ತುಮಕೂರು ಜಿಲ್ಲೆಯಲ್ಲಿ ಪರೀಕ್ಷಾ ವರದಿ ತಡ, ಕರೊನಾ ನಿಯಂತ್ರಣಕ್ಕೆ ಜಿಲ್ಲಾಡಳಿತ ಕಸರತ್ತು

10TMK_Checkpost
Published on

ತುಮಕೂರು: ಜಿಲ್ಲೆಯಲ್ಲಿ ಮತ್ತೆ ಆತಂಕ ಸೃಷ್ಟಿಸಿರುವ ಕರೊನಾ ನಿಯಂತ್ರಣಕ್ಕೆ ಜಿಲ್ಲಾಡಳಿತ ಕಸರತ್ತು ಆರಂಭಿಸಿದೆ. ಆದರೆ, ಪರೀಕ್ಷೆ ವರದಿ ಬರುವುದು ತಡವಾಗುತ್ತಿರುವುದು ಸಮಸ್ಯೆ ತಂದೊಡ್ಡಿದೆ.

ಜಿಲ್ಲೆಯಲ್ಲಿ ಈ ವರೆಗೆ 4670 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ, ಪ್ರಸ್ತುತ ಸೋಂಕಿತರ ಸಂಪರ್ಕದಲ್ಲಿದ್ದವರ ರಕ್ತ ಹಾಗೂ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು ಬರೋಬ್ಬರಿ 793 ಜನರ ವರದಿಗಾಗಿ ಕಾಯಲಾಗುತ್ತಿದೆ. ಪರೀಕ್ಷೆ ನಡೆಸಿ 4 ದಿನಕ್ಕೆ ವರದಿ ಬರುತ್ತಿದ್ದು ತುರ್ತು ಇದ್ದವರ ವರದಿಯನ್ನು ತುರ್ತಾಗಿ ಕಳುಹಿಸುವ ಕೆಲಸವಾಗುತ್ತಿದೆ. ಕೆಲವೊಂದು ಪ್ರಕರಣದಲ್ಲಿ ಎರಡು, ಮೂರು ಬಾರಿ ಪರೀಕ್ಷೆ ಮಾಡಿ ದೃಢಪಡಿಸಿಕೊಳ್ಳುವ ಕಾರ್ಯ ನಡೆಯುತ್ತಿದೆ.

ಶಿರಾ ನಗರದಲ್ಲಿ ಶನಿವಾರ ಪತ್ತೆಯಾದ ರೋಗಿಯ ಸಂಪರ್ಕದಲ್ಲಿದ್ದವರನ್ನು ಗುರುತಿಸಿ ಮಾದರಿ ಸಂಗ್ರಹಿಸಲಾಗಿದ್ದು ಫಲಿತಾಂಶದ ಮೇಲೆ ಶಿರಾ ನಗರದ ಸ್ಥಿತಿ ನಿರ್ಧಾರವಾಗಲಿದೆ, ಸೋಂಕಿತ ವ್ಯಕ್ತಿ ಇದ್ದ ಒಂದು ದಿನದಲ್ಲಿ ಎಷ್ಟು ಜನರಿಗೆ ಸೋಂಕು ತಗುಲಿಸಿರಬಹುದು ಎಂಬ ಆತಂಕ ಮನೆಮಾಡಿದೆ. ಪಾವಗಡದಲ್ಲಿ ಕ್ವಾರಂಟೇನ್‌ನಲ್ಲಿರುವ ತಬ್ಲಿಘಿಗಳಿಂದ ಅಪಾಯವಾಗಲಾರದು ಎಂಬ ನಂಬಿಕೆ ಜಿಲ್ಲಾಡಳಿತಕ್ಕಿದೆ, ಗುಜರಾತ್‌ನಿಂದ ಆಗಮಿಸಿದವರನ್ನು ಸುರಕ್ಷತಾ ಕ್ರಮಗಳನ್ನು ಪಾಲಿಸಿಯೇ ಕ್ವಾರಂಟೈನ್ ಮಾಡಲಾಗಿದ್ದು ಅವರಿಂದಲೂ ಸೋಂಕು ಹಬ್ಬಿರುವ ಸಾಧ್ಯತೆ ಕಡಿಮೆಯಿದೆ.

ಲಾಕ್‌ಡೌನ್ ಸಡಿಲಿಕೆಯಾದ ಮೇ 4ರಿಂದ ಹೊರ ರಾಜ್ಯ ಹಾಗೂ ಹೊರ ಜಿಲ್ಲೆಗಳಿಂದ ಸಾಕಷ್ಟು ಜನರು ಪೊಲೀಸರ ಕಣ್ತಪ್ಪಿಸಿಕೊಂಡು ಬಂದಿರುವುದೇ ಜಿಲ್ಲಾಡಳಿತಕ್ಕೆ ತಲೆ ನೋವಾಗಿದೆ. ಬಂದಿರುವವರ ಮಾಹಿತಿ ಇದ್ದರೆ ತಪಾಸಣೆಗಾದರೂ ಅನುಕೂಲವಾಗುತ್ತದೆ ಎಂದು ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.

ಆಸ್ಪತ್ರೆಯಲ್ಲಿ ಸಿಬ್ಬಂದಿ ಕಿರಿಕಿರಿ!?: ಒಣ ಕೆಮ್ಮು, ನೆಗಡಿ ಕಾರಣಕ್ಕೆ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ತೆರಳಿದ್ದ ತುಮಕೂರು ವಿವಿ ಸಂಶೋಧನಾ ವಿದ್ಯಾರ್ಥಿಯನ್ನು ಕ್ವಾರಂಟೈನ್ ಮಾಡಲಾಗಿದೆ, ಪ್ರಾಧ್ಯಾಪಕರ ಜತೆ ಪೋನ್‌ನಲ್ಲಿ ಮಾತನಾಡಿದ ಎಂಬ ಕಾರಣಕ್ಕೆ ಸೆಲ್‌ನಲ್ಲಿ ಕೂಡಿ ಹಾಕಿ ಪೊಲೀಸ್ ಸಿಬ್ಬಂದಿ ನಿಂದಿಸಿರುವ ಘಟನೆಯೂ ನಡೆದಿದೆ. ತಾನಿದ್ದ ಕೊಠಡಿಯಲ್ಲಿನ ಅವ್ಯವಸ್ಥೆಯ ಬಗ್ಗೆ ಪ್ರಶ್ನಿಸಿದ್ದನ್ನೇ ನೆಪಮಾಡಿಕೊಂಡ ಸಿಬ್ಬಂದಿ ಅವ್ಯಾಚ್ಯವಾಗಿ ನಿಂದಿಸಿರುವ ದೃಶ್ಯವನ್ನು ವಿದ್ಯಾರ್ಥಿ ಮೊಬೈಲ್‌ನಲ್ಲಿ ಸೆರೆ ಹಿಡಿದು ಜಿಲ್ಲಾ ಪೊಲೀಸ್ ಅಧೀಕ್ಷಕ ಹಾಗೂ ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ. ಆಸ್ಪತ್ರೆಯ ಒಳಗೆ ಒತ್ತಡದಲ್ಲಿ ಕೆಲಸ ಮಾಡುವ ಸಿಬ್ಬಂದಿಯೂ ತಾಳ್ಮೆ ಕಳೆದುಕೊಳ್ಳುವುದು ಸಹಜವಾಗಿದ್ದು ಅಧಿಕಾರಿಗಳು ಬುದ್ಧಿ ಹೇಳಿ ಸುಮ್ಮನಾಗಿದ್ದಾರೆ. ವಿದ್ಯಾರ್ಥಿಯ ವೈದ್ಯಕೀಯ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿರುವ ಹಿನ್ನೆಲೆಯಲ್ಲಿ ಭಾನುವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.

ಕೆಂಪು ವಲಯದತ್ತ ಜಿಲ್ಲೆ!: ಜಿಲ್ಲೆಯಲ್ಲಿ ಈಗಾಗಲೇ 11 ಕರೊನಾ ಪ್ರಕರಣಗಳು ದಾಖಲಾಗಿವೆ, 7 ಸಕ್ರಿಯ ಪ್ರಕರಣಗಳಿದ್ದು ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸಂಖ್ಯೆ 15 ದಾಟಿದರೆ ಜಿಲ್ಲೆಯನ್ನು ಅಪಾಯದಲ್ಲಿರುವ ಕೆಂಪುವಲಯ ಎಂದು ಗುರುತಿಸುವ ಸಾಧ್ಯತೆಯಿದೆ. ಹಾಗಾಗಿ, ನಾಗರಿಕರು ಎಚ್ಚರಿಕೆಯಿಂದಲೇ ಅಂತಕ ಕಾಯ್ದುಕೊಳ್ಳಬೇಕು ಎಂಬುದು ಜಿಲ್ಲಾಡಳಿತದ ಮನವಿಯಾಗಿದೆ.

ಸಾಮಾನ್ಯ ಕೆಮ್ಮು, ನೆಗಡಿ ಲಕ್ಷಣವಿದ್ದ ಕಾರಣಕ್ಕೆ ಜವಬ್ದಾರಿಯುತ ನಾಗರಿಕನಾಗಿ ಕೋವಿಡ್-19 ಟೆಸ್ಟ್ ಮಾಡಿಸಿ ಕೊಂಡಿದ್ದೆ. ಯಾವುದೇ ಪ್ರಯಾಣದ ಹಿನ್ನೆಲೆ ಇಲ್ಲದ ಏಕಾಏಕಿ ಆಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಲಾಯಿತು. ವರದಿ ನೆಗೆಟಿವ್ ಬಂದಿದ್ದರಿಂದ 3 ದಿನದ ನಂತರ ಹೊರಬಿಟ್ಟರು. ಒಳಗೆ ಆಸ್ಪತ್ರೆ ಹಾಗೂ ಪೊಲೀಸ್ ಸಿಬ್ಬಂದಿ ನಡವಳಿಕೆ ಅಸಹನೀಯ, ಡಿಸಿ, ಎಸ್ಪಿಗೆ ದೂರು ನೀಡಿದ್ದೇನೆ. ಸಂಶೋಧನಾ ವಿದ್ಯಾರ್ಥಿ, ತುಮಕೂರು ವಿವಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net