ಬೇಡಿದ ವರ ನೀಡುವ ದೈವ

3 gkp 01
Published on

ಸಣ್ಣುವಂಡ ಕಿಶೋರ್ ನಾಚಪ್ಪ ಗೋಣಿಕೊಪ್ಪ


ಬೇಡಿದ ಭಕ್ತರಿಗೆ ವರವ ನೀಡುವ ದೇವ ಎಂಬ ನಂಬಿಕೆ ಕುಟ್ಟಂದಿ ಗ್ರಾಮದಲ್ಲಿರುವ ಕುಂದಚಪ್ಪ ಈಶ್ವರ ಭಕ್ತರಲ್ಲಿದೆ.


ವಿಶೇಷ ನೆಲೆ, ಆಚರಣೆ ಮೂಲಕ ಭಕ್ತರನ್ನು ಸೆಳೆಯುತ್ತಿರುವ ದೇವಸ್ಥಾನವಾಗಿದೆ. ಬಹುತೇಕ ಸ್ಥಾನಗಳಲ್ಲಿ ಈಶ್ವರನ ಜತೆ ಕಾಣುವ ಗಣಪತಿ ಸ್ಥಾನ ಇಲ್ಲಿ ಸ್ಥಾಪಿಸಿಲ್ಲ. ಬೇರೆ ಯಾವ ದೈವ ನೆಲೆ ಕೂಡ ಇಲ್ಲಿಲ್ಲ. ಈಶ್ವರನ ಸ್ಥಾನ ಭಕ್ತರಿಗೆ ಎಲ್ಲವನ್ನೂ ನೀಡುತ್ತಿದೆ.


ನೆಲಮಟ್ಟದಿಂದ ಕೆಳಗೆ ದೇವಸ್ಥಾನ: ಸಾಮಾನ್ಯವಾಗಿ ಈಶ್ವರ ದೇವಸ್ಥಾನವು ಎತ್ತರದಲ್ಲಿರುತ್ತದೆ. ದೇವಸ್ಥಾನಕ್ಕೆ ಮೆಟ್ಟಿಲು ಹತ್ತಿಕೊಂಡು ಹೋಗುವಂತಿರುತ್ತದೆ. ಆದರೆ, ಕುಂದಚಪ್ಪ ದೇವಸ್ಥಾನವು ಕೆಳಗೆ ಇರುವುದರಿಂದ ಮೆಟ್ಟಿಲು ಇಳಿದುಕೊಂಡು ಹೋಗಬೇಕಾಗಿದೆ. ಆದ್ದರಿಂದ ಈ ಸ್ಥಾನವನ್ನು ಪಾತಾಳೇಶ್ವರ ಕುಂದಚ್ಚಪ್ಪ ಎಂದು ಭಕ್ತಿಯಿಂದ ಕರೆಯಲಾಗುತ್ತದೆ. ಸುಮಾರು ೨೦೦ ವರ್ಷಗಳ ಹಿನ್ನೆಲೆ ದೇವಸ್ಥಾನಕ್ಕಿದೆ. ಸಮೀಪದಲ್ಲಿ ದೇವರ ಕೊಳ ಇದ್ದು, ನೀರು ತುಂಬಿ ತುಳುಕುತ್ತದೆ. ಹಿಂದೆ ಮೈಮೇಲೆ ದೇವರ ಬಂದು ಕಡತಲೆ ಹಿಡಿದು ವಾರ್ಷಿಕ ಹಬ್ಬದಲ್ಲಿ ಭಕ್ತರಿಗೆ ಅನುವಾದ ನೀಡುತ್ತಿತ್ತು. ಈಗ ಇಂತಹ ಆಚರಣೆ ಇಲ್ಲದಾಗಿದೆ. ದೇವರ ಕಡತಲೆ ಈಗಲೂ ಇದೆ.


ಅಂಗಾಂಗಗಳ ರೂಪ ಅರ್ಪಣೆ; ದೇವರ ಕೃಪೆಗೆ ಪಾತ್ರರಾದವರು ಮಾನವನ ದೇಹವನ್ನು ಓಲುವ ರೂಪವನ್ನು ದೇವರಿಗೆ ಅರ್ಪಿಸುತ್ತಾರೆ. ಕಾಲು ನೋವು ಬೇರೆ ಬೇರೆ ಸಮಸ್ಯೆಯಿಂದ ಮುಕ್ತರಾದವರು ಕಾಲಿನ ರೂಪ, ಕೈ, ಅಂಗಾಂಗಗಳ ರೂಪವನ್ನು ಹರಕೆಯಾಗಿ ಒಪ್ಪಿಸುತ್ತಾರೆ. ಪ್ರಾರ್ಥಿಸಿ ಮದುವೆಯಾದವರು ಹೆಣ್ಣು, ಗಂಡಿನ ರೂಪ, ಮಕ್ಕಳು ಆಗದೆ ಫಲ ಕಂಡವರು ತೊಟ್ಟಿಲು ಒಪ್ಪಿಸುತ್ತಾರೆ. ಇಂತಹ ಹರಕೆ ಒಪ್ಪಿಸುವ ಪರಿ ಹೆಚ್ಚಾಗುತ್ತಿರುವುದು ದೇವರ ಶಕ್ತಿಯನ್ನು ತೋರಿಸುತ್ತಿದೆ ಎಂದು ಸ್ಥಳೀಯ ಭಕ್ತರು ಹೇಳುತ್ತಾರೆ.


ಶೂನ್ಯ ಮಾಸಕ್ಕೂ ಮುನ್ನ ನಮ್ಮೆ ; ಕೊಡಗಿನ ಬಹುತೇಕ ಈಶ್ವರ ದೇವಸ್ಥಾನದ ಹಬ್ಬವು ಮಾರ್ಚ್-ಎಪ್ರಿಲ್ ತಿಂಗಳಿನಲ್ಲಿ ಬರುವ ಶೂನ್ಯ ಮಾಸದಲ್ಲಿ ನಡೆಯುತ್ತದೆ. ಆದರೆ, ಕುಂದಚಪ್ಪ ದೇವರ ವಾರ್ಷಿಕೋತ್ಸವ ಶೂನ್ಯ ಮಾಸ ತಿಂಗಳು ಆರಂಭಕ್ಕೂ ಮುನ್ನ (ಕುಂಭ್ಯಾರ್ ಕೊನೆಯ ಒಳಗೆ) ಮಾರ್ಚ್ ತಿಂಗಳಿನಲ್ಲಿ ನಡೆಯುತ್ತದೆ. ಇದೊಂದು ವಿಶೇಷ ಆಚರಣೆಯಾಗಿದ್ದು, ಮೂಲ ಕಾರಣ ತಿಳಿದಿಲ್ಲ.


ದೇವರ ಅನುಗ್ರಹದಿಂದ ತಿಂಗಳ ಪೂಜೆ; ವರ್ಷಕೊಮ್ಮೆ ವಾರ್ಷಿಕ ಉತ್ಸವ ಆಚರಣೆಗಷ್ಟೆ ಸೀಮಿತವಾಗಿದ್ದ ನಮ್ಮೆಯು ದೇವರ ಅನುಗ್ರಹದಿಂದ ಭಕ್ತರ ನಂಬಿಕೆ ಪ್ರತೀಕವಾಗಿ ತಿಂಗಳಿಗೊಮ್ಮೆ ಪೂಜೆ ನಡೆಸುವಂತೆ ಆಗಿದೆ. ತಿಂಗಳ ಭಾನುವಾರ ತಿಂಗಳ ಪೂಜೆ ನಡೆಸಲಾಗುತ್ತದೆ. ಬೆಳಗ್ಗೆ ಗ್ರಾಮದ ಭಕ್ತರು ಸೇರಿ ದೇವರನ್ನು ಪ್ರಾರ್ಥಿಸುತ್ತಾರೆ. ದೇವರ ಅನುಗ್ರಹಕ್ಕೆ ಪಾತ್ರರಾದವರು ಹೆಚ್ಚುತ್ತಿರುವ ಕಾರಣ, ಭಕ್ತರಿಗೆ ಬೆಳಗ್ಗಿನ ಉಪಹಾರ ಕೂಡ ಭಕ್ತರಿಂದ ದೊರೆಯುವಂತಾಗಿದೆ.


ಕಾಡಿನೊಳಗೆ ದೇವಸ್ಥಾನ ; ಸುಮಾರು ಎರಡುವರೆ ಎಕರೆಯಲ್ಲಿ ದೇವನೆಲೆ ಇದೆ. ಸುತ್ತಲೂ ದಟ್ಟಕಾಡು, ಜೀವ ಸಂಕುಲಗಳ ನಡುವೆ ದೇವಸ್ಥಾನವಿದೆ. ಅರಣ್ಯ ಇಲಾಖೆ ವಿಶೇಷ ಕಾಡು ಜಾತಿಯ ಗಿಡ ನೆಟ್ಟು ಪೋಷಿಸಲು ಗ್ರಾಮಸ್ಥರೊಂದಿಗೆ ತೊಡಗಿಕೊಂಡಿದ್ದಾರೆ. ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ. ಈಶ್ವರ ವಿಗ್ರಹದ ಹೊರತು ಬೇರೆ ದೇವರ ಸ್ಥಾನಗಳು ಇಲ್ಲಿಲ್ಲ. ಗಣಪತಿಯ ಸಣ್ಣ ಮೂರ್ತಿಯನ್ನು ಈಶ್ವರನ ಮೂರ್ತಿಯೊಂದಿಗೆ ಇಟ್ಟು ಪೂಜಿಸಲಾಗುತ್ತಿದೆ.

ಸೇವೆಗಳು; ರುದ್ರಾಭಿಷೇಕ, ಶತರುದ್ರಾಭಿಷೇಕ, ಕ್ಷೀರಾಭಿಷೇಕ, ಜಲದ್ದಾರಭಿಷೇಕ, ಭಸ್ಮಾರ್ಚನೆ, ಬಿಲ್ವಾರ್ಚನೆ, ಮಹಾಪೂಜೆ, ಕಾರ್ತಿಕ ಪೂಜೆ, ಶಂಧಿ ಶಾಂತಿ, ಮೃತ್ಯುಂಜಯ ಹೋಮ, ಮೃತ್ಯುಂಜಯ ಜಪ ಪ್ರತಿ ತಿಂಗಳು ಮತ್ತು ವಾರ್ಷಿಕ ಹಬ್ಬದಲ್ಲಿ ದೊರೆಯುತ್ತದೆ. ಪುತ್ತರಿ ನಮ್ಮೆ, ಗೌರಿ-ಗಣೇಶ, ಶಿವರಾತ್ರಿ ಹಬ್ಬ ಆಚರಿಸಲಾಗುತ್ತದೆ.

ಹಬ್ಬ ಹೀಗಿರುತ್ತದೆ..
ವಾರ್ಷಿಕ ಹಬ್ಬವು ಶನಿವಾರ ಬರುವಂತೆ ಆಚರಿಸಲಾಗುತ್ತದೆ. ಇದಕ್ಕೂ ಮುನ್ನ ಊರ ಅಂಬಲದಲ್ಲಿ ಶುಕ್ರವಾರ ಕುದ್‌ರೆ ನಮ್ಮೆ ಆಚರಿಸಲಾಗುತ್ತದೆ. ಪಣಿಕ ಜನಾಂಗ ತೆರೆ ಕಟ್ಟುವ ಶಾಸ್ತ್ರದೊಂದಿಗೆ ಆಚರಣೆ ಮಾಡಲಾಗುತ್ತದೆ. ಹಬ್ಬಕ್ಕೆ ಚಾಲನೆ ನೀಡುವ ಮುನ್ನ ನಿರ್ಧಾರ ತೆಗೆದುಕೊಳ್ಳಲು ವಿಶೇಷವಾಗಿ ನಿರ್ಮಿಸಿರುವ ಊರ ಅಂಬಲದಲ್ಲಿ ಹಿರಿಯರು ಸೇರಿ ಚಾಲನೆ ನೀಡಲು ನಿರ್ಧಾರ ತೆಗೆದುಕೊಳ್ಳುತ್ತಾರೆ. ಅಣ್ಣೀರ, ಬಾನಂಡ, ಕೊಲ್ಲೀರ, ತಚ್ಚಡ ಕುಟುಂಬದ (ಅಮ್ಮಕೊಡವ, ಕೊಡವ ಮತ್ತು ಐರಿ) ಹಿರಿಯರು ಊರ ಅಂಬಲದಲ್ಲಿ ಸೇರಿ ದೇವರನ್ನು ನೆನೆದು ನಮ್ಮೆಗೆ ಕಟ್ಟು ಬೀಳುವ ದಿನಾಂಕವನ್ನು ಘೋಷಿಸುತ್ತಾರೆ. ಒಂದು ವಾರ ಪಟ್ಟಣಿ ಆಚರಣೆ ನಡೆಸಲಾಗುತ್ತದೆ. ಮಾಂಸಹಾರ ತ್ಯಜಿಸಿ ಪ್ರಾರ್ಥಿಸಲಾಗುತ್ತದೆ. ಇದು ದೈವ ಆಚರಣೆಯಲ್ಲಿ ವಿಶೇಷತೆಯಾಗಿದೆ. ಕುದುರೆ, ತೆರೆ ಆಚರಣೆ ನಡೆಸಿ ರಾತ್ರಿ ದೇವಸ್ಥಾನಕ್ಕೆ ಆಗಮಿಸಿ ಹಬ್ಬ ನಡೆಸಲಾಗುತ್ತದೆ. ಹಬ್ಬದ ದಿನ ಮಹಪೂಜೆ ನಡೆಯುತ್ತದೆ. ಎತ್ತ್ ಪೋರಾಟ ಆಚರಣೆ ವಿಶೇಷತೆಯಲ್ಲೊಂದು. ಊರಿನವರು ಸೇರಿ ಗ್ರಾಮದ ಸಮಸ್ಯೆಗೆ ಪರಿಹಾರ ಚರ್ಚೆ ನಡೆಸುತ್ತಾರೆ. ದಾನಿಗಳು ಅನ್ನದಾನದ ಮೂಲಕ ಪುನೀತರಾಗುತ್ತಾರೆ. ಕಾರೆಕುಂದ್ ಎಂಬಲ್ಲಿ ಪ್ರಸಾದ ಅರ್ಪಿಸಿ ಹಬ್ಬಕ್ಕೆ ತೆರೆ ಎಳೆಯಲಾಗುತ್ತದೆ.

ಸುಮಾರು ೨೦೦ ವರ್ಷಕ್ಕೂ ಅಧಿಕ ಇತಿಹಾಸವಿದೆ. ಕುಂದಚಪ್ಪ ದೇವರ ಕೃಪೆಗೆ ಪಾತ್ರರಾದ ಭಕ್ತರು ಹರಕೆ ತೀರಿಸುತ್ತಿರುವುದು ಹೆಚ್ಚಾಗುತ್ತಿದೆ. ಎಲ್ಲವನ್ನೂ ಭಕ್ತರೇ ದಾನದ ರೂಪದಲ್ಲಿ ಒಪ್ಪಿಸುತ್ತಾರೆ. ಇದರಿಂದ ದೇವರ ಶಕ್ತಿ ನಮಗೆಲ್ಲಾ ಅರಿವಾಗಿದೆ. ವಿಶೇಷ ಶಕ್ತಿ ಇರುವ ದೇವರು. ಊರಿನ ಅಭಿವೃದ್ದಿಯಲ್ಲಿ ಕುಂದಚಪ್ಪ ದೇವರ ಭಾಗ್ಯ ಅಡಗಿದೆ.-ನಾಳಿಯಮ್ಮಂಡ ಉಮೇಶ್ ಕೇಚಮಯ್ಯ, ಕಾರ್ಯದರ್ಶಿ, ದೇವಸ್ಥಾನ ಆಡಳಿತ ಸಮಿತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net