ಆಯುರ್ವೇದ ವಿವಿ ಸ್ಥಾಪನೆಗೆ ವಿಳಂಬ: ಅರುಣ್ ಅಸಮಾಧಾನ

d s arun
ಡಿ.ಎಸ್.ಅರುಣ್, ವಿಧಾನ ಪರಿಷತ್ ಸದಸ್ಯ.
Published on

ಶಿವಮೊಗ್ಗ: ರಾಜ್ಯ ಸರ್ಕಾರ ಶಿವಮೊಗ್ಗ ಜಿಲ್ಲೆಯಲ್ಲಿ ಆಯುರ್ವೇದ ವಿಶ್ವವಿದ್ಯಾಲಯ ಸ್ಥಾಪನೆ ಮಾಡಲು ವಿಳಂಬ ಮಾಡುತ್ತಿದೆ. 14 ವರ್ಷಗಳ ಹಿಂದೆಯೇ ವಿಶ್ವವಿದ್ಯಾಲಯ ಮಂಜೂರಾದರೂ ಅದರ ಸ್ಥಾಪನೆ ಸಂಬಂಧ ಕ್ರಮ ಕೈಗೊಂಡಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಳಗಾವಿಯಲ್ಲಿ ಆರಂಭವಾದ ಚಳಿಗಾಲದ ಅಧಿವೇಶನದ ಮೊದಲ ದಿನವಾದ ಸೋಮವಾರ ಪ್ರಶ್ನೋತ್ತರ ವೇಳೆಯಲ್ಲಿ ಮಾತನಾಡಿದ ಅವರು, ಮಾಜಿ ಸಭಾಪತಿ ಡಿ.ಎಚ್.ಶಂಕರಮೂರ್ತಿ ಅವರ ಪ್ರಯತ್ನದ ಫಲವಾಗಿ 2010ರಲ್ಲೇ ಶಿವಮೊಗ್ಗಕ್ಕೆ ಆಯುರ್ವೇದ ವಿಶ್ವವಿದ್ಯಾಲಯ ಮಂಜೂರಾಗಿತ್ತು ಎಂದರು.

2011ರಲ್ಲಿ ಅಂದಿನ ಸಿಎಂ ಬಿ.ಎಸ್.ಯಡಿಯೂರಪ್ಪ, ಆಯುರ್ವೇದ ವಿವಿಗೆಂದು ಸೋಗಾನೆಯಲ್ಲಿ 100 ಎಕರೆ ಜಮೀನು ಮಂಜೂರು ಮಾಡಿದ್ದರು. ಈಗ 100 ಎಕರೆ ಪೈಕಿ 8 ಎಕರೆ ಮಾತ್ರ ಉಳಿದುಕೊಂಡಿದೆ. ವಿವಿ ನಿರ್ಮಾಣಕ್ಕೆ ಸಂಬಂಧಿಸಿದ ಯಾವುದೇ ಚಟುವಟಿಕೆ ಆರಂಭಗೊಂಡಿಲ್ಲ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ದೇಶದ 10 ಉನ್ನತ ಆಯುರ್ವೇದ ಕಾಲೇಜುಗಳ ಪೈಕಿ ಕರ್ನಾಟಕದಲ್ಲೇ ಮೂರು ಕಾಲೇಜುಗಳಿವೆ. ಆದರೆ ಇತ್ತೀಚೆಗೆ ಉಪನ್ಯಾಸಕರ ನೇಮಕಾತಿ ಆಗುತಿಲ್ಲ. ಶಿವಮೊಗ್ಗ ಆಯುರ್ವೇದ ಕಾಲೇಜಿನಲ್ಲಿ ಉಪನ್ಯಾಸಕರ ಕೊರತೆಯಿಂದ 60 ವಿದ್ಯಾರ್ಥಿಗಳ ಪ್ರವೇಶಕ್ಕಿದ್ದ ಅವಕಾಶ 32 ಸೀಟುಗಳಿಗೆ ಕುಸಿದಿದೆ. ಈ ಕಾಲೇಜುಗಳನ್ನು ವಿವಿ ವ್ಯಾಪ್ತಿಗೆ ತರುವುದರಿಂದ ಈ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದು ಅಭಿಪ್ರಾಯಪಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net