ಕುಂಭಳದೇವಿ ಬೇಡಿದರೆ ಕಷ್ಟ ದೂರ

2-pnp 1c
Published on

ಪಾಂಡವಪುರ: ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿ, ಕಷ್ಟ-ಕಾರ್ಪಣ್ಯಗಳಿಗೆ ಪರಿಹಾರ ಹಾಗೂ ಇಷ್ಟಾರ್ಥ ಸಿದ್ಧಿಗಾಗಿ ನಿಸ್ವಾರ್ಥ ಮನಸ್ಸಿನಿಂದ ಭಕ್ತಿಯಿಂದ ಕೈಮುಗಿದು ಬೇಡಿಕೊಂಡರೆ ನಿಕುಂಭಿಣಿ (ಕುಂಭಳದೇವಿ) ದೇವಿ ಕಲ್ಲಿನಂತಹ ಕಷ್ಟವನ್ನೂ ಮಂಜಿನಂತೆ ಕರಗಿಸುತ್ತಾಳೆ ಎಂಬುದು ಭಕ್ತರ ಅಚಲವಾದ ನಂಬಿಕೆ.

ಪಾಂಡವಪುರ ತಾಲೂಕಿನ ತೊಣ್ಣೂರು ಕೆರೆಯ ದಂಡೆಯ ಮೇಲೆ ಸಾವಿರಾರು ವರ್ಷಗಳ ಹಿಂದೆ ರಾಮಾನುಜಾಚಾರ್ಯರ ಇಚ್ಛೆಯಂತೆ ನೆಲೆ ನಿಂತಿರುವ ನಿಕುಂಭಿಣಿ ದೇವಿ (ಕುಂಭಳದೇವಿ) ಭಕ್ತರ ಬೇಡಿಕೆಗಳನ್ನು ಈಡೇರಿಸುತ್ತಾ ಈ ಭಾಗದ ಗ್ರಾಮದ ಜನರ ದೇವತೆಯಾಗಿ ಪೂಜಿಸಲ್ಪಡುತ್ತಿದ್ದಾಳೆ.

ಹೊಯ್ಸಳರ ದೊರೆ ಬಿಟ್ಟಿದೇವ ಅಥವಾ ಬಿಟ್ಟಿಗನ ಒಬ್ಬಳೇ ಮಗಳಿಗೆ ಬ್ರಹ್ಮ ರಾಕ್ಷಸ ಹೊಕ್ಕು ವಿಚಿತ್ರವಾಗಿ ವರ್ತಿಸುತ್ತಿರುತ್ತಾಳೆ. ಶೈವ ಆರಾಧಕರಾಗಿದ್ದ ಜೋಳ ರಾಜರ ಆಳ್ವಿಕೆಯಲ್ಲಿ ಹಿಂಸೆಗೆ ಒಳಪಟ್ಟು ತಮಿಳುನಾಡಿನ ಶ್ರೀರಂಗಂ ತೊರೆದು ತೊಂಡನೂರಿನಲ್ಲಿ (ಈಗಿನ ತೊಣ್ಣೂರು) ನೆಲೆಸಿದ್ದ ರಾಮಾನುಜಚಾರ್ಯರಿಗೆ ರಾಜನ ಮಗಳ ಸಮಸ್ಯೆಯನ್ನು ಪರಿಹರಿಸುವಂತೆ ರಾಜ ಪರಿವಾರದವರು ಬೇಡಿಕೊಳ್ಳುತ್ತಾರೆ. ಅದರಂತೆ ಶ್ರೀಪಾದ ತೀರ್ಥವನ್ನು ಪ್ರೋಕ್ಷಣೆ ಮಾಡಿ ಬ್ರಹ್ಮರಾಕ್ಷಸನ ವಶದಿಂದ ರಾಜನ ಮಗಳನ್ನು ಮುಕ್ತಿಗೊಳಿಸುತ್ತಾರೆ. ರಾಮಾನುಜಚಾರ್ಯರ ಪ್ರಭಾವಕ್ಕೆ ಮನಸೋತ ಬಿಟ್ಟಿದೇವ ವೈಷ್ಣವ ಪಂಥ ಸ್ವೀಕರಿಸಿ ವಿಷ್ಣುವರ್ಧನನಾಗುತ್ತಾನೆ. ವೈಷ್ಣವ ಪಂಥ ಸ್ವೀಕರಿಸಿದ ವಿಷ್ಣ್ಣುವರ್ಧನನಿಗೆ ರಾಮಾನುಜಚಾರ್ಯರು ತಮ್ಮಲ್ಲಿದ್ದ ನಿಕುಂಭಿಣಿ ದೇವಿಯ ವಿಗ್ರಹವನ್ನು ರಾಜನಿಗೆ ಕೊಟ್ಟು ಮಾಘಮಾಸ ಪುನರ್ವಸು ನಕ್ಷತ್ರದಲ್ಲಿ ತಿರುಮಲ ಸಾಗರ ಎಂದು ಕರೆಯಲ್ಪಡುತ್ತಿದ್ದ ಈಗಿನ ತೊಣ್ಣೂರು ಕೆರೆಯ ದಡದಲ್ಲಿ ಪ್ರತಿಷ್ಠಾಪಿಸುವಂತೆ ಸೂಚಿಸುತ್ತಾರೆ. ಅದರಂತೆ, ವಿಷ್ಣುವರ್ಧನ ನಿಕುಂಭಿಣಿ ದೇವಿ ಮತ್ತು ದ್ವಾದಶ ದೇವತೆಗಳನ್ನು ಕೆರೆಯ ದಡದಲ್ಲಿ ಪ್ರತಿಷ್ಠಾಪಿಸಿ ದೇವಸ್ಥಾನ ನಿರ್ಮಿಸಿದ ಎಂಬುದು ಇತಿಹಾಸ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net