ರೈತರ ಬೇಡಿಕೆ ಕುರಿತು ಕೇಂದ್ರಕ್ಕೆ ನಿಯೋಗ : ಸಚಿವ ವಿ. ಸೋಮಣ್ಣ ಭರವಸೆ

centrol minister v.somanna
ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ
Published on

ಮೈಸೂರು: ಬೆಳೆಗೆ ಸೂಕ್ತ ಬೆಲೆ ದೊರೆಯುವುದು ಸೇರಿದಂತೆ ರೈತರ ಬೇಡಿಕೆ ಈಡೇರಿಕೆಗಾಗಿ ಕೇಂದ್ರ ಸರ್ಕಾರದ ಬಳಿಗೆ ನಿಯೋಗ ಕರೆದೊಯ್ಯುವುದಾಗಿ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದರು.

ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ, ರಾಜ್ಯ ಕಬ್ಬು ಬೆಳೆಗಾರ ಸಂಘದಿಂದ ನಗರದಲ್ಲಿ ಸೋಮವಾರ ಆಯೋಜಿಸಿದ್ದ ವಿಶ್ವ ರೈತ ದಿನಾಚರಣೆಯ ಸಮಾರೋಪದಲ್ಲಿ ಅವರು ಮಾತನಾಡಿದರು.

ಸಮಾವೇಶದಲ್ಲಿ ಕೈಗೊಂಡ 21 ನಿರ್ಣಯಗಳನ್ನು ಸರ್ಕಾರದ ಮುಂದೆ ಪ್ರಸ್ತಾಪಿಸುವ ಜತೆಗೆ ಕೃಷಿ ಸಚಿವ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಗಮನಕ್ಕೆ ತರಲಾಗುವುದು. ಇದಕ್ಕಾಗಿ ಅಗತ್ಯಬಿದ್ದರೆ ನಿಯೋಗವೊಂದನ್ನು ಪ್ರಧಾನಿ ಬಳಿಕೆ ಕೊಂಡೊಯ್ಯುವುದಾಗಿ ಭರವಸೆ ನೀಡಿದರು.

ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ಬಳಿಕ ಬಹುತೇಕ ಬೆಳೆಗಳ ಬೆಂಬಲ ಬೆಲೆ ದ್ವಿಗುಣಗೊಳಿಸಲಾಗಿದೆ. 2014-15ರಲ್ಲಿ ಭತ್ತಕ್ಕೆ 1,410 ರೂ. ನಿಂದ 2,300 ರೂ.ಗೆ ಏರಿಕೆ ಆಗಿದೆ. 1,430 ರೂ. ಇದ್ದ ಜೋಳಕ್ಕೆ 3,300 ರೂ. ನೀಡಲಾಗುತ್ತಿದೆ. ಹೀಗೆ ಕಳೆದ ಹತ್ತು ವರ್ಷದಲ್ಲಿ ಬಹುತೇಕ ಬೆಳೆಗಳ ಬೆಂಬಲ ಬೆಲೆ ದ್ವಿಗುಣವಾಗಿದೆ. ಕೊಬ್ಬರಿ ಬೆಲೆ ಈಗ ಏರಿಕೆ ಆಗಿದ್ದು, 14- 15 ಸಾವಿರ ರೂ. ಕ್ವಿಂಟಲ್ಗೆ ಇದೆ. ರೈತರಿಗೆ ನೀಡಬೇಕಾದ 380 ಕೋಟಿ ರೂ. ಬಾಕಿ ಮೊತ್ತ ಬಿಡುಗಡೆಯಾಗಿದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ರೈತರನ್ನು ಕಡೆಗಣಿಸಿಲ್ಲ ಎಂದರು.

ನಮ್ಮದು ಕೃಷಿ ಕುಟುಂಬವಾಗಿದ್ದು, 1922ರಲ್ಲಿ ಮಿರ್ಜಾ ಇಸ್ಮಾಯಿಲ್ ನಮ್ಮ ತಂದೆಗೆ ನೀಡಿದ್ದ 5 ಎಕರೆ ಜಮೀನಿನಲ್ಲಿ ಕೃಷಿ ಮಾಡುತ್ತಿದ್ದೆವು. ಹಾಗಾಗಿ ರೈತರ ಸಂಕಷ್ಟದ ಅರಿವು ನಮಗೂ ಇದೆ. ದೇಶಕ್ಕೆ ಅನ್ನ ನೀಡುವ ರೈತ ಸಂತಸದಿಂದ ಇರಬೇಕು ಎಂದರು.

ರೈತನಿಗೆ ಆರ್ಥಿಕ ನೆರವು:

ಅಪಘಾತದಲ್ಲಿ ಎರಡು ಕೈ ಮೂಳೆ ಮುರಿದು ಬೆನ್ನು ಶಸ್ತ್ರ ಚಿಕಿತ್ಸೆಗೆ ಒಳಗಾಗಬೇಕಿರುವ ಉಡಿಗಾಲದ ರೈತ ಲೋಕೇಶ್ ಅವರಿಗೆ ಸಚಿವ ವಿ.ಸೋಮಣ್ಣ ಅವರು ವೈಯಕ್ತಿವಾಗಿ 2 ಲಕ್ಷ ರೂ. ನೆರವು ನೀಡಿದರಲ್ಲದೇ, ಸರ್ಕಾರದಿಂದ ಪರಿಹಾರ ಕೊಡಿಸುವ ಭರವಸೆ ನೀಡಿದರು.

ಹಸಿರು ಪರಿಸರ ವಿಜ್ಞಾನಿ ಡಾ. ಚಂದ್ರಶೇಖರ ಬಿರಾದಾರ್, ತಮಿಳುನಾಡಿನ ರೈತ ಪಿ.ಆರ್. ಪಾಂಡ್ಯನ್, ರಾಮನ್ ಗೌಂಡರ್, ವೆಂಕಟೇಶ್ವರ ತೆಲಂಗಾಣ, ಬೆಳಗಾವಿಯ ಕಲ್ಮೇಶ್ ಯಲದಗಿ, ಕೇರಳದ ರೈತ ಮುಖಂಡ ಕೆ.ವಿ. ಬಿಜು, ಮಹಿಳಾ ಸಂಘದ ಅಧ್ಯಕ್ಷೆ ಲಕ್ಷ್ಮೀದೇವಿ, ವಸಂತಕುಮಾರ್, ಡಾ.ಕಾ. ರಾಮೇಶ್ವರಪ್ಪ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net