

ಬಂಗಾರಪೇಟೆ: ಡೆಲಿಗೇಟ್ ಪ್ರಶ್ನಿಸಿ ನನ್ನ ವಿರುದ್ಧ ನ್ಯಾಯಾಲಯಕ್ಕೆ ಮೊರೆ ಹೋಗಿದ್ದ ಹುನುಕುಂದ ವೆಂಕಟೇಶ್ ಅವರಿಗೆ ಹಿನ್ನೆಡೆಯಾಗಿದ್ದು, ಹೈಕೋರ್ಟ್ ನಲ್ಲಿ ಜಯ ಸಿಕ್ಕಿದೆ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿದರು.ತಾಲೂಕಿನ ಕಾವೇರಿ ನಗರದಲ್ಲಿ ಚಿನ್ನಕೋಟೆ ಗ್ರಾಮ ಪಂಚಾಯಿತಿಯಿಂದ ಹಮ್ಮಿಕೊಂಡಿದ್ದ ಗ್ರಾಮಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನ ನತ್ತಿಬೆಲೆ ಹಾಲು ಡೇರಿಯಿಂದ ಡೆಲಿಗೇಟ್ ಆಯ್ಕೆ ಮಾಡಲಾಗಿತ್ತು. ಶಾಸಕರ ಡೆಲಿಗೇಟ್ ಅಕ್ರಮವಾಗಿದೆ ಎಂದು ತಕರಾರು ಮಾಡಿ ಹುನುಕುಂದ ವೆಂಕಟೇಶ್ ಹೈಕೋರ್ಟ್ ಮೊರೆ ಹೋಗಿದ್ದರು. ಹೈಕೋರ್ಟ್ ಪರಿಶೀಲನೆಗೆ ಜಿಲ್ಲಾಧಿಕಾರಿಗಳಿಗೆ ನಿರ್ದೇಶಿಸಿತ್ತು. ಜಿಲ್ಲಾಧಿಕಾರಿ ಶಾಸಕೆ ಡೆಲಿಗೇಟ್ ಆಯ್ಕೆ ಕ್ರಮ ಬದ್ಧವಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು.
ಜಿಲ್ಲಾಧಿಕಾರಿಗಳ ಕ್ರಮ ಬದ್ಧತೆ ಪ್ರಶ್ನಿಸಿ ಮತ್ತೆ ಹುನುಕುಂದ ವೆಂಕಟೇಶ್ ಹೈಕೋರ್ಟ್ ಮೊರೆ ಹೋದರು. ಆದರೆ ಹೈಕೋರ್ಟ್ ಜಿಲ್ಲಾಧಿಕಾರಿ ಗಳ ಕ್ರಮ ಬದ್ಧತೆ ಎತ್ತಿ ಹಿಡಿದಿದೆ. ಈ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ಗೆ ಮೊರೆ ಹೋಗಿದ್ದ ಹುನುಕುಂದ ವೆಂಕಟೇಶ್ ಅವರಿಗೆ ಹಿನ್ನೆಡೆ ಉಂಟಾಗಿದೆ. ಇವತ್ತು ಶುಕ್ರವಾರ ಕೋಚಿಮುಲ್ ಚುನಾವಣೆಗೆ ಸ್ಪರ್ಧೆ ಮಾಡಲು ನಾಮಪತ್ರ ಸಲ್ಲಿಸಿದ್ದೇನೆ ಎಂದರು.ಗ್ರಾಮಸಭೆಗಳು ನಡೆದಾಗ ಪ್ರತಿಯೊಬ್ಬರೂ ತಪ್ಪದೇ ಆಗಮಿಸಿ ಸ್ಥಳದಲ್ಲೇ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು. ಸರ್ಕಾರಿ ಯಂತ್ರವೇ ಗ್ರಾಮಸಭೆಗಳಿಗೆ ಆಗಮಿಸುತ್ತಿರುವುದರಿಂದ ನಿಮ್ಮ ಸಮಸ್ಯೆಗಳು ಏನಾದರು ಇದ್ದಲ್ಲಿ ಸಭೆ ಗಮನಕ್ಕೆ ತಂದು ಇತ್ಯರ್ಥ ಮಾಡಿಕೊಳ್ಳಬೇಕೆಂದು ತಿಳಿಸಿದರು.
ಪಿಡಿಒ ಚಂದ್ರಪ್ಪ, ಸದಸ್ಯರಾದ ವರದರಾಜ್, ಬಿಇಒ ಗುರುಮೂರ್ತಿ, ಸೆಲ್ವಕುಮಾರಿ, ಇಒ ರವಿಕುಮಾರ್, ನೋಡಲ್ ಅಧಿಕಾರಿ ಯುವರಾಜ್, ಸಮಾಜ ಕಲ್ಯಾಣ ಇಲಾಖೆ ಅಂಜಲಿ, ಆರೋಗ್ಯ ಇಲಾಖೆ ಸುನಿಲ್, ತಾಪಂ ಮಾಜಿ ಸದಸ್ಯ ಅಮರೇಶ್ ಇದ್ದರು.