ಲಿ ದಾಖಲು ಮಾಡುವ ಹುನ್ನಾರ ನಡೆದಿರುವುದು ಕಂಡು ಬಂದಿದೆ. ಇಂತಹ ಕಂದಾಯಿಕ ಬದಲಾವಣೆ ಮಾಡಬೇಕಾದರೆ, ನಿಯಮಾನುಸಾರ ಮಾಡಬೇಕಾಗುತ್ತದೆ. ಇತ್ತೀಚಿಗೆ ಹೈಕೋರ್ಟ್ ಸಹ ಐತಿಹಾಸಿಕ ತೀರ್ಪು ನೀಡಿದ್ದು, ಆ ಪ್ರಕಾರ ಕಂದಾಯ ದಾಖಲೆಗಳಲ್ಲಿ ಬದಲಾವಣೆ ಮಾಡಬೇಕಾದರೆ ಆಸ್ತಿಗೆ ಸಂಬಂಧಪಟ್ಟವರ ಹಾಗೂ ಸ್ಥಾನಿಕ ವಿಚಾರಣೆ ಮಾಡದೇ ಮಾಡುವುದು ಕಾನೂನು ಬದ್ದವಲ್ಲವೆಂದು ಹೇಳಿದೆ. ಹೀಗಾಗಿ ಕಂದಾಯ ದಾಖಲೆಗಳಲ್ಲಿ ಕಾನೂನು ಬಾಹಿರವಾಗಿ ವಕ್ಫ್ ಸೊತ್ತು ಎಂದು ದಾಖಲಿಸುವುದನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.

ಅಪರೂಪದ ಸ್ಮಾರಕಗಳ ಯೋಗ್ಯ ರಕ್ಷಣೆಗಾಗಿ 1914 ರಲ್ಲಿ ವಿಜಯಪುರದ 100ಕ್ಕೂ ಹೆಚ್ಚು ಸ್ಮಾರಕಗಳನ್ನು ಪ್ರಾಚೀನ ಸ್ಮಾರಕಗಳ ಸಂರಕ್ಷಣೆ ಕಾನೂನು 1904 ಅಡಿಯಲ್ಲಿ ರಕ್ಷಿತ ಸ್ಮಾರಕಗಳೆಂದು ಘೋಷಿತವಾಗಿದ್ದವು. ಅವುಗಳತ್ತ ನಿರ್ಲಕ್ಷೃ ಮಾಡಿದ್ದರಿಂದ ಅನೇಕ ಸ್ಮಾರಕಗಳು ಕಳೆಗುಂದಿವೆ. ಕೆಲವು ಧನದಾಹಿಗಳು ಸಂರಕ್ಷಿತ ಸ್ಮಾರಕಗಳ ಅತಿಕ್ರಮಣ ಮಾಡಿ ತಮ್ಮ ಸ್ವಾರ್ಥಕ್ಕಾಗಿ, ಹಣದಾಸೆಗಾಗಿ ಅಂಗಡಿ ಮುಂಗ್ಗಟ್ಟು ಕಟ್ಟಿ ಹಣ ಗಳಿಸುತ್ತಿದ್ದಾರೆ. ಸ್ಮಾರಕಗಳು ಹಾಳಾಗುವುದರಲ್ಲಿ ಇದೇ ಸ್ಥಿತಿ ಮುಂದುವರೆದರೆ ಸ್ಮಾರಕಗಳು ಅವಸಾನಗೊಳ್ಳುತ್ತವೆ. ಕಾರಣ ಜಿಲ್ಲಾಧಿಕಾರಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಸರ್ಕಾರದ ಆಸ್ತಿಗಳನ್ನು ಕಾನೂನುಬಾಹಿರವಾಗಿ ವಕ್ಫ್ ಬೋರ್ಡ್‌ಗೆ ದಾಖಲು ಮಾಡಿರುವುದನ್ನು ತೆರವುಗೊಳಿಸಲು ಹಾಗೂ ಇನ್ನೂ ಮಾಡಲು ಉದ್ದೇಶವಿದ್ದರೆ ತಕ್ಷಣ ಕೈಬಿಡಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಮುಖಂಡರಾದ ಸುನೀಲ ಬೈರವಾಡಗಿ, ಜಯಪ್ರಕಾಶ ಅಂಬಲಿ, ಬಸನಗೌಡ ಬಿರಾದಾರ, ಸಂತೋಷ ಯಂಕಪ್ಪಗೋಳ, ಸಂತೋಷ ಶಿರಸಂಗಿ, ರಮೇಶ ನಿಡೋಣಿ, ಭೀಮಾಶಂಕರ ಹೊನ್ನುಟಗಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net