ಭಕ್ತಿಯಿಂದ ನಮಿಸಿದರೆ ಕಷ್ಟಗಳು ದೂರ

oppo_2
temple
Published on

ಮದ್ದೂರು: ತಾಲೂಕಿನ ಆತಗೂರು ಹೋಬಳಿಯ ತೊರೆಶೆಟ್ಟಿಹಳ್ಳಿ ಗ್ರಾಮದ ಹೊರವಲಯದ ಶಿಂಷಾ ನದಿ ಸಮೀಪದ ಪ್ರಕೃತಿ ಮಡಿಲಲ್ಲಿರುವ ಭೂತಲಿಂಗೇಶ್ವರ ಹಾಗೂ ಬ್ರಹ್ಮಲಿಂಗೇಶ್ವರ ದೇಗುಲಗಳು ತನ್ನದೆಯಾದ ಹಲವಾರು ವೈಶಿಷ್ಯ್ಟಗಳನ್ನು ಒಳಗೊಂಡಿವೆ.

ಇಲ್ಲಿಗೆ ಬಂದು ಶ್ರದ್ಧಾ, ಭಕ್ತಿಯಿಂದ ಪೂಜೆ ಮಾಡಿ ನಮಿಸಿದರೆ ಜೀವನದಲ್ಲಿ ಅಂದುಕೊಂಡ ಎಲ್ಲ ಇಷ್ಟಾರ್ಥಗಳು ಈಡೇರುತ್ತವೆ. ಕಷ್ಟಗಳು ಮಂಜಿನಂತೆ ಕರಗಿ ಜೀವನದಲ್ಲಿ ಸುಖ, ಶಾಂತಿ ಹಾಗೂ ನೆಮ್ಮದಿ ನೆಲೆಸುತ್ತದೆ ಎಂಬುದು ಇಲ್ಲಿಗೆ ಬರುವ ಭಕ್ತಾದಿಗಳ ನಂಬಿಕೆಯಾಗಿದೆ.

ಇಲ್ಲಿನ ದೇವರಿಗೆ ಮಂಡ್ಯ, ಚನ್ನಪಟ್ಟಣ, ಮೈಸೂರು, ಕನಕಪುರ, ರಾಮನಗರ, ಬೆಂಗಳೂರು ಸೇರಿದಂತೆ ಹಲವಾರು ಜಿಲ್ಲೆಗಳಲ್ಲಿ ಅಪಾರವಾದ ಭಕ್ತ ಸಮೂಹವಿದ್ದು, ಇಲ್ಲಿಗೆ ಬಂದು ವಿಶೇಷ ಪೂಜೆ ಸಲ್ಲಿಸಿ ಹರಕೆ ಕಟ್ಟಿಕೊಂಡು ಹೋದವರು ಈಡೇರಿದ ನಂತರ ದೇಗುಲಕ್ಕೆ ಆಗಮಿಸಿ ಹರಕ್ಕೆ ಅಭೀಷ್ಟೆಗಳನ್ನು ಈಡೇರಿಸುವುದು ವಾಡಿಕೆಯಾಗಿದೆ.

ದೇಗುಲಕ್ಕೆ ಬಂದು ವಿಶೇಷ ಪೂಜೆ ಸಲ್ಲಿಸಿ, ದೇವರನ್ನು ಶುದ್ಧ ಮನಸಿನಿಂದ ಪ್ರಾರ್ಥನೆ ಮಾಡಿದರೆ ಕಂಕಣ ಭಾಗ್ಯ ಕೂಡಿ ಬರುತ್ತದೆ. ಸಂತಾನ ಪ್ರಾಪ್ತಿಯಾಗುತ್ತದೆ. ವ್ಯಾಜ್ಯಗಳ ಸಮಸ್ಯೆ ಈಡೇರುತ್ತದೆ. ವ್ಯಾಪಾರದಲ್ಲಿ ಲಾಭ ಬರುತ್ತದೆ. ಶತ್ರು ಬಾಧೆ ದೂರವಾಗುವುದು ಸೇರಿದಂತೆ ಹಲವಾರು ಹರಕೆಗಳು ಈಡೇರುವ ಜತೆಗೆ ಸಮಸ್ಯೆಗಳಿಗೆ ಮುಕ್ತಿ ಸಿಗುತ್ತದೆ ಎಂಬುವುದು ಭಕ್ತರ ನಂಬಿಕೆ.

ಪ್ರತಿ ಭಾನುವಾರ ದೇಗುಲದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ದೇಗುದ ಆವರಣದಲ್ಲಿ ವಿಶಾಲವಾದ ಸ್ಥಳಾವಕಾಶ ಇದ್ದು, ಧಾರ್ಮಿಕ ಕಾರ್ಯಕ್ರಮ ಹಾಗೂ ಶುಭ ಕಾರ್ಯಗಳನ್ನು ಮಾಡಲು ಭಕ್ತರಿಗೆ ಅನುಕೂಲವಾಗಿದೆ. ದೇವರಿಗೆ ರದ್ರಾಭಿಷೇಕ, ಪಂಚಾಮೃತ ಅಭಿಷೇಕ ಹಾಗೂ ರುದ್ರಹೋಮ ಸೇರಿದಂತೆ ವಿವಿಧ ರೀತಿಯಲ್ಲಿ ದೇವರಿಗೆ ವಿಶೇಷ ಪೂಜೆ ಮಾಡಲಾಗುತ್ತದೆ.

ಕಾರ್ತಿಕ ಮಾಸದಲ್ಲಿ ಪ್ರತಿ ಭಾನುವಾರ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗುತ್ತದೆ. ಶಿವರಾತ್ರಿ ಹಬ್ಬದ ಮರು ದಿನ ಸುಮಾರು 5 ಸಾವಿರ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗುತ್ತದೆ. ಮಾಘ ಮಾಸದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಸಂಕ್ರಾಂತಿ ಹಬ್ಬದಂದು ರಾಸುಗಳಿಗೆ ವಿಶೇಷ ಪೂಜೆ ಸಲ್ಲಿಸಿ ಪೊಂಗಲ್ ಆಚರಣೆ ಮಾಡುವುದು ವಿಶೇಷವಾಗಿದೆ. ಜತೆಗೆ ಯುಗಾದಿ, ಗಣೇಶ ಹಬ್ಬ ಸೇರಿದಂತೆ ಪ್ರತಿ ಹಬ್ಬಗಳಲ್ಲೂ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಭಕ್ತಾದಿಗಳಿಗೆ ತೀರ್ಥ ಪ್ರಸಾದ ವಿತರಣೆ ಮಾಡಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net