ಕರ್ನಾಟಕ ಬೆಳೆಗಾರರ ಒಕ್ಕೂಟದ ನಿಯೋಗದಿಂದ ಪ್ರಮುಖರ ಭೇಟಿ

24adarshkdga1
Published on

ಮಡಿಕೇರಿ: ಕರ್ನಾಟಕ ಬೆಳೆಗಾರರ ಒಕ್ಕೂಟದ ನಿಯೋಗ ಸಂಸತ್ ಅಧಿವೇಶನ ನಡೆಯುತ್ತಿರುವ ಸಂದರ್ಭ ದೆಹಲಿಗೆ ತೆರಳಿ ಕಾಫಿಬೆಳೆಗಾರರ ಪ್ರಮುಖ ಬೇಡಿಕೆಗಳನ್ನು ಸಂಬಂಧಪಟ್ಟ ಸಚಿವರು ಮತ್ತು ಇಲಾಖೆಯ ಪ್ರಮುಖರಿಗೆ ಶನಿವಾರ ಮನವಿ ಸಲ್ಲಿಸಿದೆ.


ಕೇಂದ್ರ ಮತ್ತು ರಾಜ್ಯ ಖಾತೆಯ ಕೃಷಿ ಸಚಿವರು ಹಾಗು ರೈತ ಕಲ್ಯಾಣ ಸಚಿವರಾದ ಶೋಭಾ ಕರಂದ್ಲಾಜೆ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಸಂಸತ್ತಿನ ವ್ಯಾವಹಾರಿಕ ಸಚಿವ ಪ್ರಹ್ಲಾದ್ ಜೋಶಿ, ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ಐ.ಎಂ.ಬಸವೇಗೌಡ, ವಾಣಿಜ್ಯ ಮಂತ್ರಾಲಯದ ಹೆಚ್ಚುವರಿ ಕಾರ್ಯದಶಿ ರಾಜೇಶ್ ಅಗರವಾಲ್ ಅವರುಗಳನ್ನು ಭೇಟಿ ಮಾಡಿತು.


೩ ಲಕ್ಷದವರೆಗಿನ ಸಾಲ ಪಡೆದು ಪ್ರಾಮಾಣಿಕವಾಗಿ ಸಾಲ ಮರುಪಾವತಿ ಮಾಡುತ್ತಿರುವ ಬೆಳೆಗಾರರಿಗೆ ಶೂನ್ಯ ಬಡ್ಡಿದರದಲ್ಲಿ ಬ್ಯಾಂಕುಗಳಿಂದ ಸಾಲಸೌಲಭ್ಯ ನೀಡಲಾಗುತ್ತಿದ್ದು, ಸಾಲದ ಪ್ರಮಾಣವನ್ನು ಹೆಚ್ಚುಪಡಿಸಬೇಕು. ಕಾಫಿ ಇತರೆ ಸಾಲಗಳಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಬೇಕು. ವಾಣಿಜ್ಯ ಬ್ಯಾಂಕ್‌ನಿಂದ ಕಾಫಿ ಸಾಲಕ್ಕೆ ಬ್ಯಾಂಕ್ ಬಡ್ಡಿದರವನ್ನು ಕಡಿಮೆಮಾಡಬೇಕು. ಬ್ಯಾಂಕ್ ಸಾಲ ಮರುಪಾವತಿ ಅವಧಿಯನ್ನು ಹೆಚ್ಚಿಸಬೇಕು ಎಂದು ಮನವಿ ಮಾಡಿದರು.


ಕೃಷಿಯಲ್ಲೇ ತೊಡಗಿಸಿಕೊಂಡಿರುವ ರೈತರಿಗೆ ಸಿಬಿಲ್ನ್ನು ಅನ್ವಯಿಸಬಾರದು. ಕಾಫಿಗೂ ಸಹ ಕಾಳುಮೆಣಸು, ಅಡಿಕೆಗೆ ಇರುವಂತೆ ಹವಾಮಾನಾಧಾರಿತ ಬೆಳೆವಿಮೆಯನ್ನು ಅಳವಡಿಸಬೇಕು. ಕೇಂದ್ರ ಸರ್ಕಾರದಿಂದ ಮಾನವ-ಪ್ರಾಣಿ ಸಂಘರ್ಷಕ್ಕೆ ಬಜೆಟ್‌ನಲ್ಲಿ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಹೆಚ್ಚು ಅನುದಾನವನ್ನು ನೀಡಬೇಕು. ಇದರಿಂದ ಮಾನವ-ಪ್ರಾಣಿ ಸಂಘರ್ಷವನ್ನು ಯಶಸ್ವಿಯಾಗಿ ತಡೆಗಟ್ಟಲು ಸಹಾಯವಾಗುತ್ತದೆ. ರಾಷ್ಟ್ರೀಯ ವಿಪತ್ತು ಯೋಜನೆ(ಎನ್.ಡಿ.ಆರ್.ಎಫ್.)ಯಿಂದ ಕೊಡುತ್ತಿರುವ ಪರಿಹಾರವನ್ನು ೧೦ ಹೆಕ್ಟೇರ್‌ವರೆಗೆ ವಿಸ್ತರಿಸಬೇಕು ಮತ್ತು ಪರಿಹಾರ ಮೊತ್ತವನ್ನು ಹೆಚ್ಚುಪಡಿಸಬೇಕು ಎಂದು ಒತ್ತಾಯಿಸಿದರು.


ನಿಯೋಗದಲ್ಲಿ ಕರ್ನಾಟಕ ಬೆಳೆಗಾರರ ಒಕ್ಕೂಟದ ನಿಯೋಗದಲ್ಲಿ ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಡಾ॥ ಎಚ್.ಟಿ.ಮೋಹನ್‌ಕುಮಾರ್, ಸಂಘಟನಾ ಕಾರ್ಯದರ್ಶಿ ಕೆ.ಕೆ.ವಿಶ್ವನಾಥ್, ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎಚ್.ಬಿ.ಕಷ್ಣಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net