ಬಗರ್​ಹುಕುಂ ಹಕ್ಕುಪತ್ರ ವಿತರಣೆಗೆ ವಿಳಂಬ

2
ತುಮಕೂರು ತಾಲೂಕು ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಬಗರ್​ಹುಕುಂ ಸಮಿತಿ ಸಭೆಯಲ್ಲಿ ಶಾಸಕ ಬಿ.ಸುರೇಶ್​ಗೌಡ ಮಾತನಾಡಿದರು. ನಾಮನಿರ್ದೇಶಿತ ಸದಸ್ಯರಾದ ಕರೆರಂಗಯ್ಯ, ಶಿವರಾಜ್​, ರೂಪಾ ಇದ್ದರು.
Published on

ಸಕಾರಣವಿಲ್ಲದೆ 1500ಕ್ಕೂ ಹೆಚ್ಚು ಅರ್ಜಿಗಳು ವಜಾ - ತಹಸೀಲ್ದಾರ್​ ವಿರುದ್ಧ ಶಾಸಕ ಸುರೇಶ್​ಗೌಡ ಅಸಮಾಧಾನ

ತುಮಕೂರು: ತಾಲೂಕಿನಲ್ಲಿ ಬಗರ್​ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಗೆ ಸಲ್ಲಿಕೆಯಾಗಿದ್ದ 6,079 ಅರ್ಜಿಗಳ ಪೈಕಿ ವಿಲೇವಾರಿ ಮಾಡಲಾಗಿದ್ದ 1,230 ಅರ್ಜಿಗಳಿಗೆ ಹಕ್ಕುಪತ್ರ ನೀಡಲು ವಿಳಂಬ ಮಾಡಿರುವ ತಹಸೀಲ್ದಾರ್​ ವಿರುದ್ಧ ಸರ್ಕಾರಕ್ಕೆ ದೂರು ನೀಡುವುದಾಗಿ ಶಾಸಕ ಬಿ.ಸುರೇಶ್​ಗೌಡ ಎಚ್ಚರಿಸಿದರು.

ತಾಲೂಕು ಕಚೇರಿಯಲ್ಲಿ ಬುಧವಾರ ನಡೆದ ಬಗರ್​ಹುಕುಂ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 1994ರಿಂದ 2022ರವರೆಗೆ 1,230 ಅರ್ಜಿಗಳು ಸಕ್ರಮವಾಗಿದ್ದರೂ ಅರ್ಹರಿಗೆ ಸಾಗುವಳಿ ಚೀಟಿ ನೀಡದೆ ವಿಳಂಬ ಮಾಡಲಾಗಿದೆ ಎಂದು ಹರಿಹಾಯ್ದರು. ಕಳೆದ 8 ದಶಕಗಳಿಂದ ಉಳುಮೆ ಮಾಡಿಕೊಂಡು ಬಂದಿದ್ದರೂ ಯಾವುದೇ ಮಾಲೀಕತ್ವ ಇಲ್ಲದೆ ಸರ್ಕಾರಿ ಕಚೇರಿಗಳ ಸುತ್ತಲೂ ಅಲೆಯುವಂತಾಗಿದೆ. ನಿಗದಿತ ಕಾಲಮಿತಿಯಲ್ಲಿ ತಾವು ಸಾಗುವಳಿ ಚೀಟಿ ಹಂಚಿಕೆ ಮಾಡಿದ್ದಿದ್ದರೆ ನಗರದ ಸಮೀಪ 10 ಕಿಮೀ ಅಂತರದಲ್ಲಿರುವವರಿಗೆಲ್ಲ ಮಾಲಿಕತ್ವ ಸಿಗುತ್ತಿತ್ತು. ಇಂದು ಸಾಗುವಳಿ ಚೀಟಿಯೂ ಇಲ್ಲ ಭೂಮಿಯೂ ಇಲ್ಲ. ಇಂತಹ ಪರಿಸ್ಥಿತಿ ನಿಮಾರ್ಣವಾಗಲು ಕಂದಾಯ ನಿರೀಕ್ಷಕರೇ ಕಾರಣ ಎಂದು ಸುರೇಶ್​ಗೌಡ ದೂರಿದರು. ಸರ್ಕಾರಿ ಗೋಮಾಳದಲ್ಲಿ ಯಾವುದೇ ಅಧಿಸೂಚನೆ ಇಲ್ಲದೆ ಕೆಐಎಡಿಬಿಗೆ ಜಮೀನು ನೀಡಲು ತಕರಾರಿರುವುದಿಲ್ಲ, ಆದರೆ ರೈತನಿಗೆ ಕೃಷಿ ಜಮೀನು ನೀಡಲು ನೂರೆಂಟು ಕಾನೂನುಗಳನ್ನು ಹೇಳುತ್ತೀರಿ ಎಂದು ತಹಸೀಲ್ದಾರ್​ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಸುರೇಶ್​ಗೌಡ, ರೈತರು ಕೃಷಿ ಮಾಡಿರುವ ಬಗುರಹುಕುಂ ಸಾಗುವಳಿ ಸಮಿತಿಗೆ ಅರ್ಜಿ ಸಲ್ಲಿಸಿರುವ ಯಾವುದೇ ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದರು. ಈ ಹಿಂದೆ ವಿತರಣೆ ಮಾಡಿರುವ ಸಾಗುವಳಿ ಚೀಟಿಗಳಿಗೆ ಕೂಡಲೇ ದುರಸ್ತಿ ಮಾಡಿ ಹೊಸ ಸಂಖ್ಯೆ ನೀಡಲು ಕ್ರಮ ವಹಿಸುವಂತೆ ಸಹಾಯಕ ಭೂ ದಾಖಲೆಗಳ ನಿರ್ದೇಶಕರಿಗೆ ಸೂಚನೆ ನೀಡಿದರು. ಸರ್ಕಾರಿ ಜಮೀನಿನಲ್ಲಿ 20 -ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ಸಾಗುವಳಿದಾರರಿಗೆ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳಬೇಕು ಎಂದರು. ಅರಣ್ಯ ಭೂಮಿ ಅಲ್ಲದ ಜಮೀನಿನಲ್ಲಿ ಸಾಗುವಳಿ ಮಾಡಿರುವ ರೈತರಿಗೆ ಪಟ್ಟ, ಸಾಗುವಳಿ ನೀಡಬೇಕು. ಈ ಬಗ್ಗೆ ಅರಣ್ಯ ಇಲಾಖೆ ಜಾಗ ಎಂದು ವಾದ ಮಾಡುತ್ತಿರುವುದನ್ನು ಕೂಡಲೇ ಇತ್ಯರ್ಥಪಡಿಸುವಂತೆ ತಹಸೀಲ್ದಾರ್​ಗೆ ಸೂಚಿಸಿದರು. 1500ಕ್ಕೂ ಹೆಚ್ಚು ಅರ್ಜಿಗಳನ್ನು ವಜಾ ಕರಿಸಿರುವ ಬೆಳ್ಳಾವಿ ಕಂದಾಯ ನಿರೀಕ್ಷಕರ ವಿರುದ್ಧ ಶಿಸ್ತುಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದರು.

ರೈತರೋ, ಪರಮೇಶ್ವರನೋ ನೋಡೇ ಬಿಡೋಣ

ಹೇಮಾವತಿ ಎಕ್ಸ್​ಪ್ರೆಸ್​ ಲಿಂಕ್​ ಕೆನಾಲ್​ ಯೋಜನೆಗೆ ಜಿಲ್ಲೆಯಲ್ಲಿ ರೈತರ ವಿರೋಧವಿದ್ದು ಕಾಂಗ್ರೆಸ್​ ಸರ್ಕಾರಕ್ಕೆ ತಾಕತ್ತು ಇದ್ದರೆ ರಾಮನಗರಕ್ಕೆ ಹೇಮಾವತಿ ನೀರು ತಗೊಂಡು ಹೋಗಲಿ ಎಂದು ಬಿಜೆಪಿ ಶಾಸಕ ಬಿ.ಸುರೇಶ್​ಗೌಡ ಸವಾಲೆಸೆದರು. ಜಿಲ್ಲೆಯಲ್ಲಿ ನಾವೆಲ್ಲರೂ ಹೇಳಿದ್ದೇವೆ, ಕೆನಾಲ್​ ಆಗಬಾರದು ಎಂದು. ಇದನ್ನು ಮೀರಿ ತೆಗೆದುಕೊಂಡು ಹೋಗಲು ಯತ್ನಿಸಿದರೆ ರಕ್ತಪಾತವಾಗಲಿದೆ ಎಂದು ಎಚ್ಚರಿಸಿದರು. ಯಾವುದೇ ಅನಾಹುತ ಸಂಭವಿಸಿದರೂ ಅದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಪರಮೇಶ್ವರ ಹಾಗೂ ಜಿಲ್ಲೆಯ ಕಾಂಗ್ರೆಸ್​ ಶಾಸಕರೇ ಹೊಣೆಗಾರರಾಗಲಿದ್ದಾರೆ. ರಾಮನಗರ ಜಿಲ್ಲೆಗೆ ನೀರು ಕೊಡುವುದೇ ಆದರೆ ಮತ್ತೊಂದು ಯೋಜನೆಯನ್ನು ರೂಪಿಸಿ ನೀರು ಬಿಡಲಿ. ಆದರೆ, ಜಿಲ್ಲೆಯ ಪಾಲಿನ ನೀರು ಬಿಡಲು ನಾವ್ಯಾರೂ ತಯಾರಿಲ್ಲ ಎಂದರು. ನೀರಾವರಿ ವಿಷಯದಲ್ಲಿ ಗುಂಡಿಗೆ ಎದೆಯೊಡ್ಡಿ ನಾನು ರೈತರ ಪರವಾಗಿ ನಿಲ್ಲುತ್ತೇನೆ, ರಾಷ್ಟ್ರೀಯ ದಿನಾಚರಣೆಯಲ್ಲಿಯೂ ಇದನ್ನು ಉಲ್ಲೇಖಿಸುತ್ತಿರುವ ಪರಮೇಶ್ವರ ಜಿಲ್ಲೆಯ ರೈತರನ್ನು ಬಲಿಕೊಡಲು ಮುಂದಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಜಿಲ್ಲಾ ಉಸ್ತುವಾರಿ ಸಚಿವರು ಯಾವುದೇ ತಾಲೂಕು ಕಚೇರಿಗಳಿಗೆ ಭೇಟಿ ನೀಡುತ್ತಿಲ್ಲ. ಕೇವಲ ಅವರ ಕಾಲೇಜು ನೋಡಿಕೊಂಡು, ಸರ್ಕಾರಿ ಕಾರ್ಯಕ್ರಮದಲ್ಲಿ ಭಾಷಣ ಮಾಡಲು ಸೀಮಿತವಾಗಿದ್ದಾರೆ. ತಾಲೂಕು ಕಚೇರಿಗಳಲ್ಲಿ ಭ್ರಷ್ಟಾಚಾರ ಹೆಚ್ಚಾಗಿದ್ದು ಬಡಜನರಿಗೆ ಹಿಂಸೆ ನೀಡುತ್ತಿದ್ದಾರೆ. ಜಿಲ್ಲಾಡಳಿತ ಸತ್ತೇ ಹೋಗಿದ್ದು, ಏನೂ ಕೆಲಸಗಳಾಗುತ್ತಿಲ್ಲ. - ಬಿ.ಸುರೇಶ್​ಗೌಡ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net