

ಚಿಕ್ಕಬಳ್ಳಾಪುರ: ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ನೇತೃತ್ವದಲ್ಲಿ ಕೈಗೊಂಡಿದ್ದ ಸಭೆಯಲ್ಲಿ ಕೆರೆಗಳಿಗೆ ಹರಿಸುವ ವಿಚಾರದಲ್ಲಿ ವಿಳಂಬ ಕೆಲಸಕ್ಕೆ ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಎಚ್.ಎನ್.ವ್ಯಾಲಿ ಯೋಜನೆಯಡಿ ತ್ಯಾಜ್ಯ ಸಂಸ್ಕರಿದ ನೀರನ್ನು ಸಮರ್ಪಕವಾಗಿ ಕೆರೆಗಳಿಗೆ ಹರಿಸುತ್ತಿಲ್ಲ. ಎತ್ತಿನಹೊಳೆ ಯೋಜನೆಯ ಕಾಮಗಾರಿಗಳು ನಿಧಾನಗತಿಯಲ್ಲಿ ಸಾಗುತ್ತಿವೆ. ಅಂರ್ತಜಲ ಮಟ್ಟ ಕುಸಿತದಿಂದ ತೊಂದರೆ ಅನುಭವಿಸುತ್ತಿರುವ ಈ ಭಾಗದಲ್ಲಿ ಸಮಗ್ರ ನೀರಾವರಿ ಯೋಜನೆಗಳ ಜಾರಿ ವಿಚಾರದಲ್ಲಿ ನಿಧಾನಗತಿಯ ಧೋರಣೆ ಅನುಸರಿಸಲಾಗುತ್ತಿದೆ ಎಂದು ಬೇಸರಿಸಿದ್ದಾರೆ.
ಬಯಲು ಸೀಮೆ ಭಾಗದಲ್ಲಿ ನಿರಂತರವಾಗಿ ನಾನಾ ರೀತಿಯ ಹೋರಾಟಗಳನ್ನು ನಡೆಸುತ್ತ ನೀರಾವರಿ ಸೌಲಭ್ಯಕ್ಕಾಗಿ ಆಗ್ರಹಿಸಲಾಗುತ್ತಿದೆ. ಇದಕ್ಕೆ ಸರ್ಕಾರವು ತ್ಯಾಜ್ಯ ಸಂಸ್ಕರಿಸಿದ ನೀರಾವರಿ ಯೋಜನೆ, ಎತ್ತಿನಹೊಳೆ ಯೋಜನೆ ಸೇರಿದಂತೆ ವಿವಿಧ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದು ಇದಕ್ಕೆ ಸ್ಥಳೀಯ ಅಧಿಕಾರಿಗಳು ಸಹ ಸಮರ್ಪಕವಾಗಿ ಸ್ಪಂದಿಸಿ ಈ ಭಾಗದ ಸಮಸ್ಯೆಗಳನ್ನು ಬಗೆಹರಿಸಬೇಕು. ಆದರೆ, ಚರ್ಚೆಯ ಹಂತದಲ್ಲಿಯೇ ಕಾಲಕರಣ ಮಾಡಲಾಗುತ್ತಿದೆ ಎಂದು ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಭಕ್ತರಹಳ್ಳಿ ಭೈರೇಗೌಡ ಅಸಮಾಧಾನ ವ್ಯಕ್ತಪಡಿಸಿದರು. ಜತೆಗೆ ಜಿಲ್ಲೆಗೆ ಎಚ್.ಎನ್.ವ್ಯಾಲಿ ಯೋಜನೆಯ ನೀರು ಸಮರ್ಪಕವಾಗಿ ಹರಿಯುತ್ತಿಲ್ಲ. ಹೀಗೆ ನಿರ್ಲಕ್ಷ್ಯ ಮುಂದುವರೆಸಿದರೆ ಪ್ರತಿಭಟನೆಗಳ ಜತೆಗೆ ಕಾನೂನು ರೀತಿ ಹೋರಾಟ ನಡೆಸಬೇಕಾಗುತ್ತದೆ ಎಂದು ರೈತ ಸಂಘದ ಎಚ್ಚರಿಕೆ ನೀಡಿದರು.
ಜಿಲ್ಲೆಯ ಸಾಕಷ್ಟು ಭಾಗಗಳಲ್ಲಿ ನೀರು ಹರಿಯುವ ಕಾಲುವೆಗಳು ಸಮರ್ಪಕವಾಗಿಲ್ಲ. ಕೆರೆಯಿಂದ ಕೆರೆಗೆ ಹಾದು ಹೋಗುವ ರಸ್ತೆಗಳ ಮಾರ್ಗ ಮಧ್ಯದಲ್ಲಿನ ಮೋರಿಗಳು ದುಸ್ಥಿತಿಯಲ್ಲಿವೆ. ಇವುಗಳನ್ನು ಬೇಗ ಸರಿಪಡಿಸಬೇಕಾಗಿದೆ ಎಂದು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ರೈತರು ಗಮನ ಸೆಳೆದಿರುವ ಸಮಸ್ಯೆಗಳನ್ನು ಇಲಾಖೆಯ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ, ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು. ತ್ವರಿತವಾಗಿ ಕಾಮಗಾರಿಗಳನ್ನು ಮುಗಿಸಬೇಕು ಎಂದು ಸೂಚಿಸಿದರು. ಎಚ್.ಎನ್ ವ್ಯಾಲಿ ಮತ್ತು ಎತ್ತಿನಹೊಳೆ ನೀರಾವರಿ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಸುಧೀರ್ಘವಾಗಿ ಚರ್ಚಿಸಲಾಯಿತು.
ಸಭೆಯಲ್ಲಿ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ವೀರಾಪುರ ಮುನಿ ನಂಜಪ್ಪ, ಜಂಟಿ ಕಾರ್ಯದರ್ಶಿ ಕುಪ್ಪಳ್ಳಿ ಶ್ರೀನಿವಾಸ್, ತಾಲೂಕು ಅಧ್ಯಕ್ಷರಾದ ಮರಳಕುಂಟೆ ರಾಮಾಂಜನಪ್ಪ, ತಾದೂರು ಮಂಜುನಾಥ್, ಕಾರ್ಯದರ್ಶಿ ನೆಲಮಾಕಲಳ್ಳಿ ಗೋಪಾಲ್, ಪದಾಧಿಕಾರಿಗಳಾದ ತಾಂಡ್ರ ಮರದಹಳ್ಳಿ ಮಹೇಶ್, ಗುಡಿಹಳ್ಳಿ ಕೆಂಪಣ್ಣ, ನಾಗರಾಜು, ಅಶ್ವತಪ್ಪ, ನಾರಾಯಣಸ್ವಾಮಿ ಕೃಷ್ಣಪ್ಪ, ಸತೀಶ್, ಶ್ರೀರಾಮು ಮತ್ತಿತರರು ಇದ್ದರು.