

ನೆಲಮಂಗಲ: ಜನಸಾಮಾನ್ಯರಲ್ಲಿ ಧಾರ್ಮಿಕ ಪ್ರಜ್ಞೆ ಬೆಳೆಸುವಲ್ಲಿ ದೇವಾಲಯ ಮಹತ್ವದ ಪಾತ್ರವಹಿಸಲಿವೆ ಎಂದು ಪವಾಡ ಬಸವಣ್ಣ ದೇವರಮಠದ ಶ್ರೀ ಸಿದ್ಧಲಿಂಗಸ್ವಾಮೀಜಿ ತಿಳಿಸಿದರು.
ಬೆಂಗಳೂರು ಉತ್ತರ ತಾಲೂಕು ಹಾರೋಕೇತನಹಳ್ಳಿಯಲ್ಲಿ ಗುರುವಾರ ಶ್ರೀ ಬಸವೇಶ್ವರ ದೇವಾಲಯದ ವಿಮಾನಗೋಪುರದ ಕಳಶ ಸ್ಥಾಪನೆ, ಕುಂಭಾಭಿಷೇಕ, ಮಾರಮ್ಮ ಪಳೇಕಮ್ಮ ದೇವರ ನೂತನ ಮೂರ್ತಿಗಳ ಪ್ರತಿಷ್ಠಾಪನೆ ಹಾಗೂ ಸಿದ್ಧಗಂಗಾಶ್ರೀಗಳ ಪುಣ್ಯಸ್ಮರಣೆಯಲ್ಲಿ ಮಾತನಾಡಿದರು.
ಭಾರತೀಯರಲ್ಲಿ ದೇವತಾರಾಧನೆಯಲ್ಲಿ ವಿಶೇಷ ನಂಬಿಕೆ ಆಸಕ್ತಿ ಹೆಚ್ಚು. ದೇವರ ಆರಾಧನೆ ಮಾಡಿದರೆ ಶಾಂತಿ, ಸಮಾಧಾನ ದೊರೆಯಲಿದೆ. ಗ್ರಾಮದ ಎಲ್ಲ ವರ್ಗದವರನ್ನು ಒಗ್ಗೂಡಿಸಿ ಪರಸ್ಪರ ಪ್ರೀತಿವಿಶ್ವಾಸ ಭಾವನೆ ದೇಗುಲಗಳಿಂದ ಬೆಳೆಯಲಿದೆ ಎಂದರು.
ಸಿದ್ಧಗಂಗಾ ಶ್ರೀಗಳ ಬಗ್ಗೆ ಅಪಾರ ಗೌರವ, ಭಕ್ತಿ ಇಟ್ಟುಕೊಂಡಿದ್ದ ಗ್ರಾಮದ ಜನತೆ ಧಾರ್ಮಿಕ ಕಾರ್ಯಕ್ರಮದ ಹೆಸರಿನಲ್ಲಿ ಮಾನವ ಸೇವೆಯನ್ನೇ ಗುರಿಯಾಗಿಸಿಕೊಂಡಿದ್ದ ಸಿದ್ಧಗಂಗಾಶ್ರೀಗಳ ಪುಣ್ಯಸ್ಮರಣೆ ಆಯೋಜಿಸಿರುವುದು ಅರ್ಥಪೂರ್ಣವಾಗಿದೆ ಎಂದರು.
ಓದಿನ ಜತೆಗೆ ಮಕ್ಕಳಿಗೆ ಧರ್ಮ, ಸಂಸ್ಕೃತಿ ಹಾಗೂ ದೇವರ ಆರಾಧನೆಯ ಹಿಂದಿರುವ ಮಹತ್ವದ ವಿಚಾರಗಳ ಮನವರಿಕೆ ಮಾಡಿಕೊಡಬೇಕಿದೆ. ದೇವರಿಗೆ ಕಾಣಿಕೆ ನೀಡಿದರೆ ಸಾಲದು, ಭಕ್ತಿ ಮತ್ತು ಸೇವೆ ಮಾಡಬೇಕಿದೆ ಎಂದರು.
ಕಂಚುಗಲ್ ಬಂಡೇಮಠದ ಶ್ರೀ ಬಸವಲಿಂಗಸ್ವಾಮೀಜಿ ಮಾತನಾಡಿ, ದೇವಾಲಯ ನಿರ್ಮಿಸುವದಷ್ಟೇ ಅಲ್ಲ, ಅದರ ನಿರ್ವಹಣೆಯ ಜವಾಬ್ದಾರಿಯನ್ನು ಎಲ್ಲ ಗ್ರಾಮಸ್ಥರು ತಗೆದುಕೊಳ್ಳಬೇಕು. ಧಾರ್ಮಿಕ, ಜಾತ್ರಾ ಮಹೋತ್ಸವಗಳ ಭಾವನಾತ್ಮಕತೆ ಇರಲಿ. ರಾಜಕೀಯಕ್ಕೆ ಅವಕಾಶ ಮಾಡಿಕೊಡಬಾರದು ಎಂದರು.
ಇದೇ ವೇಳೆ ತುಮಕೂರು ಸಿದ್ಧಗಂಗಾ ಮಠದ ಲಿಂಗೈಕ್ಯ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಅವರ ಪುಣ್ಯಸ್ಮರಣೆ ಆಯೋಜಿಸಲಾಗಿತ್ತು. ಭಕ್ತರು ಶ್ರೀಗಳ ಭಾವಚಿತ್ರಕ್ಕೆ ಪುಷ್ಪನಮನ ಅರ್ಪಿಸಿದರು.
ಗದ್ದುಗೆಮಠದ ಶ್ರೀ ಮಹಾಂತಸ್ವಾಮೀಜಿ ದಿವ್ಯಸಾನ್ನಿಧ್ಯವಹಿಸಿದ್ದರು. ಗುರುವಣ್ಣದೇವರಮಠ ಶ್ರೀನಂಜುಂಡಸ್ವಾಮೀಜಿ, ವಿಧಾನಪರಿಷತ್ ಮಾಜಿ ಸದಸ್ಯ ಇ.ಕೃಷ್ಣಪ್ಪ, ನಗರ ಜಿಲ್ಲಾಪಂಚಾಯಿತಿ ಸದಸ್ಯ ಮರಿಸ್ವಾಮಿ, ಮಾಜಿ ಶಾಸಕ ಮುನಿರಾಜು, ಅರಿಶಿನಕುಂಟೆ ಗ್ರಾಪಂ ಅಧ್ಯಕ್ಷ ಲಕ್ಷ್ಮೀನಾರಾಯಣ್, ನೆ.ಯೋ.ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಿ.ಎಂ.ಎಂ.ಪ್ರಕಾಶ್, ಅಡಕಿಮಾರನಹಳ್ಳಿ ಗ್ರಾಪಂ ಅಧ್ಯಕ್ಷೆ ಹೇಮಲತಾ, ಸದಸ್ಯರಾದ ಗಂಗರಾಜು, ಶಂಕರಪ್ಪ, ಶೋಭಾಪ್ರಕಾಶ್, ಅನಿತಾನಾಗೇಶ್,ಗಿರಿಗೌಡ, ಮುಖಂಡ ಶಿವಕುಮಾರ್, ಎಚ್.ಕೆ.ಜಗದೀಶ್, ಗೋವಿಂದರಾಜು, ಪ್ರಕಾಶ್, ಪರಮೇಶ್, ಸಿದ್ದಲಿಂಗಪ್ಪ, ಕುಮಾರಸ್ವಾಮಿ ಮತ್ತಿತರರು ಇದ್ದರು.
ನೂತನ ಮೂರ್ತಿ ಪ್ರತಿಷ್ಠಾಪನೆ: 35 ವರ್ಷಗಳ ಹಿಂದೆ ಗ್ರಾಮದಲ್ಲಿ ಭಿನ್ನಗೊಂಡಿದ್ದ ಮಾರಮ್ಮ ದೇಗುಲದಲ್ಲಿನ ಸ್ಥಿರ, ಚರಮೂರ್ತಿ ಹಾಗೂ ಪಳೇಕಮ್ಮ ದೇವಿಯ ನೂತನ ಚರಮೂರ್ತಿ ಪ್ರತಿಷ್ಠಾಪಿಸಿಲಾಯಿತು. ಕಳಶ ಪೂಜೆ, ವೇದಪಾರಾಯಣ, ಪ್ರಾಣಪ್ರತಿಷ್ಠಾಪನೆ, ಗಣಹೋಮ, ನವಗ್ರಹಸಹಿತ ಮೃತ್ಯುಂಜಯ ಹೋಮ, ದುರ್ಗಾಹೋಮ, ಪೂರ್ಣಾಹುತಿ, ಕುಂಭಗಳೊಂದಿಗೆ ಆಲಯ ಪ್ರದಕ್ಷಿಣೆ, ಶ್ರೀ ಬಸವೇಶ್ವರ ಸ್ವಾಮಿ, ತಿಮ್ಮರಾಯಸ್ವಾಮಿ, ಮಾರಮ್ಮದೇವಿ ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ ಮಾಡಿ ಮಹಾಮಂಗಳಾರತಿ ನೆರವೇರಿಸಲಾಯಿತು.