ಕ್ವಾರಂಟೈನ್ ಮಂದಿಗಳ ವರದಿ ವಿಳಂಬ ಸೋಂಕು ಹೆಚ್ಚಳಕ್ಕೆ ಕಾರಣ?

corona new
Published on

ಉಡುಪಿ:  ಜಿಲ್ಲೆಯಲ್ಲಿ ಕೋವಿಡ್-19 ಪ್ರಕರಣ ಶತಕದ ಗಡಿ ದಾಟಿದೆ. ಕೆಲವೇ ದಿನಗಳಲ್ಲಿ ಒಟ್ಟು ಸೋಂಕಿತರ ಸಂಖ್ಯೆ 108ಕ್ಕೆ ಏರಿಕೆಯಾಗಿದೆ. ಭಾನುವಾರ 18 ಪ್ರಕರಣ ಪತ್ತೆಯಾದರೆ, ಸೋಮವಾರ 32 ಪ್ರಕರಣ ವರದಿಯಾಗಿರುವುದ ಆತಂಕ ಹೆಚ್ಚುವಂತೆ ಮಾಡಿದೆ.

ಕ್ವಾರಂಟೈನ್ ಕೇಂದ್ರದಲ್ಲಿರುವವರ ವರದಿ ವಿಳಂಬ ಸೋಂಕಿನ ವೇಗ ಹೆಚ್ಚಲು ಕಾರಣ ಎನ್ನಲಾಗುತ್ತಿದೆ. ಒಂದೇ ದಿನದಲ್ಲಿ ವರದಿ ಬಂದಲ್ಲಿ ಸಾಧ್ಯವಾದಷ್ಟು ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲು ಸಾಧ್ಯವಿದ್ದು, ವೈರಸ್ ಹರಡುವುದು ತಡೆಗಟ್ಟಬಹುದು. ಕ್ವಾರಂಟೈನ್ ಕೇಂದ್ರದಲ್ಲಿ 14 ದಿನ ಪೂರೈಸಿ 20 ದಿನ ಕಳೆದರೂ, ವರದಿ ಕೈಸೇರದಿರುವುದು ಆತಂಕಕ್ಕೆ ಕಾರಣವಾಗಿದೆ. ಗುಂಪು ಗುಂಪಾಗಿ ಕ್ವಾರಂಟೈನ್ ಮಾಡಿರುವ ಬಗ್ಗೆ ಅಪಸ್ವರ ಕೇಳಿಬರುತ್ತಿರುವುದಕ್ಕೆ ಅಧಿಕಾರಿಗಳು ನೀಡುವ ಸ್ಪಷ್ಟನೆ ಹೀಗಿದೆ.

11 ಮಂದಿ ಬಸ್ ಮಾಡಿಕೊಂಡು ಒಟ್ಟಿಗೆ ಬಂದವರನ್ನು ಒಂದೇ ಕಡೆ ಕ್ವಾರಂಟೈನ್ ಮಾಡಿದ್ದೇವೆ. 6 ಮಂದಿ ಒಟ್ಟಿಗೆ ಕಾರಿನಲ್ಲಿ ಬಂದವರಿಗೆ ಒಟ್ಟಿಗೆ ಕ್ವಾರಂಟೈನ್ ಮಾಡಲಾಗಿದೆ ಇದೇನು ಅವೈಜ್ಞಾನಿಕವಲ್ಲ. ಜಿಲ್ಲೆಗೆ ಆಗಮಿಸಿದ 8 ಸಾವಿರ ಮಂದಿಗೂ ಒಬ್ಬೊಬ್ಬರಿಗೂ ಆಟ್ಯಾಚ್ಡ್ ಬಾತ್ ರೂಂ ಇರುವ ಸಿಂಗಲ್ ಕೋಣೆ ನೀಡಲು ಹೇಗೆ ಸಾಧ್ಯ ಎಂಬುದು ಅಧಿಕಾರಿಗಳ ಅಭಿಪ್ರಾಯ. ಆದರೆ ವರದಿ ವಿಳಂಬದಿಂದ ಸಮಸ್ಯೆಯಾಗುತ್ತಿರುವುದು ನಿಜ ಎಂಬುದನ್ನು ಅಧಿಕಾರಿಗಳೂ ಒಪ್ಪುತ್ತಾರೆ.

ಜಿಲ್ಲೆಯಲ್ಲಿ ಇರುವುದು ಒಂದೇ ಲ್ಯಾಬ್

ಜಿಲ್ಲೆಯಲ್ಲಿ ಇತ್ತೀಚೆಗಷ್ಟೆ ಮಣಿಪಾಲ ಕೆಎಂಸಿಯಲ್ಲಿ ಕೋವಿಡ್-19 ಲ್ಯಾಬ್ ಕಾರ್ಯಾರಂಭಿಸಿದೆ. ಅತ್ಯುನ್ನತ ಸುಧಾರಿತ ತಂತ್ರಜ್ಞಾನದೊಂದಿಗೆ ಈ ಲ್ಯಾಬ್ ರೂಪಿಸಲಾಗಿದೆ. ನುರಿತ ತಾಂತ್ರಿಕ ಸಿಬ್ಬಂದಿ ಇದರಲ್ಲಿ ಕಾರ್ಯನಿರ್ವಹಿಸುತಿದ್ದಾರೆ. ಈ ಬಗ್ಗೆ ಸ್ಪಷ್ಟವಾಗಿ ತಿಳಿದು ಕಾರ್ಯನಿರ್ವಹಿಸಲು ಸ್ವಲ್ಪ ವಿಳಂಬವಾಗುತ್ತಿದೆ. ಆದ್ದರಿಂದ ದಿನಕ್ಕೆ 50ರಿಂದ 100 ಪರೀಕ್ಷೆ ನಡೆಸಲು ಸಾಧ್ಯವಾಗುತ್ತಿದೆ. ಮುಂದಿನ 15-20 ದಿನಗಳ ಬಳಿಕ 150 ರಿಂದ 200 ಪರೀಕ್ಷೆ ನಡೆಸಬಹುದು ಎನ್ನುತ್ತಾರೆ ಅಧಿಕಾರಿಗಳು.

ಸಾಮೂಹಿಕವಾಗಿ ಮಾದರಿ ಸಂಗ್ರಹದಿಂದಲೂ ತಡ: ಕ್ವಾರಂಟೈನ್ ಇರುವ 3600 ಜನರ ಗಂಟಲ ದ್ರವ ಸಂಗ್ರಹಿಸಲಾಗಿದೆ. ಜತೆಗೆ, ಸ್ಥಳೀಯವಾಗಿ ಅನಾರೋಗ್ಯ ಹೊಂದಿರುವವರು, ಪೊಲೀಸ್ ಸಿಬ್ಬಂದಿ ಮೊದಲಾದವರ ಗಂಟಲ ದ್ರವವನ್ನೂ ಸಂಗ್ರಹಿಸಲಾಗುತ್ತಿದೆ. ಈ ಹಿಂದೆ ಲಕ್ಷಣ ಇದ್ದವರಿಗೆ ಮಾತ್ರ ಆದ್ಯತೆ ನೀಡಿ ಮಾದರಿ ಸಂಗ್ರಹಿಸಲಾಗುತ್ತಿತ್ತು, ಈಗ ಸಾಮೂಹಿಕವಾಗಿ ಮಾದರಿ ಸಂಗ್ರಹಿಸುತ್ತಿರುವುದು ವಿಳಂಬಕ್ಕೆ ಕಾರಣ ಎನ್ನಲಾಗಿದೆ.

ಲ್ಲೆಯ ಮಾದರಿಯನ್ನು ಮಣಿಪಾಲ ಕೆಎಂಸಿ, ಮಂಗಳೂರು ವೆನ್ಲಾಕ್, ಶಿವಮೊಗ್ಗಕ್ಕೆ ಕಳುಹಿಸಲಾಗುತ್ತಿದೆ. ವೆನ್ಲಾಕ್ ಮತ್ತು ಶಿವಮೊಗ್ಗದಿಂದ ವರದಿ ಬರಲು ವಿಳಂಬವಾಗುತ್ತಿದೆ. ಅವರ ಜಿಲ್ಲೆಗೆ ಮೊದಲು ಆದ್ಯತೆ ನೀಡಿ ಸೀಮಿತ ಸಂಖ್ಯೆಯಲ್ಲಿ ಮಾದರಿಯನ್ನು ಸ್ವೀಕರಿಸುತ್ತಿವೆ. ಇದಕ್ಕೆ ಪರಿಹಾರ ಕಂಡುಕೊಳ್ಳಲು ಮಂಗಳೂರು ಕೆಎಂಸಿ, ಫಾದರ್‌ಮುಲ್ಲರ್, ಯನಪೋಯ ಆಸ್ಪತ್ರೆ ಲ್ಯಾಬ್‌ನಲ್ಲಿಯೂ ಮಾದರಿ ಸ್ವೀಕರಿಸಿ, ವರದಿ ನೀಡುವಂತೆ ಉಡುಪಿ ಜಿಲ್ಲಾಡಳಿತ ಮನವಿ ಮಾಡಿದೆ. ಒಟ್ಟು ಜಿಲ್ಲೆಯಲ್ಲಿ 4540 ಮಂದಿಯ ವರದಿ ಬರಲು ಬಾಕಿ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net