

ಮಳವಳ್ಳಿ : ಗರ್ಭಿಣಿಗೆ ಹೆರಿಗೆ ಮಾಡಿಸಲು ಪ್ರಸೂತಿ ವೈದ್ಯೆಯೊಬ್ಬರು ಲಂಚಕ್ಕೆ ಬೇಡಿಕೆ ಇಟ್ಟು, ಹಣ ಹೊಂದಿಸಲು ನಿಧಾನವಾದ ಹಿನ್ನೆಲೆಯಲ್ಲಿ ಹೆರಿಗೆ ಮಾಡಲು ವಿಳಂಬವಾಗಿ ಶಿಶು ಸಾವನ್ನಪ್ಪಿದೆ ಎಂದು ಆರೋಪಿಸಿ ಕುಟುಂಬದವರು ಭಾನುವಾರ ಆಸ್ಪತ್ರೆ ಮುಂದೆ ಪ್ರತಿಭಟನೆ ನಡೆಸಿದರು.
ತಾಲೂಕಿನ ಮಂಚನಹಳ್ಳಿ ಗ್ರಾಮದ ಗಿರೀಶ್ ಅವರ ಪತ್ನಿ ಅಶ್ವಿನಿ ಅವರನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಹೆರಿಗೆಗೆ ದಾಖಲಿಸಿದ್ದರು. ಆದರೆ ಹೆರಿಗೆ ಮಾಡಿಸುವ ವೈದ್ಯೆ 10 ಸಾವಿರ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಬಡತನದ ಹಿನ್ನೆಲೆಯ ಗಿರೀಶ್ ಹಣ ಹೊಂದಿಸಲು ವಿಳಂಬವಾಗಿದೆ. ಇದರಿಂದ ವೈದ್ಯರು ಹೆರಿಗೆ ಮಾಡಲು ತಡಮಾಡಿದ್ದಾರೆ. ಪರಿಣಾಮ ಮಗು ಸಾವನ್ನಪ್ಪಿದೆ ಎಂದು ಪ್ರತಿಭಟನಕಾರರು ಕಿಡಿಕಾರಿದರು.
ಅ.19 ರಂದು ಸಂಜೆ ಹೆರಿಗೆ ನೋವು ತಾಳಲಾರದೇ ಅಶ್ವಿನಿ ಗಂಭೀರ ಸ್ಥಿತಿ ತಲುಪಿದ್ದರು. ಈ ವೇಳೆ ವೈದ್ಯರು ತರಾತುರಿಯಲ್ಲಿ ಹೆರಿಗೆ ಮಾಡಿಸಲು ಮುಂದಾದರು. ಆದರೆ ಅಷ್ಟರಲ್ಲಾಗಲೇ ತಾಯಿಯ ಗರ್ಭದಿಂದ ಹೊರಬರಲು ತವಕಿಸಿದ್ದ ನವಜಾತ ಶಿಶು ಉಸಿರುಗಟ್ಟಿ ಮೃತಪಟ್ಟಿದೆ. ಇದರಲ್ಲಿ ವೈದ್ಯಕೀಯ ಸಿಬ್ಬಂದಿ ಲೋಪ ಇದೆ ಎಂದು ಕುಟುಂಬಸ್ಥರು ದೂರಿದರು.
ಒಂದು ದಿನದ ಹಿಂದಷ್ಟೆ ಸ್ಕಾೃನಿಂಗ್ ಮಾಡಿಸಿದಾಗ ಮಗು ಆರೋಗ್ಯವಾಗೇ ಇದೆ ಎಂದು ರಿಪೋರ್ಟ್ ಬಂದಿದೆ. ಆದರೆ ವೈದ್ಯರು ಮಾತ್ರ ಮಗು ಹೊಟ್ಟೆಯಲ್ಲೇ ಸಾವನ್ನಪ್ಪಿದೆ ಎಂದು ಹೇಳುತ್ತಿದ್ದಾರೆ ಎಂದು ವಿವಿಧ ಘೋಷಣೆಗಳನ್ನು ಕೂಗಿದರು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಸಂಜಯ್ ಹಾಗೂ ಪಟ್ಟಣ ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್ ರವಿಕುಮಾರ್ ಪ್ರತಿಭಟನಕಾರರನ್ನು ಮನವೊಲಿಸಿದರು. ಈ ಸಂಬಂಧ ಪತಿ ಗಿರೀಶ್ ವೈದ್ಯರ ವಿರುದ್ಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.