

ಕೇಶವಮೂರ್ತಿ ವಿ.ಬಿ. ಹಾವೇರಿ
ರಾಜ್ಯದಲ್ಲಿ ಆರಂಭವಾಗಿರುವ ಗ್ರಾಮ ಪಂಚಾಯಿತಿ ತೆರಿಗೆ ವಸೂಲಾತಿ ಅಭಿಯಾನದಲ್ಲಿ ರಾಯಚೂರು ಜಿಲ್ಲೆ ಪ್ರಥಮ ಸ್ಥಾನ ಹಾಗೂ ಯಾದಗಿರಿ ಜಿಲ್ಲೆ ಕೊನೆಯ ಸ್ಥಾನ ಪಡೆದುಕೊಂಡಿದ್ದು, ಹಾವೇರಿ ಜಿಲ್ಲೆ 17ನೇ ಸ್ಥಾನದಲ್ಲಿದೆ. ಜಿಲ್ಲೆಯಲ್ಲಿ ತೆರಿಗೆ ವಸೂಲಾತಿಯಲ್ಲಿ ಭಾರಿ ಹಿನ್ನಡೆಯಾಗಿದ್ದು, ಒಟ್ಟಾರೆ 113 ಕೋಟಿ ರೂ. ಸಂಗ್ರಹಿಸುವ ಗುರಿಯಲ್ಲಿ ಕೇವಲ 22 ಕೋಟಿ ರೂ. ಸಂಗ್ರಹಿಸಲಾಗಿದೆ. ಇದರಿಂದ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಕೊಡಲಿ ಪೆಟ್ಟು ಬೀಳುವ ಆತಂಕ ಎದುರಾಗಿದೆ.
ಜಿಲ್ಲೆಯಲ್ಲಿ 223 ಗ್ರಾಮ ಪಂಚಾಯಿತಿಗಳಿದ್ದು, ಮಾರ್ಚ್ 31ರವರೆಗೆ ತೆರಿಗೆ ವಸೂಲಿ ಅಭಿಯಾನ ನಡೆಯಲಿದೆ. ಪ್ರಸಕ್ತ ಆರ್ಥಿಕ ವರ್ಷದ ಗುರಿಯಲ್ಲಿ ಕೋಟಿ ರೂ. ಸಂಗ್ರಹಿಸಲಾಗಿದೆ. ಮೂರು ತಿಂಗಳಲ್ಲಿ ಗ್ರಾಪಂಗಳಲ್ಲಿ 91 ಕೋಟಿ ರೂ. ಬಾಕಿ ವಸೂಲಿ ಮಾಡಬೇಕಿದೆ. ಜಿಲ್ಲೆಯ ಎಲ್ಲ ಗ್ರಾಪಂಗಳಿಂದ ಈ ವರ್ಷದ ಗುರಿ 40.43 ಕೋಟಿ ರೂ. ಇದ್ದರೆ, ಹಿಂದಿನ ಬಾಕಿ 73.17 ಕೋಟಿ ರೂ. ಉಳಿದುಕೊಂಡಿದೆ.
ಜಿಲ್ಲೆಯಲ್ಲಿ ಹಾವೇರಿ ತಾಲೂಕು ತೆರಿಗೆ ವಸೂಲಿಯಲ್ಲಿ ಮುಂದಿದ್ದು, ರಟ್ಟಿಹಳ್ಳಿ, ರಾಣೆಬೆನ್ನೂರ, ಶಿಗ್ಗಾಂವಿ ತಾಲೂಕುಗಳು ಹಿಂದೆ ಉಳಿದಿವೆ. 33 ಗ್ರಾಮ ಪಂಚಾಯಿತಿಗಳನ್ನು ಹೊಂದಿರುವ ಹಾವೇರಿ ತಾಲೂಕು ಪ್ರಸಕ್ತ ಆರ್ಥಿಕ ವರ್ಷದಲ್ಲಿ 5.50 ಕೋಟಿ ರೂ. ವಸೂಲಾತಿ ಗುರಿ ಹೊಂದಿದ್ದು, ಈವರೆಗೆ 4.57 ಕೋಟಿ ರೂ. ತೆರಿಗೆ ಸಂಗ್ರಹಿಸುವ ಮೂಲಕ ಶೇ. 83ರಷ್ಟು ಪ್ರಗತಿ ಸಾಧಿಸಿ ಜಿಲ್ಲೆಗೆ ಮೊದಲ ಸ್ಥಾನದಲ್ಲಿದೆ. ಜಿಲ್ಲೆಯಲ್ಲಿ ಅತಿ ಹೆಚ್ಚು 42 ಗ್ರಾಪಂ ಹೊಂದಿರುವ ಹಾನಗಲ್ಲ ತಾಲೂಕು ಪ್ರಸಕ್ತ ಸಾಲಿನಲ್ಲಿ 6.92 ಕೋಟಿ ರೂ. ತೆರಿಗೆ ವಸೂಲಾತಿ ಗುರಿ ಹೊಂದಿದ್ದು, ಈವರೆಗೆ 4.62 ಕೋಟಿ ರೂ. ವಸೂಲಿ ಮಾಡುವ ಮೂಲಕ ಶೇ. 67ರಷ್ಟು ಪ್ರಗತಿ ಸಾಧಿಸಿ ಎರಡನೇ ಸ್ಥಾನದಲ್ಲಿದೆ.
19 ಗ್ರಾಪಂ ಹೊಂದಿರುವ ಹಿರೇಕೆರೂರ ತಾಲೂಕು 3.01 ಕೋಟಿ ರೂ. ವಸೂಲಿ ಗುರಿಯಲ್ಲಿ 1.71 ಕೋಟಿ ವಸೂಲಿ ಮಾಡಿ, ಶೇ. 57ರಷ್ಟು ಪ್ರಗತಿ ಹೊಂದಿ ಮೂರನೇ ಸ್ಥಾನದಲ್ಲಿದೆ. 21 ಗ್ರಾಪಂ ಹೊಂದಿರುವ ಸವಣೂರ ತಾಲೂಕು 3.45 ಕೋಟಿ ರೂ. ಗುರಿಯಲ್ಲಿ ಶೇ. 54ರಷ್ಟು 1.85 ಕೋಟಿ ರೂ. ಗುರಿ ಸಾಧಿಸಿದೆ. 21 ಗ್ರಾಪಂ ಇರುವ ಬ್ಯಾಡಗಿ 5.41 ಕೋಟಿ ರೂ. ತೆರಿಗೆ ವಸೂಲಿ ಗುರಿಯಲ್ಲಿ 2.70 ಕೋಟಿ ರೂ. ಸಂಗ್ರಹಿಸಿದೆ. 28 ಗ್ರಾಪಂ ಹೊಂದಿರುವ ಶಿಗ್ಗಾಂವಿ 4.49 ಕೋಟಿ ರೂ. ವಸೂಲಿ ಗುರಿಯಲ್ಲಿ 2.22 ಕೋಟಿ ರೂ. ತೆರಿಗೆ ಸಂಗ್ರಹಿಸಿದೆ.
40 ಗ್ರಾಪಂ ಹೊಂದಿರುವ ರಾಣೆಬೆನ್ನೂರ ತಾಲೂಕು 8.20 ಕೋಟಿ ರೂ. ತೆರಿಗೆ ವಸೂಲಾತಿ ಗುರಿ ಹೊಂದಿದ್ದು, ಈವರೆಗೆ 3.76 ಕೋಟಿ ರೂ. ಸಂಗ್ರಹಿಸಿದೆ. 19 ಗ್ರಾಪಂಗಳಿರುವ ರಟ್ಟಿಹಳ್ಳಿ ತಾಲೂಕು 3.21 ಕೋಟಿ ರೂ. ವಸೂಲಿ ಗುರಿ ಹೊಂದಿದ್ದು, ಈವರೆಗೆ 1.30 ಕೋಟಿ ರೂ. ಮಾತ್ರ ಸಂಗ್ರಹಿಸುವ ಮೂಲಕ ಶೇ. 41ರಷ್ಟು ಪ್ರಗತಿ ಸಾಧಿಸಿ, ಕೊನೆಯ ಸ್ಥಾನದಲ್ಲಿದೆ.
ಹಾನಗಲ್ಲ ತಾಲೂಕಿನ ಸುರಳೇಶ್ವರ ಗ್ರಾಪಂ ಹಳೆಯ ಬಾಕಿ ಸೇರಿ 7,64,958 ರೂ. ತೆರಿಗೆ ಸಂಗ್ರಹಿಸುವ ಮೂಲಕ ಶೇ. 161ರಷ್ಟು ಗುರಿ ಸಾಧಿಸಿ ಜಿಲ್ಲೆಗೆ ಪ್ರಥಮ ಸ್ಥಾನದಲ್ಲಿದೆ. ಹಾವೇರಿ ತಾಲೂಕಿನ ಹಾವಂಶಿ ಗ್ರಾಪಂ ಶೇ. 151ರಷ್ಟು, ಹಾವೇರಿ ತಾಲೂಕು ಹೊಸಕಿತ್ತೂರು ಗ್ರಾಪಂ ಶೇ. 136, ಹಾನಗಲ್ಲ ತಾಲೂಕು ಡೊಳ್ಳೇಶ್ವರ ಗ್ರಾಪಂ ಶೇ. 122ರಷ್ಟು, ರಟ್ಟಿಹಳ್ಳಿ ತಾಲೂಕು ಚಿಕ್ಕಯಡಚಿ ಗ್ರಾಪಂ ಶೇ. 119, ಹಾನಗಲ್ಲ ತಾಲೂಕು ಹೊಂಕಣ ಗ್ರಾಪಂ ಶೇ. 118, ಹಿರೇಕೆರೂರ ತಾಲೂಕು ಸಾತೇನಹಳ್ಳಿ ಗ್ರಾಪಂ ಶೇ. 110, ಆಲದಗೇರಿ ಗ್ರಾಪಂ ಶೇ. 108, ಸವಣೂರ ತಾಲೂಕು ಶಿರಬಡಗಿ ಗ್ರಾಪಂ ಶೇ. 108, ಹಾವೇರಿ ತಾಲೂಕು ಕುಳೇನೂರ ಗ್ರಾಪಂ ಶೇ. 107ರಷ್ಟು ಗುರಿ ಸಾಧಿಸಿದೆ.
ಗ್ರಾಪಂಗಳ ತೆರಿಗೆ ವಸೂಲಾತಿಗೆ ಮಾರ್ಚ್ 31ರವರೆಗೆ ಅವಕಾಶವಿದ್ದು, ಈ ನಿಟ್ಟಿನಲ್ಲಿ ಸಮರೋಪಾದಿಯಲ್ಲಿ ತೆರಿಗೆ ವಸೂಲಾತಿ ನಡೆಸಿದರೆ ಎಲ್ಲ ತಾಲೂಕುಗಳು, ಗ್ರಾಪಂಗಳು ಹೆಚ್ಚಿನ ಸಾಧನೆ ತೋರಬಹುದು. ಇದರಿಂದ ಗ್ರಾಪಂ ಅಭಿವೃದ್ಧಿ ಜತೆಗೆ ಸಿಬ್ಬಂದಿಯ ಸಂಬಳ ವಿತರಿಸಲೂ ಸಹಕಾರಿಯಾಗಲಿದೆ.
ರೈತ ಪ್ರಧಾನವಾದ ಹಾವೇರಿ ಜಿಲ್ಲೆಯಲ್ಲಿ ಜನವರಿ, ಫೆಬ್ರವರಿಯಲ್ಲಿ ರೈತರು ಹೆಚ್ಚಾಗಿ ವಂತಿಗೆ ಪಾವತಿಸುತ್ತಾರೆ. ಈ ತಿಂಗಳುಗಳಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ತೆರಿಗೆ ವಸೂಲಾತಿ ಮಾಡಲು ಅಧಿಕಾರಿ, ಸಿಬ್ಬಂದಿಗೆ ಸೂಚಿಸಲಾಗಿದೆ. | ಡಾ. ರಂಗಸ್ವಾಮಿ, ಹಾವೇರಿ ಜಿಪಂ ಉಪ ಕಾರ್ಯದರ್ಶಿ