ವಿದ್ಯಾರ್ಥಿಗಳಿಗೆ ಕಾಡುತ್ತಿದೆ ಕೋವಿಡ್ ಗುಮ್ಮ

17 NRD-3A
Published on

ಗದಗ: ಅಂತಿಮ ವರ್ಷದ ಪದವಿ, ಇಂಜಿನಿಯರಿಂಗ್ ಹಾಗೂ ಡಿಪ್ಲೊಮಾ ವಿದ್ಯಾರ್ಥಿಗಳ ತರಗತಿ ಆರಂಭಕ್ಕೆ ಸರ್ಕಾರ ಹಸಿರು ನಿಶಾನೆ ತೋರಿದರೂ ಮಂಗಳವಾರ ಬಹುತೇಕ ವಿದ್ಯಾರ್ಥಿಗಳು ಕಾಲೇಜ್​ಗೆ ಬರಲು ಹಿಂದೇಟು ಹಾಕಿದರು. ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳು ವಿದ್ಯಾದೇಗುಲದ ಬಳಿ ಕಂಡು ಬಂದರು. ಅವರು ಸಹ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳದೆ ಬಂದಿದ್ದರಿಂದ ಮರಳಿ ಕಳಿಸಲಾಯಿತು.

ಜಿಲ್ಲೆಯಲ್ಲಿ 10 ಅನುದಾನಿತ, 9 ಸರ್ಕಾರಿ ಪದವಿ ಕಾಲೇಜ್​ಗಳಿದ್ದು 12 ಸಾವಿರ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇದರಲ್ಲಿ 3500 ವಿದ್ಯಾರ್ಥಿಗಳು ಪದವಿ ಅಂತಿಮ ವರ್ಷದಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ತೋಂಟದಾರ್ಯ ಇಂಜಿನಿಯರಿಂಗ್, ಹುಲಕೋಟಿ ಇಂಜಿನಿಯರಿಂಗ್ ಕಾಲೇಜ್, ಲಕ್ಷೆ್ಮೕಶ್ವರ ಅಗಡಿ ಇಂಜಿನಿಯರಿಂಗ್ ಸೇರಿ ಒಟ್ಟು 1000ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. 600 ಡಿಪ್ಲೊಮಾ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಸ್ನಾತಕೋತ್ತರ ಕೇಂದ್ರಗಳಲ್ಲಿ 350 ವಿದ್ಯಾರ್ಥಿಗಳಿದ್ದಾರೆ.

ಕೋವಿಡ್ ಬಗ್ಗೆ ಜನರಲ್ಲಿ ಕೊಂಚ ಭಯ ಕಡಿಮೆ ಆಗಿದೆ. ಪಾಲಕರು ಮಕ್ಕಳನ್ನು ಕಾಲೇಜ್​ಗೆ ಕಳಿಸಲು ಮುಂದಾದರೂ ಕರೊನಾ ಟೆಸ್ಟ್ ಮಾಡಿಸಿಕೊಂಡು ವೈದ್ಯಕೀಯ ಪ್ರಮಾಣ ಪತ್ರ ಸಮೇತ ಕಾಲೇಜ್​ಗೆ ಬರಬೇಕು ಎಂದು ಸರ್ಕಾರ ತಿಳಿಸಿದ್ದರಿಂದ ಬಹುತೇಕ ವಿದ್ಯಾರ್ಥಿಗಳು ಕಾಲೇಜ್​ಗೆ ಬರಲು ಹಿಂದೇಟು ಹಾಕಿದರು.

ನ. 17ರಂದು ಆರಂಭವಾದ ಪದವಿ ಅಂತಿಮ ವರ್ಷದ ತರಗತಿಗೆ 100 ವಿದ್ಯಾರ್ಥಿಗಳೂ ಸಹ ಹಾಜರಿಲಿಲ್ಲ. ಕಾಲೇಜ್​ಗೆ ಬಂದವರ ಬಳಿ ಕೋವಿಡ್ ಟೆಸ್ಟ್ ಪ್ರಮಾಣಪತ್ರ ಇರಲಿಲ್ಲ. ಹೀಗಾಗಿ ಮಂಗಳವಾರ ಬಹುತೇಕ ಕಾಲೇಜ್​ಗಳಲ್ಲಿ ತರಗತಿಗಳು ನಡೆಯಲಿಲ್ಲ.

ಸ್ಯಾನಿಟೈಸ್ ಸಮೇತ ಸಿದ್ಧತೆ: ನಗರದ ಸರ್ಕಾರಿ ಪದವಿ ಕಾಲೇಜ್, ಸರ್ಕಾರಿ ಮಹಿಳಾ ಪದವಿ ಕಾಲೇಜ್, ಹುಲಕೋಟಿ, ಮುಳಗುಂದ, ನರಗುಂದ, ರೋಣ, ಮುಂಡರಗಿ, ಶಿರಹಟ್ಟಿ ಸರ್ಕಾರಿ ಪದವಿ ಕಾಲೇಜ್​ಗಳು ಹಾಗೂ ಎಎಸ್​ಎಸ್ ವಾಣಿಜ್ಯ ಮಹಾವಿದ್ಯಾಲಯ, ಕೆಎಸ್​ಎಸ್ ಕಾಲೇಜ್, ಹೊಳೆಆಲೂರ ಕಲ್ಮೇಶ್ವರ ಕಾಲೇಜ್, ಮುಂಡರಗಿ ಅನ್ನದಾನೀಶ್ವರ ಕಾಲೇಜ್ ಸೇರಿ ಅನುದಾನಿತ ಕಾಲೇಜ್​ಗಳಲ್ಲಿ ತರಗತಿಗಳನ್ನು ಆರಂಭಿಸಲು ಉದ್ದೇಶಿಸಿದ್ದ ಕೊಠಡಿಗಳನ್ನು ಸ್ಯಾನಿಟೈಸ್ ಮಾಡಿ ಶುಚಿಗೊಳಿಸಲಾಗಿತ್ತು. ಪರಸ್ಪರ ಅಂತರ ಕಾಪಾಡಲು ಅನುವಾಗುವಂತೆ ಡೆಸ್ಕ್​ಗಳ ವ್ಯವಸ್ಥೆ ಮಾಡಲಾಗಿತ್ತು. ಕಾಲೇಜ್​ಗೆ ಬರುವ ವಿದ್ಯಾರ್ಥಿಗಳು ಕೋವಿಡ್ ತಪಾಸಣೆ ಪ್ರಮಾಣಪತ್ರ ಮತ್ತು ಪೋಷಕರ ಅನುಮತಿ ಪತ್ರ ತರಬೇಕು ಎಂದು ಸರ್ಕಾರ ಸೂಚನೆ ನೀಡಿದ್ದರಿಂದ ಈ ಎಲ್ಲ ದಾಖಲೆಗಳನ್ನು ಪರಿಶೀಲಿಸಲು ಕಾಲೇಜ್​ನ ಗೇಟ್ ಬಳಿ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ಮೂರು ದಿನ ದೀಪಾವಳಿ ರಜೆ ಇದ್ದುದರಿಂದ ಅನೇಕ ಕಾಲೇಜ್​ಗಳ ಸಿಬ್ಬಂದಿ ಮತ್ತು ಅಧ್ಯಾಪಕ ವೃಂದ ಮಂಗಳವಾರ ಕೋವಿಡ್ ಪರೀಕ್ಷೆ ಮಾಡಿಸಿಕೊಂಡರು. ಹೆಚ್ಚು ವಿದ್ಯಾರ್ಥಿಗಳ ಸಂಖ್ಯೆ ಹೊಂದಿರುವ ಕಾಲೇಜ್​ಗಳಿಗೆ ಆರೋಗ್ಯ ಇಲಾಖೆ ತಂಡ ಆಗಮಿಸಿ ಕಾಲೇಜ್ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳ ಗಂಟಲ ದ್ರವದ ಮಾದರಿ ಪಡೆದು ಜಿಲ್ಲಾಸ್ಪತ್ರೆಗೆ ಕಳಿಸಿಕೊಟ್ಟಿತು.

ಮೊದಲೇ ಸೂಚನೆ ನೀಡಬೇಕಿತ್ತು...

ಕಾಲೇಜ್​ಗಳ ಆರಂಭಕ್ಕೆ ಸಂಬಂಧಿಸಿದಂತೆ ಕಾಲೇಜ್ ಉಪನ್ಯಾಸಕರು ಸೇರಿ ಇತರೆ ಸಿಬ್ಬಂದಿ ಕರೊನಾ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಸರ್ಕಾರ ಮಾರ್ಗಸೂಚಿ ಹೊರಡಿಸಿದೆ. ಅದರಂತೆ ಜಿಲ್ಲೆಯ ಬಹುತೇಕ ಕಾಲೇಜ್​ಗಳ ಸಿಬ್ಬಂದಿ ತಪಾಸಣೆಗೆ ಒಳಗಾಗಿದ್ದಾರೆ. ಇದರಲ್ಲಿ ಕೆಲವರ ವೈದ್ಯಕೀಯ ವರದಿ ಬಂದಿದ್ದು, ಅನೇಕರ ವರದಿ ಬರಬೇಕಿದೆ. ಕೋವಿಡ್ ಪರೀಕ್ಷೆಗಾಗಿ ತೆಗೆದುಕೊಳ್ಳುವ ಸ್ಯಾಂಪಲ್ ಅನ್ನು ಜಿಲ್ಲಾಸ್ಪತ್ರೆಯಲ್ಲಿರುವ ಆರ್​ಟಿಪಿಸಿಆರ್ ಪ್ರಯೋಗಾಲಯದಲ್ಲಿಯೇ ಪರೀಕ್ಷೆ ಮಾಡಬೇಕಿದ್ದು, ಜಿಲ್ಲೆಯ ಎಲ್ಲ ಸಿಬ್ಬಂದಿಯ ಸ್ಯಾಂಪಲ್ ಅನ್ನು ಏಕಕಾಲಕ್ಕೆ ಪರೀಕ್ಷೆ ಮಾಡಲು ಸಾಧ್ಯವಿಲ್ಲ. ಒಂದು ಸಲಕ್ಕೆ 100-150 ಸ್ಯಾಂಪಲ್ ಪರೀಕ್ಷೆ ಮಾಡಲಾಗುತ್ತಿದೆ. ದಿನಕ್ಕೆ ಮೂರು ಶಿಫ್ಟ್​ಗಳಲ್ಲಿ ಗಂಟಲದ್ರವ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದ್ದು, ಪ್ರತಿ ದಿನಕ್ಕೆ 300-450 ಕರೊನಾ ಸ್ಯಾಂಪಲ್​ಗಳನ್ನು ಪರೀಕ್ಷೆ ಮಾಡಬಹುದು. ಒಂದು ಸ್ಯಾಂಪಲ್​ನ ವೈದ್ಯಕೀಯ ವರದಿಗಾಗಿ 72 ಗಂಟೆ ಕಾಯಬೇಕಿದೆ. ಆದ್ದರಿಂದ ಸರ್ಕಾರ ಈ ಕುರಿತು ಮೊದಲೇ ವಿದ್ಯಾರ್ಥಿಗಳಿಗೆ ಸೂಚನೆ ನೀಡಬೇಕಿತ್ತು. ಸಮಯಾವಕಾಶ ನೀಡಿ ತರಗತಿ ಆರಂಭಿಸಬೇಕಿತ್ತು ಎಂದು ವಿದ್ಯಾರ್ಥಿಗಳ ಪೋಷಕರು ಹೇಳಿದರು.

ಮಂಗಳವಾರದಿಂದ ಪದವಿ ಅಂತಿಮ ವರ್ಷದ ತರಗತಿ ಆರಂಭಿಸಲು ಸೂಚನೆ ನೀಡಿದ್ದರಿಂದ ಜಿಲ್ಲೆಯ ಸರ್ಕಾರಿ ಹಾಗೂ ಅನುದಾನಿತ ಪದವಿ ಕಾಲೇಜ್​ಗಳಲ್ಲಿ ಕೊಠಡಿಗಳ ಸ್ಯಾನಿಟೈಸ್ ಮಾಡಲಾಗಿತ್ತು. ಅಲ್ಲದೆ, ಪ್ರತಿ ಕಾಲೇಜ್​ನಲ್ಲಿ ಎನ್​ಎಸ್​ಎಸ್, ಎನ್​ಸಿಸಿ, ಸ್ಕೌಟ್ ಮತ್ತು ಗೈಡ್ಸ್ ಅಧ್ಯಾಪಕರನ್ನೊಳಗೊಂಡ ಟಾಸ್ಕ್ ಫೋರ್ಸ್ ಸಮಿತಿ ರಚಿಸಲಾಗಿದ್ದು, ವಿದ್ಯಾರ್ಥಿಗಳ ಸುರಕ್ಷತೆಗೆ ಕ್ರಮ ಕೈಗೊಳ್ಳಲಾಗಿದೆ. ಆದರೆ, ಮಂಗಳವಾರ ಕಡಿಮೆ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಕಾಲೇಜ್​ಗೆ ಹಾಜರಾಗಿದ್ದು, ನಿಧಾನವಾಗಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಲಿದೆ. ಕಾಲೇಜ್ ಆರಂಭಕ್ಕೆ ಸರ್ಕಾರ ಸೂಚಿಸಿದ ಮಾರ್ಗಸೂಚಿಗಳ ಪಟ್ಟಿಯನ್ನೇ ಪ್ರತಿ ವಿದ್ಯಾರ್ಥಿಗಳ ವಾಟ್ಸ್ ಆಪ್ ನಂಬರ್​ಗೆ ರವಾನಿಸಿ ತಿಳಿಸಲಾಗಿತ್ತು. | ಎಸ್.ಎಫ್. ಸಿದ್ನೆಕೊಪ್ಪ, ಪ್ರಾಚಾರ್ಯ, ಸರ್ಕಾರಿ ಪದವಿ ಕಾಲೇಜ್ ಗದಗ (ಲೀಡ್ ಕಾಲೇಜ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net