

ಶನಿವಾರಸಂತೆ: ಮುದರವಳ್ಳಿ ಗ್ರಾಮ ಎಂದೊಡನೆ ನೆನಪಾಗುವುದು 600 ವರ್ಷಗಳ ಇತಿಹಾಸವಿರುವ ಈಶ್ವರ ದೇವಾಲಯ. ಈ ಗ್ರಾಮದಲ್ಲಿ ರೈತಾಪಿ ವರ್ಗದವರೇ ಹೆಚ್ಚಿದ್ದು, ಕೃಷಿಯನ್ನೇ ನಂಬಿಕೊಂಡಿದ್ದಾರೆ.
ಗ್ರಾಮವನ್ನು ಈ ಹಿಂದೆ ಪಟೇಲ ವಂಶಸ್ಥರು ಆಳ್ವಿಕೆ ಮಾಡುತ್ತಿದ್ದರು. ಆಗ ಗ್ರಾಮಕ್ಕೆ ದೇವರ ಅವಶ್ಯಕತೆಯಿದೆ ಎಂದು ಚಿಂತನೆ ನಡೆಸಿ ಈಶ್ವರ ದೇವರನ್ನು ಪ್ರತಿಷ್ಠಾಪನೆ ಮಾಡಲು ತೀರ್ಮಾನಿಸಿದರು. ಅದರಂತೆ ಈಶ್ವರ ಮೂರ್ತಿಯನ್ನು ಪಟೇಲ ವಂಶಸ್ಥರು ಪ್ರತಿಷ್ಠಾಪನೆ ಮಾಡಿ ಪ್ರತಿನಿತ್ಯ ಪಟೇಲರ ಮನೆ ದೇವರು ಎಂಬಂತೆ ಪೂಜೆ ಸಲ್ಲಿಸುತ್ತ ಬರುತ್ತಿದ್ದರು.
ಪಟೇಲರ ಆಳ್ವಿಕೆ ನಂತರ ಗ್ರಾಮದ ಹಿರಿಯರೆಲ್ಲ ಸಭೆ ಸೇರಿ ಗ್ರಾಮದ ಮಧ್ಯ ಭಾಗದಲ್ಲಿ ದೇವರನ್ನು ಕೂರಿಸಿ, ಎಲ್ಲರೂ ಒಗ್ಗೂಡಿ ಪೂಜಿಸಲು ತೀರ್ಮಾನಿಸಿದರು. ಅಂದಿನಿಂದ ದೇವರು ಭಕ್ತರ ಕಷ್ಟಗಳನ್ನು ಪರಿಹರಿಸುತ್ತಿದ್ದಾನೆ ಎಂಬುದು ಭಕ್ತರ ನಂಬಿಕೆ. ದಿನೇ ದಿನೆ ಭಕ್ತರ ಸಂಖ್ಯೆಯೂ ಹೆಚ್ಚುತ್ತಿದೆ.
2022ರಲ್ಲಿ ಗ್ರಾಮಸ್ಥರು ದೇವಾಲಯವನ್ನು ಜೀರ್ಣೋದ್ಧ್ದಾರ ಮಾಡುವ ಆಲೊಚನೆ ಮಾಡಿ ದೇವಾಲಯ ಸೇವಾ ಸಮಿತಿಯನ್ನು ಮಾಡಿದರು. ಗ್ರಾಮಸ್ಥರ ಹಾಗೂ ದಾನಿಗಳ ಸಹಕಾರದಿಂದ 2024ರಲ್ಲಿ ಜೀರ್ಣೋದ್ಧ್ದಾರ ಮಾಡಲಾಯಿತು. ಸುಂದರ ಗೋಪುರ, ಪ್ರಾಂಗಣ, ಗರ್ಭಗುಡಿಯಲ್ಲಿ ಈಶ್ವರ ದೇವರ ಆಕರ್ಷಣೆಯ ಲಿಂಗ, ಮುಂಭಾಗ ನಂದಿ ವಿಗ್ರಹ ಪ್ರತಿಷ್ಠಾಪಿಸಲಾಗಿದೆ. ಪ್ರತಿನಿತ್ಯ ಸಂಜೆ ಸೇರುವ ಭಕ್ತಾದಿಗಳಿಗೆ ಅನ್ನ ದಾಸೋಹ, ಭಜನೆ ಕಾರ್ಯಕ್ರಮ ಮಾಡುವ ಮೂಲಕ ಈ ದೇವಾಲಯದ ಶಕ್ತಿಯನ್ನು ಹೆಚ್ಚುವಂತೆ ಮಾಡಿದರು. ಅದರಂತೆ ನಿತ್ಯ ನೂರಾರು ಸಂಖ್ಯೆಯಲ್ಲಿ ಭಕ್ತರು ಪೂಜೆ ಸಲ್ಲಿಸುತ್ತಿದ್ದಾರೆ.
ದೇವಾಲಯದಲ್ಲಿ ಅರ್ಚಕರು ನಿತ್ಯ ಬೆಳಗ್ಗೆ, ಸಂಜೆ ಪೂಜೆ ನೆರವೇರಿಸುತ್ತಾರೆ. ಹರಕೆ ಹೊತ್ತ ಭಕ್ತಾದಿಗಳು ಹಾಲು, ತುಪ್ಪ ಅಭಿಷೇಕ ನೆರವೇರಿಸುತ್ತಾರೆ. ವಿಶೇಷ ಪೂಜಾ ದಿನದಲ್ಲಿ ಗ್ರಾಮದ ಎಲ್ಲ ಜಾತಿ ಜನಾಂಗದವರು ಸೇರುತ್ತಾರೆ. ಪ್ರತಿ ವರ್ಷ ದೀಪಾವಳಿ, ಯುಗಾದಿ, ಗಣೇಶ ಚತುರ್ಥಿ, ಶಿವರಾತ್ರಿ ಹಾಗೂ ಎಲ್ಲ ಹಿಂದು ಹಬ್ಬದ ದಿನಗಳಂದು ವಿಶೇಷ ಪೂಜಾ ಕಾರ್ಯಕ್ರಮ, ಏಪ್ರಿಲ್, ಮೇ ತಿಂಗಳಿನಲ್ಲಿ ದೇವರ ಉತ್ಸವವನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಗ್ರಾಮದಿಂದ ಬೇರೆಡೆ ಉದ್ಯೋಗದಲ್ಲಿರುವವರು, ಸುತ್ತಮುತ್ತಲ ಗ್ರಾಮಸ್ಥರು, ಬೇರೆ ಊರಿಗೆ ಮದುವೆಯಾದ ಹೆಣ್ಣು ಮಕ್ಕಳು ಉತ್ಸವದಲ್ಲಿ ತಪ್ಪದೇ ಪಾಲ್ಗೊಳ್ಳುತ್ತಾರೆ.