ಯುಕೆಜಿ ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ

kodagu vidhyalaya
Published on

ಮಡಿಕೇರಿ: ಶಾಲಾ ಹಂತದಲ್ಲಿಯೇ ಮಕ್ಕಳಿಗೆ ಶಿಸ್ತು, ಜೀವನಮೌಲ್ಯಗಳನ್ನು ಸರಿಯಾದ ರೀತಿಯಲ್ಲಿ ಕಲಿಸಿಕೊಡಬೇಕು. ಸ್ವಚ್ಚಂದ ಜೀವನದ ಬಗೆಗಿನ ಎಚ್ಚರಿಕೆಯನ್ನೂ ಇಂದಿನ ಮಕ್ಕಳಿಗೆ ತಿಳಿಹೇಳುವುದು ಅಗತ್ಯ ಎಂದು ಕೊಡಗು ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ.ಅನಂತಶಯನ ಕಿವಿಮಾತು ಹೇಳಿದರು.

ನಗರದ ಕೊಡಗು ವಿದ್ಯಾಲಯದಲ್ಲಿ ಆಯೋಜಿತ ಯುಕೆಜಿ ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹುಟ್ಟಿಂದನಿಂದಲೇ ಮಕ್ಕಳನ್ನು ಅತಿಯಾದ ಪ್ರೀತಿಯಿಂದ ಪೋಷಕರು ಸಲಹುತ್ತಾ ಮಕ್ಕಳು ಮಾಡಿದ್ದೆಲ್ಲವೂ ಸರಿ ಎಂದು ಭಾವಿಸುತ್ತಾರೆ. ಇದರಿಂದಾಗಿ ಸ್ವಚ್ಚಂದತೆಯನ್ನು ಹೆಚ್ಚಾಗಿಯೇ ಮಕ್ಕಳು ಬೆಳೆಸಿಕೊಂಡು ಸಮಾಜದಲ್ಲಿ ದಾರಿ ತಪ್ಪುವ ಸಾಧ್ಯತೆಯೂ ಹೆಚ್ಚಾಗಿದೆ. ಇಂಥ ಸಂದರ್ಭ ಜೀವನಮೌಲ್ಯ, ಶಿಸ್ತನ್ನು ಕೂಡ ಸರಿಯಾದ ರೀತಿಯಲ್ಲಿ ಸರಿಯಾದ ವಯಸ್ಸಿನಲ್ಲಿಯೇ ಕಲಿಸುವ ಮೂಲಕ ತಮ್ಮ ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸಲು ಸಾಧ್ಯ ಎಂದು ಅನಂತಶಯನ ಹೇಳಿದರು.

ಸಾಧಿಸುವ ಛಲವಿದ್ದಲ್ಲಿ ಯಾವುದೇ ವ್ಯಕ್ತಿಯೂ ಎಷ್ಟೇ ಎತ್ತರದ ಬೆಟ್ಟ, ಗುಡ್ಡಗಳನ್ನು ಸಲೀಸಾಗಿ ಏರಬಲ್ಲ. ಎಷ್ಟೇ ದೂರದವರೆಗೂ ಸಮುದ್ರದಲ್ಲಿ ಈಜಬಲ್ಲ. ಗಗನದಲ್ಲಿ ಹಾರಬಲ್ಲ ಸಾಮರ್ಥ್ಯ ಹೊಂದಬಲ್ಲ ಎಂದು ಹೇಳಿದ ಅನಂತಶಯನ, ಛಲ ಹಾಗೂ ಕಠಿಣ ಪರಿಶ್ರಮ ಇಂಥ ಸಾಧನೆಗೆ ಅತ್ಯಗತ್ಯ ಎಂದು ಹೇಳಿದರು.

ಎಂದಿಗೂ ಪುಟ್ಟ ಮಕ್ಕಳು ಇತರರೊಂದಿಗೆ ಜಗಳವಾಡದೇ ಗೆಳೆತನ ಕಾಪಾಡಿಕೊಳ್ಳಿ. ಗೆಳೆತನವೇ ಜೀವನದ ಬಹುದೊಡ್ಡ ಸಂಪತ್ತಾಗಿದೆ ಎಂಬುದನ್ನು ಮರೆಯದಿರಿ ಎಂದು ಪುಟಾಣಿಗಳಿಗೆ ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಪ್ರಾಂಶುಪಾಲೆ ಕೆ.ಎಸ್.ಸುಮಿತ್ರಾ, ವ್ಯವಸ್ಥಾಪಕ ಪಿ.ರವಿ, ಶಿಕ್ಷಕಿಯರಾದ ಟಿ.ಪಿ.ರಮ್ಯ, ಬಿ.ಬಿ.ಭಾರತಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಶಾರ್ವಿ ಭರತ್ ಸ್ವಾಗತಿಸಿ, ಶಿಕ್ಷಕಿ ಎಂ.ಎಂ.ವೀಣಾ ನಿರೂಪಿಸಿ, ಐಶಾನಿ ವಂದಿಸಿದರು. ಯುಕೆಜಿ ವಿದ್ಯಾರ್ಥಿಗಳಿಂದ ಅತ್ಯಾಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು ಮನಸೆಳೆದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net