ಅರ್ಜಿ ವಿಲೇವಾರಿ ವಿಳಂಬ ಸಹಿಸಲ್ಲ

3
Published on

ತಾಲೂಕುಮಟ್ಟದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಶುಭಕಲ್ಯಾಣ್​ ಎಚ್ಚರಿಕೆ

ವಿಜಯವಾಣಿ ಸುದ್ದಿಜಾಲ ತುಮಕೂರು
ಕಂದಾಯ ಇಲಾಖೆ ವ್ಯಾಪ್ತಿಗೆ ಬರುವ ಸಾಗುವಳಿ ಚೀಟಿ, ಬಗರ್​ ಹುಕುಂ, ಆಧಾರ್​ ಸೀಡಿಂಗ್​, ಪಿಂಚಣಿ, ಸೇರಿದಂತೆ ವಿವಿಧ ಸೌಲಭ್ಯಕ್ಕಾಗಿ ಸಾರ್ವಜನಿಕರು ಸಲ್ಲಿಸಿರುವ ಅರ್ಜಿಗಳನ್ನು ಶೀಘ್ರವಾಗಿ ವಿಲೇವಾರಿ ಮಾಡುವಂತೆ ಜಿಲ್ಲಾಧಿಕಾರಿ ಶುಭಕಲ್ಯಾಣ್​ ತಾಕೀತು ಮಾಡಿದರು.
ಜಿಲ್ಲಾಧಿಕಾರಿ ಕಚೇರಿ ಕೇಸ್ವಾನ್​ ಸಭಾಂಗಣದಲ್ಲಿ ವಿಡಿಯೋ ಕಾನ್ಫರೆನ್ಸ್​ ಮೂಲಕ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸೋಮವಾರ ಸಭೆ ನಡೆಸಿ, ಜಿಲ್ಲೆಯಲ್ಲಿ ಜನಸ್ನೇಹಿ ಆಡಳಿತವನ್ನು ಬಲ ಪಡಿಸುವ ನಿಟ್ಟಿನಲ್ಲಿ ಸಾರ್ವಜನಿಕರಿಂದ ಸ್ವೀಕೃತವಾದ ಅರ್ಜಿಗಳನ್ನು ವಿಳಂಬ ಮಾಡದೆ ನಿಗದಿತ ಅವಧಿಯೊಳಗೆ ವಿಲೇವಾರಿ ಮಾಡುವಂತೆ ಖಡಕ್​ ಸೂಚನೆ ನೀಡಿದರು.


ಜಿಲ್ಲೆಯು ಆಧಾರ್​ ಸೀಡಿಂಗ್​ನಲ್ಲಿ ಶೇಕಡಾ 85.9 ಗುರಿ ಸಾಧಿಸಿದ್ದು, ಬಾಕಿ ಇರುವ ಆಧಾರ್​ ಸೀಡಿಂಗ್​ ಅರ್ಜಿಗಳನ್ನು ವಿಲೇವಾರಿ ಮಾಡಬೇಕು. ಬಗರ್​ ಹುಕುಂ ಸಂಬಂಧಿಸಿದಂತೆ 496, ಸಕಾಲಕ್ಕೆ ಸಂಬಂಧಿಸಿದಂತೆ 281, ಪಿಂಚಣಿ 1284, ಆರ್​ಟಿಸಿ ತಿದ್ದುಪಡಿ 2932 ಅರ್ಜಿಗಳು ಬಾಕಿ ಇದ್ದು ಕಾನೂನು ತೊಡಕಿಲ್ಲದ ಅರ್ಜಿಗಳನ್ನು ವಿಳಂಬ ಮಾಡದೆ ವಿಲೇವಾರಿ ಮಾಡುವಂತೆ ತಿಳಿಸಿದರು.


ಸಾಗುವಳಿ ಮಾಡುತ್ತಿರುವ ದುರಸ್ತಿಯಾಗದ ಸರ್ಕಾರಿ ಭೂಮಿ(ನಮೂನೆ 1-5)ಗೆ ಸಂಬಂಧಿಸಿದಂತೆ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪ್ರತಿ ದಿನ ಸುಮಾರು 10 ಗ್ರಾಮಗಳ ಸರ್ವೇ ಕಾರ್ಯ ಕೈಗೊಳ್ಳಬೇಕು. ಉಪವಿಭಾಗಾಧಿಕಾರಿಗಳ ಸಿಬ್ಬಂದಿ ವರ್ಗ ಗ್ರಾಮವಾರು, ಹೋಬಳಿವಾರು ಭೇಟಿ ನೀಡಿ ಪರಿಶೀಲಿಸಿ, ವರದಿ ಸಲ್ಲಿಸಬೇಕು ಎಂದು ನಿರ್ದೇಶನ ನೀಡಿದರು.


ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಎನ್​.ತಿಪ್ಪೇಸ್ವಾಮಿ, ಉಪವಿಭಾಗಾಧಿಕಾರಿ ಗೌರವ್​ ಕುಮಾರ್​ ಶೆಟ್ಟಿ, ಚುನಾವಣೆ ತಹಸೀಲ್ದಾರ್​ ರೇಷ್ಮಾ, ತಹಶೀಲ್ದಾರ್​ಗಳಾದ ರಾಜೇಶ್ವರಿ, ವರದರಾಜು, ಜಿಲ್ಲಾ ಹಾಗೂ ತಾಲೂಕುಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಪಿಂಚಣಿ ಅದಾಲತ್​ ಆಂದೋಲನ: ಮುಂದಿನ ವಾರದಿಂದ ಜಿಲ್ಲೆಯ ಪ್ರತಿ ಗ್ರಾಪಂನಲ್ಲಿ ಪಿಂಚಣಿ ಅದಾಲತ್​ ಆಂದೋಲನ ಹಮ್ಮಿಕೊಳ್ಳಬೇಕು. ಅದಾಲತ್​ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಆಟೋ ಪ್ರಚಾರಕ್ಕೆ ಕ್ರಮ ಕೈಗೊಳ್ಳಬೇಕು. ಗ್ರಾಪಂ ಪ್ರತಿ ಮನೆಗೂ ಭೇಟಿ ನೀಡಿ ಪಿಂಚಣಿ ಸೌಲಭ್ಯದಿಂದ ವಂಚಿತರಾದ ಫಲಾನುಭವಿಗಳಿದ್ದಲ್ಲಿ ಪತ್ತೆ ಹಚ್ಚಿ ಅರ್ಹ ಫಲಾನುಭವಿಗಳಿಗೆ ಸೌಲಭ್ಯ ಒದಗಿಸುವಂತೆ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net