

ಕರಿಯಪ್ಪ ಅರಳಿಕಟ್ಟಿ ರಾಣೆಬೆನ್ನೂರ
ಸಾಮಾನ್ಯವಾಗಿ ಎರಡು ತಿಂಗಳು ಮನೆಯ ವಿದ್ಯುತ್ ಬಿಲ್ ಕಟ್ಟಿಲ್ಲವೆಂದರೆ ಕನೆಕ್ಷನ್ ಕಟ್ ಮಾಡುವ ಹೆಸ್ಕಾಂ ಅಧಿಕಾರಿಗಳು ಸರ್ಕಾರಿ ಇಲಾಖೆಗಳ ವಿಚಾರದಲ್ಲಿ ಮಾತ್ರ ನಿಯಮ ಪಾಲಿಸುತ್ತಿಲ್ಲ. ಇದಕ್ಕೆ ರಾಣೆಬೆನ್ನೂರ ವಿಭಾಗೀಯ ಸರ್ಕಾರಿ ಕಚೇರಿಗಳಿಂದ 3.50 ಕೋಟಿ ರೂ. ವಿದ್ಯುತ್ ಬಾಕಿ ಉಳಿಸಿಕೊಂಡಿರುವುದೇ ಸಾಕ್ಷಿಯಾಗಿದೆ.
ರಾಜ್ಯ ಸರ್ಕಾರದ ಗೃಹಜ್ಯೋತಿ ಯೋಜನೆ ಲಾಭ ಪಡೆಯಬೇಕಾದರೆ ಗ್ರಾಹಕರು ಹಿಂದಿನ ಬಾಕಿ ಚುಕ್ತಾ ಮಾಡಬೇಕೆಂದು ಆದೇಶಿಸಿದೆ. ಈ ಯೋಜನೆ ಜಾರಿಗೂ ಮೊದಲು ಗ್ರಾಹಕರು ವಿದ್ಯುತ್ ಬಿಲ್ ಅನ್ನು ಎರಡು ತಿಂಗಳಿಗಿಂತ ಹೆಚ್ಚಾಗಿ ಬಾಕಿ ಉಳಿಸಿಕೊಳ್ಳಲು ಅವಕಾಶ ಇರಲಿಲ್ಲ.
ಕಳೆದ ನಾಲ್ಕೈದು ವರ್ಷಗಳಿಂದ ಸರ್ಕಾರಿ ಕಚೇರಿಗಳು ಪ್ರತಿ ತಿಂಗಳು ಸರಿಯಾಗಿ ಬಿಲ್ ಪಾವತಿಸುತ್ತಿಲ್ಲ. ಇದರಲ್ಲಿ ಸ್ಥಳೀಯ ಸಂಸ್ಥೆಗಳ ಕಚೇರಿಗಳು ಅಲ್ಲದೆ, ಕಂದಾಯ ಇಲಾಖೆ, ಅರಣ್ಯ ಮತ್ತು ಪರಿಸರ ಇಲಾಖೆ, ಶಿಕ್ಷಣ ಇಲಾಖೆ, ಸಣ್ಣ ನೀರಾವರಿ ಸೇರಿ ವಿವಿಧ ಇಲಾಖೆಗಳಿಂದ ವಿದ್ಯುತ್ ಬಿಲ್ ಬಾಕಿ ಇದೆ. ಇಲಾಖೆಗಳಲ್ಲಿ ಶೇ. 60ರಷ್ಟು ಹಣ ವಿದ್ಯುತ್ ಬಿಲ್‌ಗಾಗಿ ಮೀಸಲಿದ್ದರೂ, ಸರ್ಕಾರಿ ಕಚೇರಿಗಳ ನಿರ್ಲಕ್ಷೃದಿಂದ ಲಕ್ಷಗಟ್ಟಲೆ ವಿದ್ಯುತ್ ಬಿಲ್ ಬಾಕಿ ಉಳಿದಿದೆ. ಇದು ಹೆೆಸ್ಕಾಂ ಅಧಿಕಾರಿಗಳಿಗೂ ತಲೆನೋವಾಗಿದೆ.
ಹೆಸ್ಕಾಂನ ರಾಣೆಬೆನ್ನೂರ ವಿಭಾಗ ವ್ಯಾಪ್ತಿಗೆ ರಾಣೆಬೆನ್ನೂರ, ಹಿರೇಕೆರೂರ, ರಟ್ಟಿಹಳ್ಳಿ ಹಾಗೂ ಬ್ಯಾಡಗಿ ತಾಲೂಕುಗಳು ಒಳಪಡುತ್ತವೆ. ಈ ನಾಲ್ಕೂ ತಾಲೂಕಿನ ಸರ್ಕಾರಿ ಕಚೇರಿಗಳಿಂದ ಒಟ್ಟು 3,50,48,514 ರೂ. ವಿದ್ಯುತ್ ಬಿಲ್ ಬಾಕಿಯಿದೆ. ಇದರಲ್ಲಿ ಮುಖ್ಯವಾಗಿ ಸಣ್ಣ ನೀರಾವರಿ ಇಲಾಖೆಯವರೇ ಬರೋಬ್ಬರಿ 3.45 ಕೋಟಿ ರೂ. ಬಾಕಿ ಉಳಿಸಿಕೊಂಡಿರುವುದು ವಿಶೇಷವಾಗಿದೆ.
ಇವರೊಂದಿಗೆ ನಗರಾಭಿವೃದ್ಧಿ ಕಚೇರಿಗಳು 53,381 ರೂ., ಗೃಹ ಇಲಾಖೆ ಕಚೇರಿಗಳು 43,202 ರೂ., ಶಿಕ್ಷಣ ಇಲಾಖೆ ಕಚೇರಿಗಳು 31,565 ರೂ., ಅರಣ್ಯ ಮತ್ತು ಪರಿಸರ ಇಲಾಖೆ ಕಚೇರಿಗಳಿಂದ 94,562 ರೂ., ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಚೇರಿಗಳು 42,043 ರೂ., ಆರೋಗ್ಯ ಇಲಾಖೆ ಕಚೇರಿಗಳು 19,421 ರೂ. ಹಾಗೂ ಬಿಎಸ್‌ಎನ್‌ಎಲ್ ಕಚೇರಿಗಳು 22,461 ರೂ. ಸೇರಿ ಕೃಷಿ, ಯುವ ಸಬಲೀಕರಣ ಮತ್ತು ಕ್ರೀಡಾ, ಲೋಕೋಪಯೋಗಿ ಇಲಾಖೆಯವರಿಂದ ವಿದ್ಯುತ್ ಬಿಲ್ ಬಾಕಿ ವಸೂಲಿ ಆಗಬೇಕಾಗಿದೆ.
ಸರ್ಕಾರಿ ಕಚೇರಿಗಳಿಗೆ ಒತ್ತಡ ತಂದು ವಿದ್ಯುತ್ ಬಿಲ್ ಪಾವತಿಸಿಕೊಳ್ಳುತ್ತಿದ್ದೇವೆ. ಕಚೇರಿಗಳ ವಿದ್ಯುತ್ ಸಂಪರ್ಕ ಕಡಿತಮಾಡಿದರೆ ಜನರ ಮೇಲೆ ಪರಿಣಾಮ ಬೀರುತ್ತದೆ ಎಂಬುದು ಹೆಸ್ಕಾಂ ಅಧಿಕಾರಿಗಳ ಅಭಿಪ್ರಾಯವಾಗಿದೆ. ಆದರೆ, ಸಾಮಾನ್ಯ ಜನರಿಂದ ಮೀಟರ್ ಕನೆಕ್ಷನ್ ತೆಗೆದುಕೊಳ್ಳುವಾಗಲೇ ಎರಡು ತಿಂಗಳ ಠೇವಣಿ ಕಟ್ಟಿಸಿಕೊಂಡಿರುತ್ತಾರೆ. ಎರಡು ತಿಂಗಳು ಕಟ್ಟದಿದ್ದರೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುತ್ತದೆ. ಮನೆಯಲ್ಲಿ ವಾಸ ಇದ್ದರೆ ಒತ್ತಡ ಹಾಕುತ್ತಾರೆ. ಮನೆಯಲ್ಲಿ ಯಾರೂ ಇಲ್ಲದಿದ್ದರೆ, ಒತ್ತಡ ತಂದರೂ ಬಿಲ್ ಪಾವತಿಸದಿದ್ದರೆ ಮೀಟರ್ ತೆಗೆದು ಹಾಕುತ್ತಾರೆ. ಆದರೆ, ಸರ್ಕಾರಿ ಕಚೇರಿಯವರು ಮಾತ್ರ ಸಾವಿರ, ಲಕ್ಷ ರೂ. ಲೆಕ್ಕದಲ್ಲಿ ಬಾಕಿ ಉಳಿಸಿಕೊಂಡರೂ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿದೆ.
ಕೆಲ ಸರ್ಕಾರಿ ಕಚೇರಿಗಳು ವಿದ್ಯುತ್ ಬಿಲ್ ಸರಿಯಾಗಿ ಪಾವತಿಸುತ್ತಿದ್ದಾರೆ. ಪಾವತಿಸದವರಿಗೆ ನೋಟಿಸ್ ನೀಡಿದ್ದೇವೆ. ಸಣ್ಣ ನೀರಾವರಿ ಇಲಾಖೆಯವರು ಈ ಬಾರಿ ವಿದ್ಯುತ್ ಪರವಾನಗಿ ಕೇಳಲು ಬಂದಾಗ ಬಿಲ್ ತುಂಬಿದ ಮೇಲೆಯೇ ಮಾಡಿಕೊಡುತ್ತೇವೆ ಎಂದು ಸೂಚಿಸಲಾಗಿದೆ.ಎನ್. ಬೆಳಕೇರಿ, ಎಇ, ಹೆಸ್ಕಾಂ ರಾಣೆಬೆನ್ನೂರ ವಿಭಾಗ