ವಿಜಯವಾಣಿ ಸುದ್ದಿಜಾಲ ಮಧುಗಿರಿ
ತಾಲೂಕಿನ ಕೊಂಡವಾಡಿ ಹಾಲು ಉತ್ಪಾದಕರ ಸಂಘದಲ್ಲಿ ರೈತರಿಂದ ಖರೀದಿಸಿದ ಹಾಲು ಗುಣಮಟ್ಟದ ಕಾರಣಕ್ಕೆ 18 ಲಕ್ಷ ರೂ. ಬಾಕಿ ನೀಡಲು ತಡವಾಗಿರುವ ಪ್ರಕರಣ ಪರಸ್ಪರ ರಾಜಕೀಯ ಆರೋಪ, ಪ್ರತ್ಯಾರೋಪಕ್ಕೆ ತಿರುಗಿದೆ.
ರೈತರಿಗೆ ಹಾಲಿನ ಬಿಲ್ ತಡವಾಗಲು ಸಂದ ಮಾಜಿ ಅಧ್ಯಕ್ಷ ಕೊಂಡವಾಡಿ ಚಂದ್ರಶೇಖರ್ ಹಾಗೂ ಹಿಂದಿನ ಕಾರ್ಯದರ್ಶಿ ಕಾರಣ ಎಂದು ಮಂಗಳವಾರ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತುಮುಲ್ ನಿರ್ದೇಶಕ ಬಿ.ನಾಗೇಶ್ ಬಾಬು ಆರೋಪಿಸಿದರು. ಯಾವುದೇ ಸಂಘ&ಸಂಸ್ಥೆಗಳಲ್ಲೂ ಅಧಿಕಾರ ಮುಗಿದ ನಂತರ ಆಡಳಿತಾಧಿಕಾರಿ ನೇಮಕ ಮಾಡುವುದು ಸಾಮಾನ್ಯ. ಆದರೆ, ಅಧಿಕಾರಾವಧಿ ಮುಗಿದ ನಂತರವೂ ನನ್ನನ್ನು ಮುಂದುವರಿಸಿ ಎಂದು ಕೇಳಿದ ರಾಜ್ಯದ ಏಕೈಕ ವ್ಯಕ್ತಿ ಕೊಂಡವಾಡಿ ಚಂದ್ರಶೇಖರ್ ಎಂದು ಕುಟುಕಿದರು.
ಅಧಿಕಾರವಧಿ ಪೂರ್ಣಗೊಂಡಿರುವ ಕೊಂಡವಾಡಿ ಹಾಲು ಉತ್ಪಾದಕರ ಸಂಕ್ಕೆ ನಿಯಮಗಳಂತೆ ಆಡಳಿತ ಅಧಿಕಾರಿ ನೇಮಕವಾಗಿದೆ. ಆದರೆ, ಹಿಂದಿನ ಅಧ್ಯಕ್ಷ ಪದಾಧಿಕಾರಿಗಳು ಸರಿಯಾದ ಲೆಕ್ಕಪತ್ರಗಳನ್ನು ನೀಡದಿರುವುದು ರೈತರು ಹಾಲಿನ ಹಣ ಸಿಗದಂತೆ ಮಾಡಿದೆ. ನ್ಯಾಯಾಲಯದ ಸೂಚನೆಯಂತೆ ಆಡಳಿತಾಧಿಕಾರಿ ಮೂಲಕವೇ ಹಣ ವಿತರಣೆ ಆಗಬೇಕಿದೆ, ಈಗಾಗಲೇ 24 ಲಕ್ಷ ರೂ. ವಿತರಣೆಯಾಗಿದೆ ಎಂದರು.
ಸಾಕಷ್ಟು ಸಲ ಸೂಚನೆ ನೀಡಿದರೂ ಕೊಂಡವಾಡಿ ಸಂಘದ ಕಾರ್ಯದರ್ಶಿ ಆಡಳಿತಾಧಿಕಾರಿಗೆ ಸಂಘದ ಪುಸ್ತಕ, ಲೆಕ್ಕಪತ್ರ ನೀಡದೆ ಕಾಲಹರಣ ಮಾಡುತ್ತಿದ್ದಾರೆ. ರಾಜಕೀಯ ವೈಷಮ್ಯದಿಂದ ಹಾಲು ಉತ್ಪಾದಕರಿಗೆ ಸಕಾಲದಲ್ಲಿ ಹಾಲಿನ ಹಣ ಸಿಗದಂತೆ ಮಾಡಲಾಗಿದೆ ಎಂದು ದೂರಿದರು.
ಕೆಎಂಎಫ್ ನಿರ್ದೇಶಕ ಮೈದನಹಳ್ಳಿ ಎಂ.ಪಿ.ಕಾಂತರಾಜು ಮಾತನಾಡಿ, ಕೊಂಡವಾಡಿ ಚಂದ್ರಶೇಖರ್ ಅಧ್ಯಕ್ಷತೆಯ ಕಾಲದಲ್ಲಿ ತಾಲೂಕಿನಲ್ಲಿ ಗುಣಮಟ್ಟದ ಹಾಲು ಉತ್ಪಾದನೆಯಾಗದೆ ರೈತರು ನಷ್ಟ ಅನುಭವಿಸಿದ್ದರು. ಆದರೆ, ಕೆ.ಎನ್.ರಾಜಣ್ಣ ಅವರ ದೂರದೃಷ್ಟಿ ಫಲವಾಗಿ ತಾಲೂಕಿನ 172 ಸಹಕಾರ ಸಂಘಗಳಲ್ಲಿ ನೂತನ ತಂತ್ರಾಂಶ ಮತ್ತು ಅನಾಲೈಜರ್ ಅಳವಡಿಸಿಕೊಂಡು ಲಾಭಾಂಶ ಗಳಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದರು.
ವಿಎಸ್ಎಸ್ಎಸ್ ಅಧ್ಯಕ್ಷ ರಾಜಕುಮಾರ್, ಸ್ಥಳಿಯ ಮುಖಂಡತಾದ ರಾಧಮಣಿ, ನಾಗಣ್ಣ, ತಿಪ್ಪೇಸ್ವಾಮಿ, ಸದಾಶಿವ, ರವಿಕುಮಾರ್, ಕುಮಾರ್, ಪ್ರಸನ್ನ ಕುಮಾರ್, ರಾಜಶೇಖರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆದಿನಾರಾಯಣರೆಡ್ಡಿ ಇದ್ದರು.