

ಸಿದ್ದಾಪುರ: ಜಿಲ್ಲೆಯ ವಿರಾಜಪೇಟೆ ತಾಲೂಕಿನ ಸಿದ್ದಾಪುರದಲ್ಲಿ ಅಂತಾರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ಕೊಣನೂರು-ಮಾಕುಟ್ಟ ರಾಜ್ಯ ಹೆದ್ದಾರಿಯ ಸುಮಾರು 2 ಕಿ.ಮೀ. ರಸ್ತೆ ವಿಸ್ತರಣೆ ಹಾಗೂ ಡಾಂಬರೀಕರಣ ಏಳು ತಿಂಗಳು ಕಳೆದರೂ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ರಸ್ತೆ ಕೆಸರುಮಯವಾಗಿ ಪರಿವರ್ತನೆಯಾಗಿದೆ.
ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ ವತಿಯಿಂದ ಗುರುವಾರ ಸಿದ್ದಾಪುರದಲ್ಲಿ ಆಯೋಜಿಸಿದ್ದ ಸಂವಾದದಲ್ಲಿ ಸ್ಥಳೀಯ ವರ್ತಕರು ಹಾಗೂ ಸಾರ್ವಜನಿಕರು ಸಮಸ್ಯೆಗಳ ಕುರಿತು ಎಳೆಎಳೆಯಾಗಿ ಬಿಚ್ಚಿಟ್ಟರು. ಇದೀಗ ಮಳೆಗಾಲ ಪ್ರಾರಂಭವಾಗಿದ್ದು ರಸ್ತೆ ಕೆಸರುಮಯವಾಗಿದೆ. ಕಾಮಗಾರಿ ವಿಳಂಬದಿಂದಾಗಿ ವಾಹನ ಸವಾರರು, ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರು ಸಂಕಷ್ಟ ಅನುಭವಿಸುವಂತಾಗಿದೆ ಎಂದು ಕಿಡಿಕಾರಿದರು.
ಕೊಣನೂರು ಮಾಕುಟ್ಟ-ರಾಜ್ಯ ಹೆದ್ದಾರಿಗೆ ಒಳಪಡುವ ಈ ರಸ್ತೆ ಅಂತಾರಾಜ್ಯಕ್ಕೆ ಸಂಪರ್ಕ ಕಲ್ಪಿಸಲಿದೆ. ನಿತ್ಯ ಈ ಮಾರ್ಗದಲ್ಲಿ ನೂರಾರು ವಾಹನಗಳು ಸಂಚರಿಸುತ್ತವೆ. ಪಾಲಿಬೆಟ್ಟ ರಸ್ತೆಯಿಂದ ಇಂಜಿಲಗೆರೆವರೆಗೆ ಅಂದಾಜು 2 ಕಿ.ಮೀ. ರಸ್ತೆಯ ವಿಸ್ತರಣೆ ಹಾಗೂ ಡಾಂಬರೀಕರಣಕ್ಕೆ ನವೆಂಬರ್‌ನಲ್ಲಿ ಚಾಲನೆ ನೀಡಲಾಗಿತ್ತು. ಇದೀಗ ಏಳು ತಿಂಗಳು ಕಳೆಯುತ್ತಿದ್ದು, ರಸ್ತೆ ಕಾಮಗಾರಿ ವಿಳಂಬದಿಂದ ಸಾರ್ವಜನಿಕರಿಗೆ ಸಮಸ್ಯೆ ಉಂಟಾಗುತ್ತಿದೆ. ಪಾಲಿಬೆಟ್ಟ ರಸ್ತೆಯಿಂದ ಅಯ್ಯಪ್ಪ ದೇವಸ್ಥಾನದವರೆಗೆ ಪಟ್ಟಣದ ಎರಡೂ ಬದಿ ಒಳಚರಂಡಿ ಮಾಡಲಾಗುತ್ತಿದ್ದು, ರಸ್ತೆ ಬದಿಯಲ್ಲಿರುವ ವಿದ್ಯುತ್ ಕಂಬಗಳನ್ನು ಗುತ್ತಿಗೆದಾರರೇ ತೆರವು ಗೊಳಿಸಬೇಕಿತ್ತು. ಆದರೆ ಗುತ್ತಿಗೆದಾರರು ಇನೂ ತೆರವುಗೊಳಿಸಿಲ್ಲ. ಕಂಬಗಳು ಇರುವ ಜಾಗವನ್ನು ಹೊರತುಪಡಿಸಿ ಉಳಿದ ಭಾಗದಲ್ಲಿ ಅಲ್ಲಲ್ಲಿ ಚರಂಡಿ ನಿರ್ಮಿಸಲಾಗಿದೆ. ರಸ್ತೆಗಿಂತ ಒಂದು ಅಡಿ ಎತ್ತರದಲ್ಲಿ ಚರಂಡಿ ನಿರ್ಮಿಸಿದ್ದು ಒಂದು ಭಾಗದ ಒಳಚರಂಡಿ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಏಕಾಏಕಿ ಮತ್ತೊಂದು ಬದಿಯಲ್ಲಿ ಚರಂಡಿ ನಿರ್ಮಾಣಕ್ಕೆ ಮುಂದಾಗಿದ್ದು ಅರ್ಧಂಬರ್ಧವಾಗಿದೆ ಎಂದರು.
ಇಷ್ಟು ದಿನ ಧೂಳಿನಿಂದ ಕಂಗಾಲಾಗಿದ್ದೆವು. ಇದೀಗ ಮಳೆಗಾಲ ಆರಂಭವಾಗಿದ್ದು, ರಸ್ತೆ ಪೂರ್ತಿ ಕೆಸರುಮಯವಾಗಿದೆ. ರಸ್ತೆಯುದ್ದಕ್ಕೂ ಅಲ್ಲಲ್ಲಿ ಹೊಂಡಗಳು ನಿರ್ಮಾಣವಾಗಿದ್ದು, ಅಪಾಯಕ್ಕೆ ಎಡೆ ಮಾಡಿಕೊಡುವಂತಾಗಿದೆ. ಕೆಲವು ವರ್ತಕರು ಕೆಸರಿನಿಂದಾಗಿ ಅಂಗಡಿಯನ್ನು ಮುಚ್ಚುವ ಪರಿಸ್ಥಿತಿ ಉಂಟಾಗಿದೆ. ಇನ್ನು ಒಂದು ವಾರದಲ್ಲಿ ಶಾಲೆ ಪ್ರಾರಂಭವಾಗಲಿದೆ. ಸಂತ ಅನ್ನಮ್ಮ ಶಾಲೆ, ಸರ್ಕಾರಿ ಮಲಯಾಳಂ ಶಾಲೆ, ಶ್ರೀಕೃಷ್ಣ ವಿದ್ಯಾಮಂದಿರ ಈ ರಸ್ತೆ ಬದಿಯಲ್ಲೇ ಇವೆ. ಈ ಹಿನ್ನೆಲೆಯಲ್ಲಿ ಮಕ್ಕಳು ಸೇರಿದಂತೆ ಶಿಕ್ಷಕರು, ಪಾಲಕರು ಹಾಗೂ ಸಾರ್ವಜನಿಕರಿಗೆ ಮಳೆಗಾಲದಲ್ಲಿ ತೊಂದರೆ ಉಂಟಾಗಲಿದೆ ಎಂದು ಆರೋಪಿಸಿದರು.
ಕೊಣನೂರು-ಮಾಕುಟ್ಟ ರಾಜ್ಯ ಹೆದ್ದಾರಿಯ ಕಾಮಗಾರಿ ವಿಳಂಬವಾಗುತ್ತಿರುವ ಬಗ್ಗೆ ಇತ್ತೀಚೆಗೆ ಇಂಜಿನಿಯರ್ ಹಾಗೂ ಗುತ್ತಿಗೆದಾರ ರನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡಿದ್ದರು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ್ದ ಇಂಜಿನಿಯರ್ ಕೃಷ್ಣರಾಜ್ ಬಳಿ ಕಾಮಗಾರಿ ವಿಳಂಬವಾಗುತ್ತಿರುವ ಬಗ್ಗೆ ವಿಚಾರಿಸಿದಾಗ ಸೆಸ್ಕ್ ಸಿಬ್ಬಂದಿ ವಿದ್ಯುತ್ ಕಂಬಗಳನ್ನು ಬದಲಾಯಿಸದೆ ವಿಳಂಬ ಮಾಡುತ್ತಿದ್ದಾರೆ. ಆದಷ್ಟು ಬೇಗ ವಿದ್ಯುತ್ ಕಂಬಗಳನ್ನು ತೆರವುಗೊಳಿಸಿ ಒಂದು ತಿಂಗಳಿನಲ್ಲಿ ಕಾಮಗಾರಿ ಮುಗಿಸಿ ಕೊಡುತ್ತೇವೆ ಎಂದು ಹೇಳಿ ತೆರೆಳಿದ ಇಂಜಿನಿಯರ್ ಹಾಗೂ ಗುತ್ತಿಗೆದಾರರು ಈವರೆಗೂ ಇತ್ತ ತಿರುಗಿಯೂ ನೋಡಿಲ್ಲ. ಹಾಗಾಗಿ ಮುಂದಿನ ದಿನದಲ್ಲಿ ರಾಜ್ಯ ಹೆದ್ದಾರಿಯಲ್ಲಿ ಸಂಚಾರ ತಡೆದು ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು.
-ಅಬೂಬಕ್ಕರ್ ಅಂಗಡಿ ಮಾಲೀಕ ಸಿದ್ದಾಪುರರಸ್ತೆ ಕಾಮಗಾರಿ ವಿಚಾರಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಇಂಜಿನಿಯರ್ ಹಾಗೂ ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಳ್ಳಲಾಗಿತ್ತು. ಈ ಸಂದರ್ಭ ಒಂದು ತಿಂಗಳಿನಲ್ಲಿ ಕಾಮಗಾರಿ ಮುಗಿಸಿಕೊಡುವುದಾಗಿ ಭರವಸೆ ನೀಡಿ ತೆರಳಿದ ಇಂಜಿನಿಯರ್ ಹಾಗೂ ಗುತ್ತಿಗೆದಾರರು ಇದುವರೆಗೂ ಇತ್ತ ತಿರುಗಿಯೂ ನೋಡಿಲ್ಲ. ಮುಂದಿನ ದಿನಗಳಲ್ಲಿ ಸ್ಥಳೀಯರನ್ನು ಒಗ್ಗೂಡಿಸಿ ರಸ್ತೆ ತಡೆದು ಪ್ರತಿಭಟನೆ ನಡೆಸಲಾಗುವುದು. ಭಾಗ್ಯನಾಥ್ ಸಿದ್ದಾಪುರ ರಸ್ತೆ ಕಾಮಗಾರಿ ವಿಳಂಬವಾಗುತ್ತಿದೆ. ಅಲ್ಲದೆ ರಸ್ತೆಯ ಒಂದು ಬದಿಯಲ್ಲಿ ಎತ್ತರಕ್ಕೆ ಚರಂಡಿ ನಿರ್ಮಾಣ ಮಾಡಲಾಗಿದ್ದು, ಅರ್ಧಕ್ಕೆ ನಿಲ್ಲಿಸಲಾಗಿದೆ. ಇದರಿಂದಾಗಿ ವರ್ತಕರು, ಜನರು ಓಡಾಡಲು ಸಾಧ್ಯವಾಗುತ್ತಿಲ್ಲ. ಈ ನಡುವೆ ಧೂಳು ಹಾಗೂ ಕೆಸರಿನಿಂದಾಗಿ ಶಾಲಾ ಮಕ್ಕಳು, ವಾಹನ ಸವಾರು ಸೇರಿದಂತೆ ಸಾರ್ವಜನಿಕರು ಹೈರಾಣಾಗಿದ್ದಾರೆ. ಮಳೆಗಾಲ ಪ್ರಾರಂಭವಾಗಿದ್ದು ಸದ್ಯದ ಮಟ್ಟಿಗೆ ರಸ್ತೆಯ ಹೊಂಡಗಳನ್ನು ಮುಚ್ಚುವ ಮೂಲಕ ಸಾರ್ವಜನಿಕರಿಗೆ ಅನುವು ಮಾಡಿಕೊಡಬೇಕು. ರಿಯಾಸ್ ಅಂಗಡಿ ಮಾಲೀಕ, ಸಿದ್ದಾಪುರ ಪಟ್ಟಣದ ರಸ್ತೆ ಬದಿಯಲ್ಲಿ ನೂರಾರು ಮನೆಗಳಿದ್ದು, ರಸ್ತೆ ಬದಿಯಲ್ಲಿ ದೇವಸ್ಥಾನ, ಚರ್ಚ್, ಆಸ್ಪತ್ರೆ, ಸಂತ ಅನ್ನಮ್ಮ ಶಾಲೆ, ಸರ್ಕಾರಿ ಮಲಯಾಳಂ ಶಾಲೆ, ಶ್ರೀ ಕೃಷ್ಣ ವಿದ್ಯಾಮಂದಿರ ಈ ರಸ್ತೆ ಬದಿಯಲ್ಲೇ ಇವೆ. ಸದ್ಯ ಕೈಗೊಂಡಿರುವ ಕಾಮಗಾರಿ ಆಮೆ ವೇಗದಲ್ಲಿ ಸಾಗಿದ್ದು, ಅದನ್ನು ಪೂಣಗೊಳಿಸದೆ ಮತ್ತೊಂದು ಬದಿ ಕಾಮಗಾರಿ ಪ್ರಾರಂಭಿಸಿರುವುದು ಸರಿಯಲ್ಲ. ಇದರಿಂದ ಎಲ್ಲರೂ ಸಮಸ್ಯೆ ಎದುರಿಸಬೇಕಾಗಿದೆ ಅಶ್ರಫ್ ಸಿದ್ದಾಪುರ ಚರಂಡಿ ನಿರ್ಮಾಣಕ್ಕೆಕ್ಕೆ ಗುಂಡಿ ತೋಡಿ 7 ತಿಂಗಳು ಕಳೆದಿದ್ದು, ಇಡೀ ವಾತಾವರಣವೇ ಧೂಳುಮಯವಾಗಿರುವುದರ ಜತೆಗೆ ಕೆಸರುಮಯ ರಸ್ತೆಯಾಗಿ ಮಾರ್ಪಟ್ಟಿದೆ. ಇದರಿಂದ ವಾಹನ ವಸಾರರು, ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. ಅಲ್ಲದೆ ಗ್ರಾಹಕರು ಅಂಗಡಿಗಳಿಗೆ ಬಾರದ ಕಾರಣ ಒಂದು ತಿಂಗಳಿನಿಂದ ಅಂಗಡಿ ತೆರೆದು ಸುಮ್ಮನೆ ಬಾಡಿಗೆ ಕಟ್ಟಿ ನಷ್ಟ ಅನುಭವಿಸುವಂತಾಗಿದೆ. ಆದಷ್ಟು ಬೇಗನೆ ಕಾಮಗಾರಿ ಪೂರ್ಣಗೊಳಿಸುವ ಮೂಲಕ ಅನುಕೂಲ ಕಲ್ಪಿಸಬೇಕು.
ಚಿತ್ರ 22ಎಸ್ ಡಿ ಪಿ 01:-