ಲೋಕ ಕಲ್ಯಾಣಕ್ಕಾಗಿ ನೆಲೆಸಿದ ಮಹದೇಶ್ವರ

15BTP01
filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (0.45242152, 0.46923828);sceneMode: 2621440;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 42;
Published on

ಬೆಟ್ಟದಪುರ: ಭಕ್ತಾದಿಗಳ ರಕ್ಷಣೆಗಾಗಿ ಹಾಗೂ ಅವರ ಇಷ್ಟಾರ್ಥವನ್ನು ಈಡೇರಿಸುವ ಶ್ರೀ ಮಹದೇಶ್ವರಸ್ವಾಮಿಯು ಮಹದೇಶ್ವರ ಮಠ ಗ್ರಾಮಕ್ಕೆ ವಲಸೆ ಬಂದು ನೆಲೆ ನಿಂತು ಎಲ್ಲರ ನಂಬಿಕೆಯ ಆರಾಧ್ಯ ದೈವವಾಗಿದೆ.

ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಸಮೀಪದ ಮಹದೇಶ್ವರ ಮಠ ಗ್ರಾಮದಲ್ಲಿ ನೆಲೆ ನಿಂತಿರುವ ಶ್ರೀ ಮಹದೇಶ್ವರಸ್ವಾಮಿಯ ದರ್ಶನ, ಪೂಜೆಗೆ ಬರುವ ಭಕ್ತರು ದೇಗುಲದ ಸ್ಪರ್ಶ ಪಡೆದು, ಸ್ವಾಮಿಯನ್ನು ಆರಾಧನೆ ಮಾಡುತ್ತಾರೆ. ಮಂಡಿಯೂರಿ ತಲೆಬಗ್ಗಿಸಿ ಬೇಡಿಕೊಂಡರೆ ಕಷ್ಟಗಳ ನಿವಾರಣೆೆ, ಕೋರಿದ ಇಷ್ಟಾರ್ಥಗಳನ್ನು ಈಡೇರಿಸುವ ಈ ತಾಣದಿಂದ ಶಾಂತಿ, ನೆಮ್ಮದಿ ಲಭಿಸಲಿದೆ ಎಂಬುದು ಭಕ್ತರ ಆಗಾಧ ನಂಬಿಕೆಯಾಗಿದೆ.

ಪ್ರತಿದಿನ ದೇವಸ್ಥಾನದಲ್ಲಿ ಬೆಳಗ್ಗೆ ಮತ್ತು ಸಂಜೆ ಪೂಜೆ ನಡೆಯುತ್ತದೆ. ಸಂಕ್ರಾಂತಿ, ಶಿವರಾತ್ರಿ, ಯುಗಾದಿ, ಗೌರಿ- ಗಣೇಶ ಹಬ್ಬ, ನವರಾತ್ರಿ, ದೀಪಾವಳಿ ಸೇರಿದಂತೆ ವಿವಿಧ ಹಬ್ಬಗಳಲ್ಲಿ ಮತ್ತು ಅಮಾವಾಸ್ಯೆ ದಿನದಂದು ವಿಶೇಷ ಪೂಜೆಯೊಂದಿಗೆ ಹೋಮ-ಹವನಗಳು ಮತ್ತು ಅಭಿಷೇಕಗಳು ನೆರವೇರುತ್ತವೆ. ಇದಲ್ಲದೆ ಕಡೇ ಕಾರ್ತಿಕ ಮಾಸದಲ್ಲಿ ವಿಶೇಷ ಜಾತ್ರಾ ಮಹೋತ್ಸವ ನಡೆಯುತ್ತದೆ. ಏಳು ಮಲೆಯ ಒಡೆಯ ಮುದ್ದು ಮಾದಪ್ಪ ಎಂಬುದಾಗಿ ಈ ವ್ಯಾಪ್ತಿಯ ಏಳು ಗ್ರಾಮಗಳಾದ ಅತ್ತಿಗೋಡು, ಮಹದೇಶ್ವರ ಮಠ, ಮಠದ ಕೊಪ್ಪಲು, ತಂದ್ರೆಗೂಡಿ ಕೊಪ್ಪಲು, ಕಳ್ಳಿಕೊಪ್ಪಲು, ಕಗ್ಗಲಿಕೊಪ್ಪಲು ಮತ್ತು ಚಿಕ್ಕೇಗೌಡನಕೊಪ್ಪಲು ಗ್ರಾಮದ ಭಕ್ತರು ಎಲ್ಲರೂ ಒಗ್ಗೂಡಿ ಅದ್ದೂರಿಯಾಗಿ ಆಚರಣೆ ಮಾಡುತ್ತಾರೆ. ಇದೇ ವೇಳೆ ಕಡೇ ದಿನ ಭಕ್ತರಿಗೆ ಅನ್ನಸಂತರ್ಪಣೆ ನಡೆಯುತ್ತದೆ.

ಭಕ್ತರು ಸಂತಾನ ಭಾಗ್ಯ, ಉದ್ಯೋಗ, ಮನೆಯಲ್ಲಿ ಕಷ್ಟ, ಕಲ್ಯಾಣ ಭಾಗ್ಯ ಮತ್ತು ಕುಟುಂಬದಲ್ಲಿ ನೆಮ್ಮದಿ ಇಲ್ಲದಿರುವುದು ಸೇರಿದಂತೆ ಅನೇಕ ಸಮಸ್ಯೆಗಳನ್ನು ಹೊತ್ತು ತಂದು ಶಿವನ ಮುಂದೆ ಇಟ್ಟು ನಿವಾರಣೆಗೆ ಹರಕೆ ಮಾಡಿಕೊಳ್ಳುತ್ತಾರೆ. ಈಡೇರಿದರೆ ಹಲವು ರೀತಿಯಲ್ಲಿ ಹರಕೆ ತೀರಿಸುವುದು ವಾಡಿಕೆ. ದೇವಸ್ಥಾನದಲ್ಲಿ ಹೊಸ ವಾಹನಗಳ ಪೂಜೆ, ನಾಮಕರಣ, ಇತರ ಶುಭಕಾರ್ಯಗಳು ನಡೆಯುತ್ತವೆ. ಶುಭ ಕಾರ್ಯಕ್ರಮಗಳಿಗಾಗಿ ದೇವಸ್ಥಾನದ ಗುಡಿಯ ಆವರಣದಲ್ಲಿ ಸ್ಥಳವೂ ಇದೆ. ಮಹದೇಶ್ವರ ಸ್ವಾಮಿ ದೇವಸ್ಥಾನಕ್ಕೆ ಸಮೀಪದ ಬೆಟ್ಟದಪುರ, ರಾವಂದೂರು, ಹಾರನಹಳ್ಳಿ, ಪಿರಿಯಾಪಟ್ಟಣ ವ್ಯಾಪ್ತಿಯ ಭಕ್ತಾದಿಗಳು ಮಾತ್ರವಲ್ಲದೇ ದೂರದ ಕೊಡಗು, ಮೈಸೂರು, ಬೆಂಗಳೂರು, ಹಾಸನ, ಚಾಮರಾಜನಗರ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸುತ್ತಾರೆ.

ಅರೆಮಲೆನಾಡು ಪ್ರದೇಶವಾಗಿರುವ ಪಿರಿಯಾಪಟ್ಟಣ ತಾಲೂಕು ಸುಮಾರು 10ನೇ ಶತಮಾನದಿಂದಲೂ ಚೆಂಗಾಳ್ವ(ಚೋಳ)ರ ವಂಶದವರು ಹಾಗೂ ಪಿರಿಯಾಪಟ್ಟಣ ಅರಸರ ಆಳ್ವಿಕೆಯಲ್ಲಿ ಇತ್ತು. ಶ್ರೀ ಮಹದೇಶ್ವರ ಮಠದ ದೇಗುಲ ಕೂಡ ಜೋಳರ ಕಾಲದ್ದಾಗಿದೆ. ಈ ಹಿಂದೆ ಚಿಕ್ಕ ಗುಡಿ ದ್ರಾವಿಡ ಶೈಲಿಯಲ್ಲಿ ನಿರ್ಮಾಣವಾಗಿತ್ತು. ಇಪ್ಪತ್ತು ವರ್ಷಗಳ ಹಿಂದೆ ಗ್ರಾಮಸ್ಥರು ಹಾಗೂ ಭಕ್ತಾದಿಗಳು ಒಗ್ಗೂಡಿ ದೊಡ್ಡ ದೇವಸ್ಥಾನ ನಿರ್ಮಾಣ ಮಾಡಿದ್ದಾರೆ. ದೇವಸ್ಥಾನವು ಮುಜರಾಯಿ ಇಲಾಖೆ ವ್ಯಾಪ್ತಿಗೆ ಸೇರಿದರೂ ಸರ್ಕಾರದಿಂದ ಒಂದು ರೂಪಾಯಿ ಅನುದಾನ ಪಡೆಯದೇ ಭಕ್ತರು ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಿದ್ದಾರೆ.

ಅಂದಿನ ಕಾಲದಲ್ಲಿ ಕಾಶಿಯಿಂದ ಮಹದೇಶ್ವರ ಸ್ವಾಮಿ ವಲಸೆ ಬರುವ ವೇಳೆ ಈ ಗ್ರಾಮಕ್ಕೆ ಬಂದು ಲೋಕಕಲ್ಯಾಣಕ್ಕಾಗಿ ಇಲ್ಲಿ ನೆಲೆಸಿ ವಿಶ್ರಾಂತಿ ಪಡೆದಿದ್ದರು. ಇಲ್ಲಿಂದ ಮುಂದಿನ ಕಾಲ್ನಡಿಗೆ ಆರಂಭಿಸಿ ಶ್ರೀ ಮಹದೇಶ್ವರ ಬೆಟ್ಟದ ನಾಗಮಲೈಯಲ್ಲಿ ಐಕ್ಯರಾದರು. ಅಲ್ಲದೇ ಸ್ವಾಮಿಯ ವಾಹನ ಹುಲಿರಾಯನು ತುಂಬ ವರ್ಷಗಳ ಹಿಂದೆ ಈ ದೇವಸ್ಥಾನದ ಬಳಿ ಬಂದು ಪ್ರದಕ್ಷಿಣೆ ಹಾಕಿ ಹೋಗುತ್ತಿತ್ತು. ಆದರೆ ಹುಲಿಯು ಯಾರಿಗೂ ತೊಂದರೆ ಕೊಡದೆ ತನ್ನ ಪಾಡಿಗೆ ತಾನು ಹೋಗುತ್ತಿತ್ತು ಎಂದು ಹೇಳುತ್ತಾರೆ ಗ್ರಾಮದ ಹಿರಿಯರು. ದೇವಸ್ಥಾನದ ಹಿಂಭಾಗದಲ್ಲಿ ನೂರಾರು ವರ್ಷಗಳ ಮಠವೊಂದು ಇದ್ದು, ಇಲ್ಲಿ ಮಹಾಲಿಂಗ ಒಡೆಯರ್ ಎಂಬ ಸ್ವಾಮೀಜಿ ವಾಸವಾಗಿದ್ದರು. ಇಂದು ಮಠವು ಪಾಳಬಿದ್ದ ಸ್ಥಿತಿಯಲ್ಲಿ ಇದ್ದು, ಸ್ವಾಮೀಜಿ ಕುಟುಂಬದ ತಲೆಮಾರಿನವರು ದೇವಸ್ಥಾನದಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಪಿರಿಯಾಪಟ್ಟಣ ತಾಲೂಕು ಕೇಂದ್ರದಿಂದ ಬೆಟ್ಟದಪುರ ಮಾರ್ಗವಾಗಿ ಮಹದೇಶ್ವರ ಮಠ ಗ್ರಾಮಕ್ಕೆ ಬರಬಹುದು. ತಾಲೂಕು ಕೇಂದ್ರದಿಂದ ಸುಮಾರು 23 ಕಿ.ಮೀ ದೂರದಲ್ಲಿದ್ದು, ಬೆಟ್ಟದಪುರ, ಕೆ.ಆರ್.ನಗರ ಮಾರ್ಗದ ಅತ್ತಿಗೋಡು ಗ್ರಾಮ ಸಮೀಪದಲ್ಲಿ ಮಹದೇಶ್ವರ ಮಠದ ಗ್ರಾಮದ ಗೇಟ್ ಇದೆ. ಇಲ್ಲಿಂದ ಗ್ರಾಮಕ್ಕೆ ಹೋಗಬಹುದು. ಇಲ್ಲಿ ಸರ್ಕಾರಿ ಬಸ್ ಮತ್ತು ಖಾಸಗಿ ವಾಹನಗಳ ಓಡಾಟ ಕಡಿಮೆ. ಸ್ವಂತ ವಾಹನದಲ್ಲಿ ಬಂದರೆ ಉತ್ತಮ. ಹೆಚ್ಚಿನ ಮಾಹಿತಿಗೆ ಅರ್ಚಕರಾದ ಎಂ.ಪಿ ಮಹದೇವಪ್ಪ ಮೊ.8970766448 ಹಾಗೂ ಎಂ.ಎಸ್ ಜಗದೀಶ್ ಮೊ.9008569998 ಸಂಪರ್ಕಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net