

ತೆಲಸಂಗ: ಯಾವುದೇ ಅಭಿವೃದ್ಧಿ ಕಾಮಗಾರಿಗಳು ವಿಳಂಬ ಅಥವಾ ಅಪೂರ್ಣವಾಗಬಾರದು. ಅಧಿಕಾರಿಗಳು ಜನರ ಸಮಸ್ಯೆಗಳನ್ನು ತಕ್ಷಣವೇ ಪರಿಹರಿಸಬೇಕು ಮತ್ತು ಗ್ರಾಮಕ್ಕೆ ಕಲ್ಪಿಸಬೇಕಾದ ಮೂಲಸೌಕರ್ಯಗಳ ಬಗ್ಗೆ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ತೋರಿಸಬಾರದು ಎಂದು ಜಿಲ್ಲಾ ಪಂಚಾಯಿತಿ ಯೋಜನಾಧಿಕಾರಿ ರವಿ ಬಂಗಾರಪ್ಪನವರ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಭಾನುವಾರ ಗ್ರಾಮದ ಜೆಜೆಎಂ ಕಾಮಗಾರಿ, ಅಂಗನವಾಡಿ ಕಟ್ಟಡ ಕಾಮಗಾರಿ, ಲಿಕ್ವಿಡ್ ವೇಸ್ಟೇಜ್ ಮ್ಯಾನೇಜ್‌ಮೆಂಟ್ ಕಾಮಗಾರಿ ಪರಿಶೀಲನೆ, ಸರ್ಕಾರಿ ಆಸ್ಪತ್ರೆ ಮತ್ತು ಬಿಸಿಎಂ ಹಾಸ್ಟೆಲ್‌ಗೆ ಭೇಟಿ ನೀಡಿ ಮಾತನಾಡಿದರು. ಗುತ್ತಿಗೆದಾರರ ನಿರ್ಲಕ್ಷ್ಯದಿಂದಾಗಿ ಕೆಲ ಕಾಮಗಾರಿಗಳು ಸಾರ್ವಜನಿಕರಿಗೆ ತೊಂದರೆಯುಂಟು ಮಾಡುತ್ತಿವೆ ಎಂಬ ದೂರುಗಳು ಬರುತ್ತಿವೆ.
ಅಂತಹ ಗುತ್ತಿಗೆದಾರರ ಮೇಲೆ ನಿಗಾ ಇರಿಸಿ, ಕಪ್ಪುಪಟ್ಟಿಗೆ ಸೇರಿಸಿ ಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದು ಎಚ್ಚರಿಸಿದರು. ಜೆಜೆಎಂ ಕಾಮಗಾರಿಯ ಪೈಪ್‌ಲೈನ್‌ಗಾಗಿ ರಸ್ತೆ ಅಗೆದು ಬಿಟ್ಟಿದ್ದು, ಜನರಿಗೆ ತೊಂದರೆ ಆಗುತ್ತಿರುವ ದೂರುಗಳು ಬಂದಿದ್ದು, ಕೂಡಲೇ ಸರಿಪಡಿಸಬೇಕು ಎಂದು ಸೂಚಿಸಿದರು.
ಗ್ರಾಪಂ ಸದಸ್ಯ ಸಿದ್ದಲಿಂಗ ಮಾದರ, ಶಂಕರ ಮೆಣಸಂಗಿ, ನರ್ಸ್ ಪ್ರೇಮಾ ಶಿರಹಟ್ಟಿ, ಸಂಗಮೇಶ ಕುಮಠಳ್ಳಿ, ಮಹೇಶ ಕುಂಬಾರ, ಪವನ ಶಿಂಧೆ, ರಾಮು ತೇಲಿ, ಬಸವರಾಜ ಅಸ್ಕಿ ಇತರರಿದ್ದರು.