

ಹುಬ್ಬಳ್ಳಿ : ಧರ್ಮಸ್ಥಳ ಸೇರಿದಂತೆ ಭಾರತೀಯ ಮಠ-ಮಂದಿರಗಳ ವಿರುದ್ಧ ನಡೆಯುತ್ತಿರುವ ಷಡ್ಯಂತ್ರ, ಅಪಪ್ರಚಾರ ತಡೆಗಟ್ಟಲು ಸೂಕ್ತ ಕಾನೂನು ಜಾರಿಗೆ ತರಬೇಕೆಂಬ ಬೇಡಿಕೆಯೊಂದಿಗೆ ಸಾಧು, ಸಂತರ ನಿಯೋಗ ಬುಧವಾರದಂದು ದೆಹಲಿಗೆ ತೆರಳಿ, ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಮನವಿ ಮಾಡಿದ್ದಾರೆ. ಮನವಿಗೆ ಸ್ಪಂಧಿಸಿರುವ ಅಮಿತ್ ಷಾ ಅವರು ಮುಂದಿನ ದಿನಗಳಲ್ಲಿ ಕಠಿಣ ಕಾನೂನು ಜಾರಿಗೊಳಿಸುವ ಭರವಸೆ ನೀಡಿದ್ದಾರೆ.
ಇಲ್ಲಿನ ವರೂರು ನವಗ್ರಹ ತೀರ್ಥಕ್ಷೇತ್ರದಲ್ಲಿ ಗುರುವಾರದಂದು ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ರಾಷ್ಟ್ರಸಂತ ಆಚಾರ್ಯ ಶ್ರೀ ಗುಣಧರನಂದಿ ಮಹಾರಾಜರು, ಸಚಿವ ಅಮಿತ್ ಷಾ ಅವರು ಸಾಧು, ಸಂತರ ನಿಯೋಗದೊಂದಿಗೆ ಸುಮಾರು 48 ನಿಮಿಷಗಳೊಂದಿಗೆ ರ್ಚಚಿಸಿದ್ದಾರೆ ಎಂದು ತಿಳಿಸಿದರು.
ಧರ್ಮಸ್ಥಳ ಹಾಗೂ ಇನ್ನಿತರ ಮಠ, ಮಂದಿರಗಳ ವಿರುದ್ಧ ನಡೆಯುತ್ತಿರುವ ಷಡ್ಯಂತ್ರದ ಬಗ್ಗೆ ಅಮಿತ್ ಷಾ ಅವರೊಂದಿಗೆ ನಿಯೋಗದಲ್ಲಿದ್ದ ಸಾಧು, ಸಂತರು ವಿಸ್ತಾರವಾಗಿ ರ್ಚಚಿಸಿದ್ದಾರೆ. ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಷಡ್ಯಂತ್ರ ತಮ್ಮ ಗಮನಕ್ಕೆ ಇರುವುದಾಗಿ ಅಮಿತ್ ಷಾ ನಿಯೋಗಕ್ಕೆ ತಿಳಿಸಿದ್ದಾರೆ. ಈ ಕುರಿತು ವರದಿಯನ್ನೂ ತರಿಸಿಕೊಂಡಿರುವುದಾಗಿ ಹೇಳಿದ್ದಾರೆ ಎಂದು ಮಾಹಿತಿ ನೀಡಿದರು.
ಮತ್ತೊಬ್ಬ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ ಅವರೊಂದಿಗೂ ನಿಯೋಗದಲ್ಲಿದ್ದ ಸಂತರು ಮಾತುಕತೆ ನಡೆಸಿದ್ದಾರೆ ಎಂದು ತಿಳಿಸಿದರು.
ಸೆ. 8ರಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಅಮಿತ್ ಷಾ ಅವರನ್ನು ಭೇಟಿ ಮಾಡಲಿದ್ದಾರೆ. ಸೆ. 10ರಂದು ರಾಜ್ಯದ ವಿವಿಧೆಡೆಯಿಂದ ಸಾಧು-ಸಂತರು ಧರ್ಮಸ್ಥಳಕ್ಕೆ ತೆರಳಿ, ಶ್ರೀ ಮಂಜುನಾಥ ಸ್ವಾಮಿಗೆ ವಿಶೇಷ ಆರತಿ, ವಿಶೇಷ ಪೂಜೆ ಸಲ್ಲಿಸಲಿದ್ದಾರೆ ಎಂದು ತಿಳಿಸಿದರು.
ಯಾವುದೇ ಧರ್ಮವಾದರೂ ಅದರ ಬಗ್ಗೆ ಅಪಪ್ರಚಾರ ಮಾಡುವುದು ಸರಿಯಲ್ಲ. ಕೆಲವು ಸಾಮಾಜಿಕ ಜಾಲತಾಣಗಳಲ್ಲಿ, ಯೂಟೂಬರ್ಗಳು ಇಂತಹ ಈ ಕೃತ್ಯದಲ್ಲಿ ತೊಡಗಿದ್ದು, ಇದಕ್ಕೆ ಕಡಿವಾಣ ಹಾಕಬೇಕು. ಧಾರ್ವಿುಕ ಭಾವನೆ ಧಕ್ಕೆಯಾಗುವಂತಹ ವಿಡಿಯೋಗಳನ್ನು 24 ತಾಸಿನೊಳಗೆ ತೆರವು ಗೊಳಿಸಬೇಕು, ಸಾಧು, ಸಂತರ ಮೇಲೆ ನಿರಂತರ ದಬ್ಬಾಳಿಕೆ ನಡೆಯುತ್ತಿದ್ದು, ಅವರಿಗೆ ಸುರಕ್ಷತೆ ಒದಗಿಸಬೇಕು ಎಂದು ಆಗ್ರಹಿಸಲಾಗಿದೆ. ಎಲ್ಲ ಬೇಡಿಕೆಗಳಿಗೆ ಸಚಿವ ಅಮಿತ್ ಷಾ ಅವರು ಸಕಾರಾತ್ಮಕವಾಗಿ ಸ್ಪಂಧಿಸಿದ್ದಾರೆ ಎಂದು ತಿಳಿಸಿದರು.
ಧಾರ್ವಿುಕ ಸ್ಥಳಗಳ ಮೇಲೆ ತೇಜೋವಧೆ ಮಾಡಲಾಗುತ್ತಿದ್ದು, ದೌರ್ಜನ್ಯ ತಡೆ ಕಾಯ್ದೆ ಜಾರಿಗೆ ತರಬೇಕು ಎಂದರು.
ಜೈನ ಸಮಾಜದ ಪ್ರಮುಖರಾದ ಮಹೇಂದ್ರ ಸಿಂಘಿ ಹಾಗೂ ಇನ್ನಿತರರು ಸುದ್ದಿಗೋಷ್ಠಿಯಲ್ಲಿ ಇದ್ದರು.
ನಿಯೋಗದಲ್ಲಿದ್ದ ಸಂತರು : ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿ ಮಾಡಿದ ನಿಯೋಗದಲ್ಲಿ ಹರಿಹರದ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ, ಮಲೆಮಹಾದೇಶ್ವರದ ಶ್ರೀ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ, ಶ್ರೀ ಆತ್ಮಾರಾಮ ಸ್ವಾಮೀಜಿ, ಚಿತ್ರದುರ್ಗದ ಜಗದ್ಗುರು ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಹೊಸದುರ್ಗದ ಜಗದ್ಗುರು ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿ, ಮಂಗಳೂರಿನ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಹುಬ್ಬಳ್ಳಿ ವರೂರು ದಿಗಂಬರ ಜೈನ ಮಠದ ಸ್ವಸ್ತಿಶ್ರೀ ಧರ್ಮಸೇನ ಭಟ್ಟಾರಕ ಸ್ವಾಮೀಜಿ, ರಾಜಸ್ಥಾನದ ಸ್ವಸ್ತಿಶ್ರೀ ಸೌರಭಸೇನ ಸ್ವಾಮೀಜಿ ಇದ್ದರು.