ಇಂಡಿಗನತ್ತ ಸಮಸ್ಯೆ ಪರಿಹರಿಸಲು ಸಿಎಂ ಬಳಿಗೆ ನಿಯೋಗ

07 HANUR 3.
ಇಂಡಿಗನತ್ತ ಗ್ರಾಮಕ್ಕೆ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಸಭೆ ನಡೆಸಿದರು. ಹೊನ್ನೂರು ಪ್ರಕಾಶ್, ಚಂಗಡಿ ಕರಿಯಪ್ಪ, ವೀರಣ್ಣ, ಕೆಂಪಣ್ಣ, ಪುಟ್ಟತಂಬಡಿ ಇತರರು ಇದ್ದರು.
Published on

ಹನೂರು: ಇಂಡಿಗನತ್ತ ಪ್ರಕರಣದ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನುಪದಾಧಿಕಾರಿಗಳ ನಿಯೋಗ ಭೇಟಿ ನೀಡಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುವುದು ಎಂದು ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ಹೇಳಿದರು.


ತಾಲೂಕಿನ ಮಲೆಮಹದೇಶ್ವರ ಬೆಟ್ಟ ತಪ್ಪಲಿನ ಇಂಡಿಗನತ್ತ ಗ್ರಾಮದಲ್ಲಿ ಮತಗಟ್ಟೆ ಧ್ವಂಸ ಪ್ರಕರಣದ ಹಿನ್ನಲೆ ಮಂಗಳವಾರ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಗ್ರಾಮದಲ್ಲಿ ಆಯೋಜಿಸಿದ್ಧ ಸಭೆಯಲ್ಲಿ ಮಾತನಾಡಿದರು.


ಮತಗಟ್ಟೆ ಧ್ವಂಸ ಹಿನ್ನೆಲೆಯಲ್ಲಿ ಇಂಡಿಗನತ್ತ ಗ್ರಾಮದಲ್ಲಿ ಬಹುತೇಕ ಜನರು ಊರನ್ನು ತೊರೆದಿದ್ದು, ಇದೀಗ ಗ್ರಾಮಕ್ಕೆ ಆಗಮಿಸಿದ್ದಾರೆ. ಪ್ರಕರಣದಿಂದ ಗ್ರಾಮಸ್ಥರಲ್ಲಿ ಮನಸ್ಥಿತಿ ಕದಡಿದೆ. ಈ ಹಿನ್ನೆಲೆ ಅವರ ಸಮಸ್ಯೆಯನ್ನು ಆಲಿಸಿ ದಾಖಲಾಗಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಪರಿಹಾರ ಕಂಡು ಕೊಳ್ಳುವ ಸಲುವಾಗಿ ರೈತ ಸಂಘಟನೆಯ ಪದಾಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ವಾಸ್ತವತೆಯನ್ನು ಅರಿತು ಸಭೆ ನಡೆಸಿದರು.


ಮತಗಟ್ಟೆ ಧ್ವಂಸ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಆರೋಪಿಗಳನ್ನು ಕರೆ ತಂದು ಪೊಲೀಸರಿಗೆ ಒಪ್ಪಿಸುವುದು. ಗ್ರಾಮದಲ್ಲಿ ಪಾಲಕರಿಲ್ಲದೆ ಮಕ್ಕಳು ತೊಂದರೆ ಅನುಭವಿಸುತ್ತಿರುವ ಬಗ್ಗೆ ಹಾಗೂ ಜಾನುವಾರುಗಳಿಗೆ ಮೇವು, ಅಗತ್ಯ ಮೂಲ ಸೌಕರ್ಯ ಒದಗಿಸುವ ಸಂಬಂಧ ಜಿಲ್ಲಾಡಳಿತದೊಂದಿಗೆ ಚರ್ಚಿಸುವುದು, ಮೆಂದಾರೆ ಗ್ರಾಮದ ಮುಖಂಡರ ಜತೆ ಚರ್ಚಿಸಿ ದೂರು ವಾಪಸ್ ಪಡೆಯುವುದು ಅಥವಾ ರಾಜಿ ಮಾಡಿಕೊಳ್ಳುವುದು. ನ್ಯಾಯಾಂಗ ಬಂಧನದಲ್ಲಿರುವ ಆರೋಪಿಗಳಿಗೆ ಜಾಮೀನು ಕೊಡಿಸುವುದು. ಮುಂದಿನ ದಿನಗಳಲ್ಲಿ ಗ್ರಾಮಕ್ಕೆ ಅಗತ್ಯ ಮೂಲ ಸೌಕರ್ಯ ಹಾಗೂ ಅಭಿವೃದ್ಧಿ ಬಗ್ಗೆ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳ ಜತೆ ಚರ್ಚಿಸುವುದು ಸೇರಿದಂತೆ ಗ್ರಾಮದಲ್ಲಿ ಹೊಂದಾಣಿಕೆಯಿಂದ ಜೀವನ ನಡೆಸುವ ಸಂಬಂಧ ಚರ್ಚಿಸಲಾಯಿತು.


ಬಳಿಕ ಪದಾಧಿಕಾರಿಗಳು ಮೆಂದಾರೆ ಗ್ರಾಮಕ್ಕೆ ತೆರಳಿ ಗಾಯಗೊಂಡಿದ್ದ ಕುಟುಂಬಕ್ಕೆ ಧೈರ್ಯ ಹೇಳಿದರು. ಈ ವೇಳೆ ನಿವಾಸಿಗಳು ಮಾತನಾಡಿ, ಗ್ರಾಮದಿಂದ ಹೊರ ಬರಲು ಸಿದ್ಧರಿದ್ದೇವೆ. ಆದ್ದರಿಂದ ಪುನರ್ವಸತಿ ಕಲ್ಪಿಸಲು ಸಹಕಾರ ನೀಡುವಂತೆ ಮನವಿ ಮಾಡಿದರು. ಈ ಬಗ್ಗೆ ಅರಣ್ಯ ಇಲಾಖೆಗೆ ಅರ್ಜಿ ಸಲ್ಲಿಸುವಂತೆ ಪದಾಧಿಕಾರಿಗಳು ಸಲಹೆ ನೀಡಿದರು.


ಸಂಘದ ತಾಲೂಕು ಅಧ್ಯಕ್ಷ ಚಂಗಡಿ ಕರಿಯಪ್ಪ, ಪದಾಧಿಕಾರಿಗಳಾದ ವೀರನಪುರ ನಾಗಪ್ಪ, ಅಂಬಳೆ ಶಿವಕುಮಾರ್, ಕಮರಳ್ಳಿ ಪ್ರಸಾದ್, ಶಾಂತಕುಮಾರ್, ಕಡಬೂರು ಜಗದೀಶ್, ಮಹದೇವಸ್ವಾಮಿ, ಸ್ಥಳೀಯ ಮುಖಂಡರಾದ ವೀರಣ್ಣ, ಕೆಂಪಣ್ಣ, ನಾಗ, ಪುಟ್ಟತಂಬಡಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net